ಪ್ರತಿಯೊಬ್ಬ ಭಾರತೀಯ ವೀರ ಯೋಧರನ್ನು ಸ್ಮರಿಸಬೇಕಿದೆ: ವಿಶ್ವಾಸ ವೈದ್ಯ
ಸವದತ್ತಿ 28: ದೇಶಕ್ಕಾಗಿ ತಮ್ಮ ಜೀವನವನ್ನೆ ಪಣಕ್ಕಿಟ್ಟು ಪ್ರಾಣವನ್ನು ತ್ಯಾಗ ಮಾಡಿದಂತ ವೀರ ಯೋಧರ ಸ್ಮರಣೆಯನ್ನು ನಾವು ಮಾಡಬೇಕಿದ್ದು, ಕಾರ್ಗಿಲ್ ವಿಜಯಕ್ಕಾಗಿ ಶ್ರಮಿಸಿದಂತ ಪ್ರತಿಯೊಬ್ಬ ಯೋಧರಿಗೆ ನಾವು ಸಲಾಮ್ ಹೇಳಬೇಕೆಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಪಟ್ಟಣದ ಕರೀಕಟ್ಟಿ ರಸ್ತೆಯ ನಿಕ್ಕಂ ಕಲ್ಯಾಣ ಮಂಟಪದಲ್ಲಿ 24ನೇ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯೋಧನಾಗಿ ನನಗೂ ದೇಶ ಸೇವೆಯನ್ನು ಮಾಡಬೇಕೆಂಬ ಆಸೆಯಿತ್ತು. ಆದರೆ ಆ ಅವಕಾಶ ನನಗೆ ಸಿಗದೆ ಹೋದರೂ ಸಹಿತ ಮತಕ್ಷೇತ್ರದ ಜನರ ಆಶೀರ್ವಾದದಿಂದ ನಾನು ಶಾಸಕನಾಗಿ ಸಮಾಜ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ ಎಂದರು.
ವಿರುಪಾಕ್ಷ ಮಾಮನಿ ಮಾತನಾಡಿ, ದೇಶದ ರಕ್ಷಣೆಗಾಗಿ ಕರ್ತವ್ಯವನ್ನು ನಿರ್ವಹಿಸಿ ನಿವೃತ್ತರಾದ ಸೈನಿಕರಿಗೆ ಸಮಾಜದಲ್ಲಿ ಸೂಕ್ತ ಸೌಲಭ್ಯಗಳನ್ನು ಒದಗಿಸುವ ಕಾರ್ಯ ನಡೆಯಬೇಕಿದೆ ಎಂದರು. ಸೈನಿಕರಿಗೆ ಸರಕಾರವು ನೀಡುವಂತ ಸೌಲಭ್ಯಗಳ ಜೊತೆಗೆ ಸಾರ್ವಜನಿಕವಲಯದಲ್ಲಿ ಅವರಿಗೆ ಅವಶ್ಯಕ ಸೌಕರ್ಯಗಳನ್ನು ಒದಗಿಸುವ ಕಾರ್ಯಗಳು ನಡೆಯಬೇಕೆಂದರು.
ನ್ಯಾಯವಾದಿ ಬಿ.ವಿ.ಮಲಗೌಡರ ಮಾತನಾಡಿ, ಕಾರ್ಗಿಲ್ ಯುದ್ದದಲ್ಲಿ ಸವದತ್ತಿ ತಾಲೂಕಿನ ಇಬ್ಬರು ಯೋಧರನ್ನು ನಾವು ಕಳೆದುಕೊಂಡಿದ್ದು, ಅಸುಂಡಿಯ ಮಡಿವಾಳಪ್ಪ ಹಡಪದ ಹಾಗೂ ಸಿಂಗಾರಗೊಪ್ಪ ಗ್ರಾಮದ ಈರ್ಪ ಸವದತ್ತಿ ಸೇರಿದಂತೆ ದೇಶದಲ್ಲಿ ಒಟ್ಟು 527 ಯೋಧರನ್ನು ಕಾರ್ಗಿಲ್ ಯುದ್ದದಲ್ಲಿ ಅಂದು ನಾವು ಕಳೆದುಕೊಂಡಿರುವುದು ದುಃಖಕರ ಸಂಗತಿ ಎಂದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಯೋಧರಿಗೆ ನಾವಿಂದು ಸ್ಮರಣೆಯ ಜೊತೆಗೆ ಅವರ ಕುಟುಂಬ ರಕ್ಷಣೆಗೆ ಸಹಕಾರಿಯಾಗಬೇಕೆಂದರು.
ನಿವೃತ್ತ ಯೋಧ ಹಾಗೂ ಶಿಕ್ಷಕರಾದ ರಮೇಶ ಪೂಜೇರಿಯವರ ನೇತೃತ್ವದಲ್ಲಿ ಶಾಲಾ ಮಕ್ಕಳಿಗೆ ಯೋಧರ ಸಮವಸ್ತ್ರದೊಂದಿಗೆ ನಡೆದ ಕಾರ್ಗಿಲ್ ಯುದ್ದದ ಪ್ರಾತ್ಯಕ್ಷಿಕೆಯು ಜನರನ್ನು ಆಕರ್ಷಣೆಗೊಳಿಸಿತು. ಹುತಾತ್ಮ ಯೋಧರಿಗೆ ಶಾಲಾ ವಿದ್ಯಾರ್ಥಿಗಳಿಂದ ಸೈನ್ಯ ಪದ್ದತಿಯಂತೆ ರೀತ್ ಪರೇಡ ಮಾಡಿ ನಮನಿಸಲಾಯಿತು.
ಸಿಪಿಐ ಕರುಣೇಶಗೌಡ, ವರ್ಷಾ ಗಾಂವಕರ, ಎಸ್.ಕೆ.ಪೋಟೆ, ಉಮೇಶ ನರಗುಂದ, ಮಡಿವಾಳಪ್ಪ ದೂಪದಾಳ, ನಾಗಪ್ಪ ಬಡಿಗೇರ, ಮಲ್ಲಿಕಾರ್ಜುನ ವಣ್ಣೂರ, ಕರೀಮ್ಸಾಬ ನದಾಫ ಇತರರು ಉಪಸ್ಥಿತರಿದ್ದರು.