ಒಂದು ವರ್ಷದಲ್ಲಿ ಟ್ರಕ್ ಟರ್ಮಿನಲ್ ಸ್ಥಾಪನೆ: ವೀರಯ್ಯ
ಹೊಸಪೇಟೆ (ವಿಜಯನಗರ) 08: ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ ಅಧ್ಯಕ್ಷರಾದ ಡಿ.ಎಸ್.ವೀರಯ್ಯ ಅವರು ವಿಜಯನಗರ ಜಿಲ್ಲೆಯ ಹೊಸಪೇಟೆ ಸಮೀಪದ ಅಮರಾವತಿ ಬಳಿ 37 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಟ್ರಕ್ ಟರ್ಮಿನಲ್ನ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರೀಶೀಲನೆ ನಡೆಸಿದರು.ಅಧಿಕಾರಿಗಳು ಮತ್ತು ಗುತ್ತಿಗೆದಾರರು ಇದ್ದರು.
ಪರೀಶೀಲನೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ಎಂಜನಿಯರ್ಗಳು ಹಾಗೂ ಗುತ್ತಿಗೆದಾರರಿಗೆ ನೀಡಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅಧ್ಯಕ್ಷ ಡಿ.ಎಸ್.ವೀರಯ್ಯ ಅವರು ವಿಜಯನಗರ ಜಿಲ್ಲೆಯ ಹೊಸಪೇಟೆಯ ಅಮರಾವತಿಯಲ್ಲಿ 37.82ಎಕರೆ ಪ್ರದೇಶದಲ್ಲಿ ಸುಸಜ್ಜಿತವಾದ ಟ್ರಕ್ ಟರ್ಮಿನಲ್ ನಿರ್ಮಾಣವಾಗುತ್ತಿದ್ದು, ಅದರಲ್ಲಿ ಮೊದಲನೇ ಹಂತವಾಗಿ 18ಎಕರೆ ಪ್ರದೇಶದಲ್ಲಿ ರೂ.35ಕೋಟಿ ವೆಚ್ಚದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದರು.
ಈ ಟ್ರಕ್ ಟರ್ಮಿನಲ್ನಲ್ಲಿ ಒಟ್ಟು 6 ಪಾರ್ಕಿಂಗ್ ಸ್ಥಳಗಳೊಳಗೊಂಡಂತೆ 300 ಟ್ರಕ್/ಲಾರಿಗಳು ನಿಲ್ಲಲು ವ್ಯವಸ್ಥೆ, ತಂಗುದಾಣ, ಶೌಚಾಲಯ ನಿರ್ಮಾಣ, ಸ್ನಾನ ಗೃಹ, ಕುಡಿಯುವ ನೀರಿನ ವ್ಯವಸ್ಥೆ, ಸರಕುಗಳ ದಾಸ್ತಾನು ಗೋಡನ್ ಸೇರಿದಂತೆ ವಿವಿಧ ವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ ಎಂದು ಅವರು ತಿಳಿಸಿದರು.
ಸದರಿ ಕಾಮಗಾರಿಯನ್ನು ಬೆಂಗಳೂರಿನ ಮೆ.ಎಸ್.ಆರ್.ಕನ್ಸ್ಟ್ರಕ್ಷನ್ ಕಂಪನಿಗೆ ನೀಡಲಾಗಿದ್ದು, ಕಾಮಗಾರಿಯನ್ನು ಒಂದು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
1995ರಿಂದಲೇ ಬೆಂಗಳೂರು-ಯಶವಂತಪುರ, ಮೈಸೂರು-ನಂಜನಗೂಡು ರಿಂಗ್ ರಸ್ತೆಯಲ್ಲಿ, ಧಾರವಾಡ, ಬೆಂಗಳೂರಿನ ದಾಸನಾಪುರದಲ್ಲಿ ಟರ್ಕ್ ಟರ್ಮಿನಲ್ ಬಳಕೆಯಲ್ಲಿದ್ದು, ಈಗ ಹೋಸಪೇಟೆಯ ಅಮರಾವತಿಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಹುಬ್ಬಳ್ಳಿಯಲ್ಲಿ 56 ಎಕರೆ ಹಾಗೂ ದಾಂಡೇಲಿಯಲ್ಲಿ 3ಎಕರೆ ಪ್ರದೇಶದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.
ಈ ಟ್ರಕ್ ಟರ್ಮಿನಲ್ಗಳ ನಿರ್ಮಾಣದಿಂದ ಹೊರ ವಲಯಗಳಲ್ಲಿ ಲಾರಿ/ಟ್ರಕ್ಗಳ ನಿರ್ವಹಣೆದಾರರಿಗೆ ತಂಗುದಾಣ, ಸರಕುಗಳನ್ನು ಏರಿಳಿಸುವ ವ್ಯವಸ್ಥೆ, ವಾಹನ ದಟ್ಟಣೆ, ಅಪಘಾತಗಳು ಹಾಗೂ ವಾಯುಮಾಲಿನ್ಯವನ್ನು ಕಡಿಮೆ ಮಾಡಬಹುದು ಎಂದು ಹೇಳಿದರು.
ದಾರಿ ಬದಿಯ ಸೌಕರ್ಯಗಳು: ಸರ್ಕಾರವು 2022-23ನೇ ಬಜೆಟ್ನಲ್ಲಿ ದಾರಿ ಬದಿಯ ಸೌಕರ್ಯಗಳು ಎಂಬ ಯೋಜನೆಯನ್ನು ಘೋಷಿಸಿದ್ದು, ಡಿ.ದೇವರಾಜ್ ಅರಸ್ ಟ್ರಕ್ ಟರ್ಮಿನಲ್ಸ್ ಲಿಮಿಟೆಡ್ ವತಿಯಿಂದ ಮೊದಲ ಹಂತವಾಗಿ ಹೊಸಪೇಟೆ ಮತ್ತು ನಂಜನಗೂಡುಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ಹೊಸಪೇಟೆಯ ಅಮರಾವತಿಯಲ್ಲಿ ಹೆದ್ದಾರಿ ಪಕ್ಕದಲ್ಲಿರುವ 1.84ಎಕರೆ ಪ್ರದೇಶದಲ್ಲಿ ದಾರಿ ಬದಿಯ ಸೌಕರ್ಯಗಳಾದ ಶೌಚಾಲಯ, ಸ್ನಾನಗೃಹ, ವಿಶ್ರಾಂತಿ ಕೊಠಡಿ, ಎಲೆಕ್ಟ್ರಿಕ್ ಚಾಜಿಂರ್ಗ್ ಸ್ಟೇಷನ್, ಪೆಟ್ರೋಲ್ ಬಂಕ್, ಆರೋಗ್ಯ ಕೇಂದ್ರ, ವಾಹನ ರಿಪೇರಿ ವರ್ಕಶಾಪ್ ಮತ್ತು ಕ್ಯಾಂಟೀನ್ ಹೀಗೆ ಇತರೆ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದು ಅವರು ತಿಳಿಸಿದರು.
ರಾಜ್ಯದ ಪ್ರಮುಖ ರಸ್ತೆಗಳಾದ ಚಿತ್ರದುರ್ಗ ಬೈಪಾಸ್, ಹೊಸಪೇಟೆ ಮತ್ತು ವಿಜಯಪುರ ಮಧ್ಯಭಾಗದಲ್ಲಿ, ಹುಮನಾಬಾದ್, ಹಾಸನ ಮತ್ತು ಮಂಗಳೂರಿನ ಮಧ್ಯಭಾಗದಲ್ಲಿ, ಹುಬ್ಬಳ್ಳಿ ಮತ್ತು ಹಾವೇರಿ ಮಧ್ಯಭಾಗದಲ್ಲಿ, ಹೊಸಪೇಟೆಯ ಅಮರಾವತಿ, ಬಾಗಲಕೋಟೆ ಮತ್ತು ರಾಯಚೂರು ರಸ್ತೆ ಜಂಕ್ಷನ್, ನೆಲಮಂಗಲ ಮತ್ತು ಕುಣಿಗಲ್ ರಸ್ತೆ(ಬೆಂಗಳೂರಿನ ಕಡೆಗೆ), ಮಂಗಳೂರು ಮತ್ತು ಶಿವಮೊಗ್ಗ ಮಧ್ಯಭಾಗದಲ್ಲಿ, ಮಂಗಳೂರು ಮತ್ತು ಉಡುಪಿ ಜಿಲ್ಲೆಗಳ ಮಧ್ಯಭಾಗದಲ್ಲಿ ದಾರಿಬದಿಯ ಸೌಕರ್ಯಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಲಾರಿ ಟ್ರಾನ್ಸ್ಪೋರ್ಟ್ ಅಸೋಷಿಯೇಷನ್ನ ಸೆಕ್ರೆಟ್ರಿ ರಾಮಣ್ಣ ಆಚಾರ್ ಹಾಗೂ ಜಂಟಿ ಸೆಕ್ರೆಟ್ರಿ ಸೈಯದ್ ನಾಸಿರ್, ಸದಸ್ಯರಾದ ರಮೇಶ್ಕುಮಾರ್, ವಿ.ವೆಂಕೋಬ, ಚಂದ್ರಕಾತ್ ಕಾಮತ್ ಮತ್ತು ಅಲ್ಲಭಕ್ಷಿ ಇದ್ದರು.