ಬಾಲ್ಯ ವಿವಾಹ ನಿಷೇಧ ಪ್ರಬಂಧ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ
ಯಮಕನಮರಡಿ 18 : ಮಹಿಳಾ ಕಲ್ಯಾಣ ಸಂಸ್ಥೆ, ಬೆಳಗಾವಿ, ಶಕ್ತಿ ಸದನ ಪುನರ್ವಸತಿ ಕೇಂದ್ರ, ಹಿಡಕಲ್ ಡ್ಯಾಂ ಹಾಗೂ ಕರ್ನಾಟಕ ಪಬ್ಲಿಕ್ ಶಾಲೆ, ಯರಗಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ ಬಾಲ್ಯ ವಿವಾಹ ತಡೆ ಹಾಗೂ ಪೋಕ್ಸೊ ಕಾಯ್ದೆ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಸ್ನೇಹಾ ಗಾಣಗಿ ಪ್ರಥಮ, ಕುಮಾರಿ ಕೃಷಿ ಒಡೆಯರ್ ದ್ವಿತೀಯ ಹಾಗೂ ಕುಮಾರಿ ಸ್ನೇಹಲ ಧಗಾಟಿ ತೃತೀಯ ಸ್ಥಾನ ಪಡೆದರು. ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಕಿರಣ್ ಚೌಗಲಾ ಮಾತನಾಡಿ, ಬಾಲ್ಯ ವಿವಾಹವು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ವಿದ್ಯಾರ್ಥಿಗಳು ಬಾಲ್ಯ ವಿವಾಹದ ದುಷ್ಪರಿಣಾಮಗಳು ಹಾಗೂ ಮಕ್ಕಳ ರಕ್ಷಣೆಗೆ ಇರುವ ಕಾನೂನುಗಳ ಕುರಿತು ತಿಳಿದುಕೊಂಡು ಕುಟುಂಬ ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು. ಉಪ ಪ್ರಾಂಶುಪಾಲೆ ಎ.ಆರ್. ಮಠಪತಿ ಅವರು ಬಾಲ್ಯ ವಿವಾಹ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಹಾಗೂ ಸಮುದಾಯದ ಪಾತ್ರದ ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ಪ್ರಭಾ ಘಸ್ತಿ, ಗೀತಾ, ಆರ್.ಆರ್. ಘಸ್ತಿ, ಉಪನ್ಯಾಸಕರಾದ ಸುಪ್ರಿಯಾ ನಾಯಕ್ ಹಾಗೂ ಧನಶ್ರೀ ಜುಮ್ಮಾಯಿ ಉಪಸ್ಥಿತರಿದ್ದರು.