ರಾಷ್ಟ್ರೀಯ

ಸಿದ್ದರಾಮಯ್ಯ ವರ್ತನೆಯಿಂದಲೇ ಕಾಂಗ್ರೆಸ್ ನೆಲಕಚ್ಚಿದೆ: ಈಶ್ವರಪ್ಪ

ಸಿದ್ದರಾಮಯ್ಯ ವರ್ತನೆಯಿಂದಲೇ ಕಾಂಗ್ರೆಸ್ ನೆಲಕಚ್ಚಿದೆ: ಈಶ್ವರಪ್ಪ

ಕಲಬುರಗಿ, ಅಕ್ಟೋಬರ್.7:ರಾಜ್ಯದಲ್ಲಿ ನಡೆಯಲಿರುವ ವಿಧಾನಪರಿಷತ್ ಶಿಕ್ಷಕರ ಮತಕ್ಷೇತ್ರದ ‌ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಶಾಲಿಯಾಗಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಅಭ್ಯರ್ಥಿ ಶಶೀಲ್ ನಮೋಶಿ ಅವರ ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಶಶೀಲ್ ನಮೋಶಿ ಅವರು ಆಕಸ್ಮಿಕವಾಗಿ ಸೋಲುಂಡರು. ಪ್ರಸ್ತುತ ಒಂಭತ್ತು ಜನ ಶಾಸಕರು ಸೇರಿದಂತೆ ಇಬ್ಬರೂ ವಿಧಾನಪರಿಷತ್ ಸದಸ್ಯರು ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಹೀಗಾಗಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲಿದ್ದಾರೆ ಎಂದರು.

 ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ ಪಕ್ಷದ ಅಧ್ಯಕ್ಷ ‌ನಳಿನ್ ಕುಮಾರ್ ‌ಕಟೀಲ್, ತಮ್ಮನ್ನು ಸೇರಿ ಸಚಿವೆ ಶಶಿಕಲಾ ಜೊಲ್ಲೆ, ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರನ್ನು ನೇಮಕಮಾಡಿದ್ದಾರೆ ಎಂದರು.

ಮುಂದಿನ ಬುಧವಾರ ಮತ್ತೆ ಜಿಲ್ಲೆಗೆ ಭೇಟಿ ನೀಡಿ ಚುನಾವಣಾ ‌ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದೇನೆ ಎಂದರು.

ಬಿಜೆಪಿ ನಾಯಕರ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕವಚನ ಪ್ರಯೋಗ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವರು, ಸಿದ್ದರಾಮಯ್ಯ ಮಾತು ಅವರ ನಾಲಿಗೆಯ ಸಂಸ್ಕೃತಿ ಏನೂ ಎಂಬುದು ತೋರಿಸುತ್ತದೆ‌ ಎಂದರು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಸಂಸದ ತೇಜಸ್ವಿ ಸೂರ್ಯ ಬಗ್ಗೆ ಆಡಿರುವ ಮಾತು ಗೊತ್ತಿದೆ ಎಂದ ಅವರು ಸಿದ್ದರಾಮಯ್ಯ ವರ್ತನೆಯಿಂದಲೇ ಕಾಂಗ್ರೆಸ್ ನೆಲಕಚ್ಚಿದೆ ಎಂದು ದೂರಿದರು.

ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೀನಾಯ ಸೋಲು ಕಂಡು ಹುದ್ದೆಯಿಂದ ಕೆಳಗಿಳಿದು ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ಕುಳಿತಿದ್ದಾರೆ.‌ ಈಗಲಾದರೂ ಸಿದ್ಧರಾಮಯ್ಯ ಅವರು ಬುದ್ಧಿ ಕಲಿಯಬೇಕು ಎಂದರು.

ಸಿದ್ದರಾಮಯ್ಯ ಅವರ ವರ್ತನೆ ಹೀಗೆಯೇ ಮುಂದುವರಿದರೆ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ನೆಲ ಕಚ್ಚುತ್ತದೆ ಎಂದು ಅವರು ಹೇಳಿದರು.

ಸುದ್ದಿ ಓದಿ