ನೀತಿ ಸಂಹಿತೆ ಜಾರಿ, ಕಟ್ಟು ನಿಟ್ಟಿನ ಕ್ರಮ: ಡಾ.ರಾಜೀವ ಕೋಲೇರ
ಸವದತ್ತಿ 30: ಒಂದೆ ಹಂತದಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯನ್ನು ನಡೆಸಲಾಗುತ್ತಿರುವದರಿಂದ ಸವದತ್ತಿ ಯಲ್ಲಮ್ಮಾ ಮತಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಎಲ್ಲ ರೀತಿಯಾಗಿ ಕಟ್ಟು ನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಚುನಾವಣಾಧಿಕಾರಿ ಡಾ.ರಾಜೀವ ಕೋಲೇರ ಹೇಳಿದರು.
ಇಲ್ಲಿನ ಮಿನಿವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಇನಾಂಹೊಂಗಲ, ಯರಗಟ್ಟಿ, ಆಚಮಟ್ಟಿ ಸೇರಿದಂತೆ 3 ಕಡೆಗೆ ಚೆಕ್ಪೋಸ್ಟ್ಗಳನ್ನು ಹಾಕಲಾಗಿದೆ ಎಂದರು. 9 ಜನ ಪ್ಲೈಯಿಂಗ್ ಸ್ಕಾಡ್, 15 ಜನ ಸೆಕ್ಟರ್ ಅಧಿಕಾರಿಗಳು ಕಾರ್ಯನಿರ್ವಹಿಸತ್ತಿದ್ದು, ನೀತಿ ಸಂಹಿತೆ ಜಾರಿ ಇರುವದರಿಂದ ಇದರ ಉಲ್ಲಂಘನೆಯಾಗದಂತೆ ಎಲ್ಲಡೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಹಾಗೇನಾದರೂ ಉಲ್ಲಂಘನೆಯಾದಲ್ಲಿ ಅಂಥವರ ಮೇಲೆ ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲಿಸಲಾಗುತ್ತಿದೆ ಎಂದರು.
ಮತಕ್ಷೇತ್ರದಲ್ಲಿ ಒಟ್ಟು 232 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 98164 ಪುರುಷರು ಹಾಗೂ 97073 ಮಹಿಳಾ ಮತ್ತು ಇತರೆ 2 ಮತದಾರರು ಸೇರಿದಂತೆ ಒಟ್ಟು 195239 ಸವದತ್ತಿ ಯಲ್ಲಮ್ಮಾ ಮತಕ್ಷೇತ್ರದಲ್ಲಿದ್ದಾರೆ ಎಂದರು. ಏ.13ರಿಂದ ನಾಮಪತ್ರ ಸಲ್ಲಿಕೆ ಕಾರ್ಯ ಪ್ರಾರಂಭಗೊಳ್ಳಲಿದ್ದು, ಏ.20 ಕೊನೆಯ ದಿನವಾಗಿದೆ. ಏ.21 ನಾಮಪತ್ರ ಪರೀಶೀಲನೆ, ಏ.24 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ.10ರಂದು ಮತದಾನ ಮತ್ತು ಮೇ.13ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಮತದಾರರು ಸಹಕಾರ ನೀಡಬೇಕೆಂದರು.
ತಹಸೀಲ್ದಾರ ಜೆ.ಬಿ.ಜಕ್ಕನಗೌಡರ, ಉಪ ತಹಸೀಲ್ದಾರ ಶಶಿರಾಜ ವನಕಿ ಉಪಸ್ಥಿತರಿದ್ದರು.