ಜಮ್ಮು-ಕಾಶ್ಮೀರದಲ್ಲಿ 48 ಗಂಟೆಗಳ ಲಾಕ್‌ಡೌನ್ ಅಂತ್ಯ: ಸಹಜಸ್ಥಿತಿಯತ್ತ ಕಣಿವೆ ರಾಜ್ಯ
ಶ್ರೀನಗರ, ಆಗಸ್ಟ್ 24: ಕೊರೊನಾ ಸೋಂಕು ನಿಯಂತ್ರಿಸಲು ಜಾರಿಗೊಳಿಸಲಾಗಿದ್ದ 48 ಗಂಟೆಗಳ ಲಾಕ್‌ಡೌನ್ ಕಳೆದ ರಾತ್ರಿಗೆ ಮುಕ್ತಾಯಗೊಂಡಿದ್ದು, ಸೋಮವಾರ ಕೇಂದ್ರ ಕಾಶ್ಮೀರದ ಗಂದರ್‌ಬಾಲ್ ನಲ್ಲಿ ಜನಜೀವನ ಸಹಜ ಸ್ಥಿತಿಗೆ ಬಂದಿದೆ. ಗಂದೇರ್‌ಬಾಲ್‌ನಲ್ಲಿ ಭಾನುವಾರ ಹೊಸದಾಗಿ 33, ಶನಿವಾರ 34 ಪ್ರಕರಣ ವರದಿಯಾಗಿತ್ತು.
ಶನಿವಾರ ಬೆಳಿಗ್ಗೆಯಿಂದ 48 ಗಂಟೆಗಳ ಕಾಲ ಹೊಸ ಲಾಕ್‌ಡೌನ್ ಹೇರಿದಾಗ, ಆಗಸ್ಟ್ 21 ರಂದು ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕೇವಲ 16 ಇತ್ತು.
ಗಂದರ್‌ಬಾಲ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಖಲೀಲ್ ಪೋಸ್ವಾಲ್ ಅವರು ಆಗಸ್ಟ್ 21 ರ ಸಂಜೆ, ಕೋವಿಡ್ -19 ಸೋಂಕು ನಿಯಂತ್ರಿಸಲು ಗಂದರ್‌ಬಾಲ್ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆಯಿಂದ 48 ಗಂಟೆಗಳ ಕಾಲ ಲಾಕ್‌ಡೌನ್ ವಿಧಿಸಲಾಗಿದ್ದು, ಈ ಸಂದರ್ಭದಲ್ಲಿ ಯಾವುದೇ ಸಭೆ ನಡೆಸಲು ಅವಕಾಶವಿಲ್ಲ. ವ್ಯಾಪಾರ ಸಂಸ್ಥೆಗಳು ಮುಚ್ಚಲ್ಪಡುತ್ತವೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕೋರಿದ್ದರು.
ಗಂದರ್‌ಬಾಲ್ ಜಿಲ್ಲೆಯಲ್ಲಿ ಆಗಸ್ಟ್ 17 ರಿಂದ 19 ರವರೆಗೆ ಇದೇ ರೀತಿಯ ಮೂರು ದಿನಗಳ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಅಲ್ಲಿಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಆಗಸ್ಟ್ 18 ರಂದು ಭೇಟಿ ನೀಡಿ ದಿನವಿಡೀ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅಭಿವೃದ್ಧಿ ಯೋಜನೆಗಳು ಮತ್ತು ಇತರ ಆಡಳಿತಾತ್ಮಕ ವಿಷಯಗಳ ಬಗ್ಗೆ ಚರ್ಚಿಸಿದ್ದರು.
ಕೊರೊನಾ ಸೋಂಕು ಮತ್ತಷ್ಟು ಹರಡುವುದನ್ನು ತಡೆಗಟ್ಟಲು ಜಿಲ್ಲೆಯಲ್ಲಿ ಸೆಕ್ಷನ್ 144 ಸಿಆರ್‌ಪಿಸಿ ಅಡಿಯಲ್ಲಿ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಗಂದರ್‌ಬಾಲ್ ಜಿಲ್ಲಾಧಿಕಾರಿ ಹೇಳಿದ್ದಾರೆ.
ಆದಾಗ್ಯೂ, ಹೊಸ ಲಾಕ್‌ಡೌನ್ ಅನ್ನು ಗಂದರ್‌ಬಾಲ್ ನಿವಾಸಿಗಳು ವಿರೋಧಿಸಿದ್ದು, ಹೊಸ ನಿರ್ಬಂಧಗಳನ್ನು ಹೇರಲು ಯಾವುದೇ ಸಮರ್ಥನೆ ಇಲ್ಲ, ದಿನಗೂಲಿ ಕಾರ್ಮಿಕರು, ವ್ಯಾಪಾರಸ್ಥರು ಮತ್ತು ಈಗಾಗಲೇ ದೊಡ್ಡ ನಷ್ಟವನ್ನು ಅನುಭವಿಸಿದ ಸಾರಿಗೆ ವಲಯದಲ್ಲಿರುವವರು ಇದರಿಂದ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಭದ್ರತಾ ಪಡೆಗಳು ಇಂದು ಬೆಳಿಗ್ಗೆ ಜಿಲ್ಲೆಯ ಬಹತೇಕ ರಸ್ತೆ ತಡೆ ಮತ್ತು ಬ್ಯಾರಿಕೇಡ್‌ಗಳನ್ನು ತೆಗೆದುಹಾಕಿವೆ. ಆದಾಗ್ಯೂ, ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯನ್ನು ತಡೆಗಟ್ಟಲು ಭದ್ರತಾ ಪಡೆ ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಧಿಕಾರಿಗಳು ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಜಿಲ್ಲೆಯಲ್ಲಿ ಅಂಗಡಿಗಳು ಮತ್ತು ವ್ಯಾಪಾರ ಸಂಸ್ಥೆಗಳು ಮತ್ತೆ ತೆರೆಯಲ್ಪಟ್ಟಿವೆ. ವಾಹನಗಳು ರಸ್ತೆಗೆ ಇಳಿದಿರುವುದರಿಂದ ಸಂಚಾರ ದಟ್ಟಣೆ ಉಂಟಾಗಿದೆ. ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆಯಿಂದ ಕೂಡಿದ್ದರೂ ಚಾಲಕರನ್ನು ವಿಚಾರಿಸಿ, ದಾಖಲೆ ಪರಿಶೀಲಿಸಿ ಮುಂದೆ ಬಿಡಲಾಗುತ್ತಿತ್ತು.