ಅಥಣಿ

ಬಡಚಿ ಗ್ರಾಮ ಪಂಚಾಯತ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಬಡಚಿ ಗ್ರಾಮ ಪಂಚಾಯತ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಅಥಣಿ 27: ಬಡಚಿ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಬಡಚಿ ಗ್ರಾಮದ ಬೀರಾ​‍್ಪ ಪೂಜಾರಿ ಅವಿರೋಧವಾಗಿ ಹಾಗೂ ಉಪಾಧ್ಯಕ್ಷರಾಗಿ ದೇಸಾಯರಟ್ಟಿ ಗ್ರಾಮದ ವಿಜಯ ನಿಕ್ಕಂ ಚುನಾವಣೆಯಲ್ಲಿ 11 ಮತಗಳನ್ನು ಪಡೆಯುವ ಮೂಲಕ ಆಯ್ಕೆಯಾದರು.  ಚುನಾವಣಾಧಿಕಾರಿ ಪಶು ವೈದ್ಯಾಧಿಕಾರಿ ಡಾ.ಎಮ್‌.ಎಸ್‌.ಹುಂಡೇಕಾರ ಸಹಾಯಕರಾಗಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ ಬಾಗೆನ್ನವರ ಕಾರ್ಯ ನಿರ್ವಹಿಸಿದರು.  

ಚುನಾವಣಾ ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಪರಸಪ್ಪ ದನದಮನಿ, ಪುಂಡಲಿಕ ಪೂಜಾರಿ, ಅನಿತಾ ರಾಜು ದೇಸಾಯಿ, ಬೌರವ್ವಾ ಶ್ರೀಶೈಲ ಆಜೂರ, ಶೋಭಾ ಅಣ್ಣಪ್ಪಾ ಬೋರಾಡೆ, ರೋಹಿಣಿ ಸಂತೋಷ ಮಾದರ, ಇಂದ್ರವ್ವಾ ಗೌರೀಶ್ ಲೆಂಡೆ, ಮಂಗಲ ಶ್ಯಾಮ ನಾಯಿಕ, ಯಶೋಧಾ ಶಿವಾಜಿ ಭೋಸಲೆ, ಕೀರ್ತಿ ಏಕನಾಥ ಚವ್ಹಾಣ, ದಾನೇಶ್ವರಿ ಮಲ್ಲಪ್ಪ ಅವಟಿ, ಮಹಾದೇವಿ ಮತ್ತಪ್ಪ ಕಳಸಣ್ಣವರ, ರವಿ ಪಾಟೀಲ, ಸಂಜಯ ಶಿಂಧೆ, ಸತೀಶ ಮುರಗ್ಯಾಗೋಳ, ಶಂಕರ ಪವಾರ, ರಾಮಪ್ಪಾ ಚವ್ಹಾಣ ಪಾಲ್ಗೊಂಡಿದ್ದರು.   

ನೂತನ ಆಯ್ಕೆಯಾದ ಉಪಾಧ್ಯಕ್ಷ ವಿಜಯ ನಿಕ್ಕಂ  ಮಾತನಾಡಿ ನನ್ನ ಅಧಿಕಾರವಧಿಯಲ್ಲಿ ಗ್ರಾಮ ಪಂಚಾಯತ ವ್ಯಾಪ್ತಿಯ ಬಡಚಿ, ದೇಸಾಯರಟ್ಟಿ, ಖೋತನಟ್ಟಿ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವೆ. ಈ ಗ್ರಾಮಗಳಲ್ಲಿ ಕುಡಿಯುವ ನೀರು, ಸ್ವಚ್ಛತೆಗೆ ಆದ್ಯತೆ ನೀಡುವೆ. ಸರಕಾರದ ಯೋಜನೆಗಳನ್ನು ಗ್ರಾಮದ ಪ್ರತಿ ಮನೆ ಮನೆಗೆ ತಲುಪಿಸುವೆ ಎಂದರು.  

ಗ್ರಾಮ ಪಂಚಾಯತ ಸದಸ್ಯ ವಿಜಯಕುಮಾರ ಬಡಚಿ ಮಾತನಾಡಿ, ಅಥಣಿ ಶಾಸಕ ಲಕ್ಷ್ಮಣ ಸವದಿ ಮಾರ್ಗದರ್ಶನದಲ್ಲಿ ಈ ಚುನಾವಣೆ ನಡೆದಿದ್ದು, ಮುಂದಿನ ಅವಧಿಯಲ್ಲಿ ಬಡಚಿ, ದೇಸಾಯರಟ್ಟಿ ಹಾಗೂ ಖೋತನಟ್ಟಿ ಗ್ರಾಮಗಳಲ್ಲಿ ಜನಪರ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನ ಗೊಳಿಸುತ್ತೇವೆ ಎಂದರು. 


ಸುದ್ದಿ ಓದಿ