ಬಳ್ಳಾರಿ

ನಾಲ್ಕು ವರ್ಷದ ಪದವಿ ಹೇರಿಕೆ ಹಿಂಪಡೆಯಲು ಶಿಕ್ಷಣ ತಜ್ಞರ ಆಗ್ರಹ

ನಾಲ್ಕು ವರ್ಷದ ಪದವಿ ಹೇರಿಕೆ ಹಿಂಪಡೆಯಲು ಶಿಕ್ಷಣ ತಜ್ಞರ ಆಗ್ರಹ

ಬಳ್ಳಾರಿ 05: ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ ಕರ್ನಾಟಕದಲ್ಲಿ ಜಾರಿಗೊಳಿಸ ಹೊರಟ ನಾಲ್ಕುವರ್ಷದ ಪದವಿ ಪದ್ದತಿಯು ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಪಾರವಾದ ಅಸಮಾನತೆಯನ್ನು ಹೊಸ ಮಾದರಿಯ ತಾರತಮ್ಯವನ್ನು ಪುನಃ ಸ್ಥಾಪಿಸಲಿದೆ ಎಂದು ವಿಶ್ವ ವಿದ್ಯಾಲಯಗಳ ಧನಸಹಾಯ ಆಯೋಗ(ಯುಜಿಸಿ)ದ ಮಾಜಿ ಅಧ್ಯಕ್ಷರಾದ ಪ್ರೊ. ಸುಖದೇವ್ ಥೋರಟ್ ಹೇಳಿದರು.  

ಶಿಕ್ಷಣ ಕ್ಷೇತ್ರದಲ್ಲಿ ನಾಲ್ಕು ವರ್ಷದ ಪದವಿ ಹೇರಿಕೆಯ ವಿರದ್ದ  ಅಖಿಲಬಾರತ ಶಿಕ್ಷಣ ಉಳಿಸಿ ಸಮಿತಿಯ ನೇತೃತ್ವದಲ್ಲಿಂದು ನಡೆದ ರಾಜ್ಯ ಮಟ್ಟದ ಸಮಾವೇಶದಲ್ಲಿ ಮಾತನಾಡುತ್ತಾ ನಾಲ್ಕುವರ್ಷದ ಪದವಿ ಪದ್ದತಿಯು ವಿದೇಶಕ್ಕೆ ಹಾರಿಹೋಗುವ ಕೆಲವೇ ಕೆಲವು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆಯೇ ಹೊರತು ಬಹುದೊಡ್ಡ ಸಂಖ್ಯೆಯ ಬಡ ಮತ್ತು ಸಾಮಾನ್ಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದಿಲ್ಲ. ಈ ನೀತಿಯಲ್ಲಿ ಬಹುಹಂತದ ತೇರ್ಗಡೆಯಿರುವುದರಿಂದ  ವಿದ್ಯಾರ್ಥಿಗಳಿಗೆ ಸಂಪೂರ್ಣವಾದ ಜ್ಞಾನ ನೀಡಲಾರದು ಮತ್ತು ಉದ್ಯೋಗಕ್ಕೆ ಸಮರ​‍್ಕ ಅರ್ಹ ಅಭ್ಯರ್ಥಿಗಳನ್ನು ಸಹ ಸೃಷ್ಟಿಸಲಾರದು. ಇದು ಅಸಮಾನತೆಯನ್ನು ಸೃಷ್ಟಿಸಿ ಹೊಸ ಮಾದರಿಯ ತಾರತಮ್ಯವನ್ನು ಸೃಷ್ಟಿಸಲಿದೆ ಎಂದರು.   

ಶಿಕ್ಷಣ ತಜ್ಞರು ಮತ್ತು ನಿವೃತ್ತ ಪ್ರಾಂಶುಪಾಲರಾದ ಪ್ರೊ. ಮಹಾಬಲೇಶ್ವರರಾವ್ ರವರು ಮಾತನಾಡುತ್ತಾ ಸರಕಾರ ಜನಾಭಿಪ್ರಾಯವನ್ನು ಕಡೆಗಣಿಸಿ ಪ್ರಜಾತಾಂತ್ರಿಕ ಮೌಲ್ಯಗಳನ್ನು ಗಾಳಿಗೆ ತೂರಿ ಮಧಿಸಿದ ಆನೆಯಂತೆ ವರ್ತಿಸುತ್ತಾ ಈ ನೀತಿಯನ್ನು ಜಾರಿಗೊಳಿಸುತ್ತಿದೆ. ಇದು ಸಂವಿಧಾನ ವಿರೋಧಿ, ಜನ ವಿರೋಧಿ ಮತ್ತು ಸಮಾಜ ವಿರೋಧಿ ನೀತಿಯಾಗಿದೆ. ಇದು ಗ್ರಾಮೀಣ ಭಾಗದ ವಿದ್ಯಾರ್ಥಿಗಳ, ಬಡವ ಮತ್ತು ದಲಿತ ವಿದ್ಯಾರ್ಥಿಗಳ ಭವಿಷ್ಯ ಕೊಡಲಿಯೇಟು ನೀಡಲಿದೆ ಎಂದರು. ಈಗಾಗಲೇ ಅತಿಥಿ ಶಿಕ್ಷಕರನ್ನು, ಉಪನ್ಯಾಸಕರನ್ನು ಸರಕಾರಗಳು ಗುಲಾಮರಂತೆ ನಡೆಸಿಕೊಳ್ಳುತ್ತಿವೆ ಅವರಿಗೆ ಯಾವುದೇ ಉದ್ಯೋಗ ಭದ್ರತೆಯಿಲ್ಲ ಇಂಥ  ಕೆಲಸಗಳನ್ನು ಮಾಡುವುದು ಬಿಟ್ಟು ಅನವಶ್ಯಕವಾಗಿ ಇಂತಹ ನೀತಿಗಳನ್ನು ಜಾರಿಗೊಳಿಸುತ್ತಿದೆ ಎಂದು ಆಕ್ರೋುಷ ವ್ಯಕ್ತಪಡಿಸಿದರು. ನಮಗೆ ಬೇಕಿರುವುದು ಬಹು ಶಿಸ್ತಿನ ಪದ್ದತಿಯಲ್ಲ ಬದಲಾಗಿ ಅಂತರ್ ಸಂಭಂದೀಯ ಬಹು ಶಿಸ್ತಿನ ಪದ್ದತಿ ಎಂದರು. ಇದೆಲ್ಲವನ್ನು ಬಿಟ್ಟು ಏಕ ಭಾರತ ಶ್ರೇಷ್ಠ ಭಾರತ ನಂತಹ ರಾಜಕೀಯ ಪಕ್ಷಗಳ ಘೋಣೆಯನ್ನು ಹೊಸ ಶಿಕ್ಷಣನೀತಿಯಲ್ಲಿ ತುರುಕಲಾಗಿದೆ ಹೊರತು ಶಿಕ್ಷಣದ ನೈಜ ಮೌಲ್ಯಗಳನ್ನಲ್ಲ ಎಂದರು. ಈ ನೀತಿಯು ಕುವೆಂಪುರವರು ಹೇಳುವಂತೆ ಹೆಚ್ಚೆಂದರೆ ಮಾಹಿತಿ ಹೊತ್ತ ಕತ್ತೆಗಳನ್ನು ಸೃಷ್ಟಿಸಬಲ್ಲುದೇ ಹೊರತು ನೈಜ ವಿದ್ಯಾರ್ಥಿಗಳನ್ನು ಸೃಷ್ಠಿಸಲಾರದು ಎಂದು ಅಭಿಪ್ರಾಯಪಟ್ಟರು. 

ಸಮಾವೇಶದಲ್ಲಿ  ಪ್ರಾಸ್ತಾವಿಕವಾಗಿ ಎ.ಐ.ಎಸ್‌.ಇ.ಸಿ ರಾಜ್ಯ ಸಮಿತಿ ಸದಸ್ಯರು ಮತ್ತು ಉಪನ್ಯಾಸಕರಾದ ಸೋಮಶೇಖರಗೌಡ ರವರು ಮಾತನಾಡಿದರು. ರಾಜ್ಯ ಸೆಕ್ರೇಟರಿಯೇಟ್ ಸದಸ್ಯರಾದ ಶ್ರೀ.ವ್ಹಿ.ಎನ್‌. ರಾಜಶೇಖರರವರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯದ ವಿವಿಧ ಮೂಲೆಗಳಿಂದಾಗಮಿಸಿದ ಪ್ರತಿನಿಧಿಗಳು ಸಂವಾದದಲ್ಲಿ ಭಾಗವಿಸಿದ್ದರು. ಜೂಮ್ ಮತ್ತು ಫೇಸ್‌ಬುಕ್ ಲೈವನಲ್ಲಿ ರಾಜ್ಯದ ಸಾವಿರಾರು ಜನರು ಭಾಗವಹಿಸಿದ್ದರು. 


ಸುದ್ದಿ ಓದಿ