ಶಿಕ್ಷಣ ಕೇವಲ ಶ್ರೀಮಂತ ವರ್ಗದ ಸ್ವತ್ತಾಗಬಾರದು: ನಡಹಳ್ಳಿ
ತಾಳಿಕೋಟಿ: ಶಿಕ್ಷಣ ಎಂಬುದು ಕೇವಲ ಸಮಾಜದಲ್ಲಿರುವ ಶ್ರೀಮಂತ ವರ್ಗದ ಜನರ ಸ್ವತ್ತಾಗದೇ ಸಾಮಾನ್ಯ ಬಡವರ್ಗದವರೂ ಅದನ್ನು ಸುಲಭವಾಗಿ ಪಡೆಯುವಂತಾಗಬೇಕು ಆರ್ಥಿಕ ಸಮಸ್ಯೆ ಶಿಕ್ಷಣದಿದ ವಂಚಿತರನ್ನಾಗಿ ಮಾಡಿದರೆ ಅದು ಸಮಾಜಕ್ಕಾಗುವ ದೊಡ್ಡ ನಷ್ಟವಾಗಿದೆ ಎಂದು ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಹೇಳಿದರು.
ನಾನು ಶಾಸಕನಾದ ಮೇಲೆ ಕ್ಷೇತ್ರದಲ್ಲಿ ಸುಮಾರು 253 ಹೊಸ ಶಾಲಾ ಕಟ್ಟಡಗಳು ಹಾಗೂ ಒಂದು ಪದವಿ ಕಾಲೇಜು ಆರಂಭಿಸಲಾಗಿದೆ. ಇದರ ಜೊತೆಗೆ ವೈಯಕ್ತಿಕವಾಗಿ ನಾನು ಈ ವರ್ಷ ಕ್ಷೇತ್ರದಲ್ಲಿ 72 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿದ್ದೇನೆ. ಇದರ ಜೊತೆಗೆ ಈ ವರ್ಷ ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ಸಮಸ್ಯೆಯಲ್ಲಿರುವ ಮಕ್ಕಳಿಗೆ ರೂ. 36 ಲಕ್ಷ ಸಹಾಯ ಮಾಡಿದ್ದೇನೆ. ಪ್ರತಿವರ್ಷ ಶಿಕ್ಷಣಕ್ಕಾಗಿಯೇ 3 ರಿಂದ 4 ಕೋಟಿ ಹಣ ವೈಯಕ್ತಿಕವಾಗಿ ಕೊಡುತ್ತಿದ್ದೇನೆ.
ನನ್ನ ಕ್ಷೇತ್ರದ ಯಾವ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ನನ್ನ ಕಳಕಳಿಯಾಗಿದೆ. ಈ ಗ್ರಾಮಕ್ಕೆ ಪ್ರೌಢಶಾಲೆಯ ಅಗತ್ಯ ಇದೆ. ಇದರ ಪ್ರಸ್ತಾವನೆ ಸರಕಾರಕ್ಕೆ ಕಳಿಸಿದ್ದೇನೆ ಹೊಸ ಶಿಕ್ಷಣ ನೀತಿಯಿಂದಾಗಿ ವಿಳಂಬವಾಗಿದೆ. ಆದಷ್ಟು ಬೇಗ ಮಂಜೂರು ಮಾಡಿಸಲು ಯತ್ನಿಸುತ್ತೇನೆ. ನೀವೆಲ್ಲರೂ ನನ್ನೊಂದಿಗೆ ಸಹಕರಿಸಿದ್ದೀರಿ ಮುಂದೆಯೂ ನನಗೆ ನಿಮ್ಮ ಆಶೀರ್ವಾದ ಬೇಕು ಎಂದರು.
ವೇದಿಕೆಯಲ್ಲಿ ಜಿಪಂ ಮಾಜಿ ಸದಸ್ಯರಾದ ನಿಂಗಪ್ಪಗೌಡ ಬಪ್ಪರಗಿ, ಬಸನಗೌಡ ವಣಿಕ್ಯಾಳ, ಮುಖಂಡರಾದ ರಾಮನಗೌಡ ಡೋರ್ನಳ್ಳಿ, ಚಂದ್ರಶೇಖರ ಅಲದಿ, ದ್ಯಾಮನಗೌಡ ಪಾಟೀಲ (ಮಿಣಜಗಿ), ಗ್ರಾಪಂ ಸದಸ್ಯರಾದ ಪ್ರಭು ಪತ್ತೇಪೂರ, ರಮೇಶ ಪೀರಾಪೂರ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಶಿವಲೀಲಾ ಮದರಿಮಠ, ಉಪಾಧ್ಯಕ್ಷ ಮುತ್ತು ಮನಹಳ್ಳಿ, ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಟಿ. ವಜ್ಜಲ, ಸಿ.ಆರ್.ಪಿ. ಬಾಲಾಜಿಸಿಂಗ್ ವಿಜಾಪೂರ, ಎಚ್.ಎಂ. ಮುರಾಳ, ಬಿ.ಆಯ್. ಸಜ್ಜನ, ಪಿಡಿಓ ಬಿ.ಎಂ. ಸಾಗರ, ಎಇಇ ಎನ್.ಡಿ. ಮಸೂತಿ ಇದ್ದರು.