ಚಿಕ್ಕೋಡಿ-ಸದಲಗಾ ಕ್ಷೇತ್ರದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ; ಪ್ರಕಾಶ ಹುಕ್ಕೇರಿ ಹೇಳಿಕೆ: ಕೇರೂರ ಗ್ರಾಮದಲ್ಲಿ ಗುರುವಂದನೆ-ಪ್ರತಿಭಾ ಪುರಸ್ಕಾರ
ಲೋಕದರ್ಶನ ವರದಿ
ಚಿಕ್ಕೋಡಿ 01: ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅವಶ್ಯಕ ಬೇಕಾಗಿದ್ದ 263 ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಿ ಶಾಲಾ ಮಕ್ಕಳಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದರು.
ತಾಲೂಕಿನ ಕೇರೂರ ಗ್ರಾಮದ ಹಿರಿಯ ದುರೀಣ ಮಲ್ಲಿಕಾರ್ಜುನ ಪಾಟೀಲ ಅವರ ತೋಟದಲ್ಲಿ ಹಮ್ಮಿಕೊಂಡ 150 ಶಿಕ್ಷಕರ ಗುರುವಂದನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬೆಳಗಾವಿ, ಬಾಗಲಕೋಟ ಮತ್ತು ವಿಜಯಪೂರ ಜಿಲ್ಲೆಯ ವ್ಯಾಪ್ತಿಯನ್ನು ಹೊಂದಿರುವ ವಾಯವ್ಯ ಶಿಕ್ಷಕರ ಮತಕ್ಷೇತ್ರದಿಂದ ನಾನು ಆಯ್ಕೆಯಾಗಲು ಮೂರು ಜಿಲ್ಲೆಯ ಶಿಕ್ಷಕರು ಆಶಿರ್ವಾಧ ಮಾಡಿದ್ದಾರೆ. ಮೂರು ಜಿಲ್ಲೆಯಲ್ಲಿ ಪ್ರವಾಸ ಮಾಡಿ ಶಿಕ್ಷಣ ಇಲಾಖೆಯಲ್ಲಿನ ಸಮಸ್ಯೆಗಳನ್ನು ಅರಿತುಕೊಂಡು ಹಂತ ಹಂತವಾಗಿ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಈಗಾಗಲೇ ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಶಿಕ್ಷಣ ಇಲಾಖೆಯಲ್ಲಿ ಸುಮಾರು 18 ಕೋಟಿ ರೂ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ರಾಜ್ಯದ ತಾಲೂಕಾ ಮಟ್ಟದಲ್ಲಿ ಪಾಲಿಟೇಕ್ನಿಕ ಕಾಲೇಜು ಸ್ಥಾಪನೆಯಾಗಿಲ್ಲ, ಆದರೆ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗುವ ದೃಷ್ಠಿಯಿಂದ ಸದಲಗಾ ಭಾಗದಲ್ಲಿ ಹೈಟಿಕ್ ಪಾಲಿಟೃಕ್ನಿಕ ಕಾಲೇಜು ಸ್ಥಾಪನೆ ಮಾಡಿ ಮಕ್ಕಳಿಗೆ ಅನುಕೂಲ ಕಲ್ಪಿಸಲಾಗಿದೆ ಎಂದರು.
ಕೇರೂರ ಗ್ರಾಮದ ಹಿರಿಯ ಮುಖಂಡ ಮಲ್ಲಿಕಾರ್ಜುನ ಪಾಟೀಲ ಅವರ ಜನ್ಮದಿನದ ಅಂಗವಾಗಿ ಕೇರೂರ ಗ್ರಾಮದ ವ್ಯಾಪ್ತಿಯ 150 ಜನ ಶಿಕ್ಷಕರು, ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಮತ್ತು ರಾಜ್ಯ ಮಟ್ಟದ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿ ಪಡೆದ ಶ್ರೀಶೈಲ್ ಕೋಲಾರ ಅವರನ್ನು ಸನ್ಮಾನಿಸಿ ಗೌರವಿಸಿರುವುದು ಸಂತಸ ತಂದಿದೆ ಎಂದರು.
ವೇದಿಕೆ ಮೇಲೆ ಕಲ್ಲೋಳ ಗ್ರಾಮದ ಮುಖಂಡ ರವಿ ಮಿರ್ಜೆ, ಮಲ್ಲಿಕಾರ್ಜುನ ಪಾಟೀಲ, ವಿಠ್ಠಲ ವಾಳಕೆ, ವಿರೇಂದ್ರ ಪಾಟೀಲ, ಸುರೇಶ ಬಾಡಕರ, ರವಿ ಪಾಟೀಲ, ಬಸು ಪಾಟೀಲ, ಮಲ್ಲಪ್ಪ ಬಾಗಿ, ಬಿ.ಡಿ.ಪಾಟಿಲ, ನರಸಗೌಡ ಬನ್ನೂರೆ, ಬಿ.ಎಸ್.ಪಾಟೀಲ, ಚೇತನ ಪಾಟೀಲ, ಅಪ್ಪಾಸಾಹೇಬ ಬ್ಯಾಳಿ ಮುಂತಾದವರು ಇದ್ದರು.