ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಶಿಕ್ಷಣ ಒಂದೇ ತಾರಕ ಮಂತ್ರವಾಗಿದೆ: ರವಿ ಡಿ ಚೆನ್ನಣ್ಣನವರ
ರಾಣೇಬೆನ್ನೂರು27: ಈ ದೇಶಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಕೊಡುಗೆ ಮಹಾ ದೊಡ್ಡದು. ಅವರ ವಿಚಾರಧಾರೆ ಹಿಂದಿನಿಂದಲೂ ಪ್ರಸ್ತುತವಾಗಿದ್ದು, ಇಂದು ಮತ್ತು ಮುಂದೆಯೂ ಸಹ ಪ್ರಸ್ತುತವಾಗುತ್ತದೆ. ಸಂವಿಧಾನದಲ್ಲಿ ಅವರು ನೀಡಿದ ಸಮಾನತೆಯ ಹಕ್ಕು ಯಾರೂ ಮರೆಯುವಂತಿಲ್ಲ ಅಂತಹ ಮಹಾತ್ಮರಿಂದಲೇ ಇಂದು ಹಿಂದುಳಿದ ಎಲ್ಲಾ ಸಮುದಾಯಗಳು ಸಮಾನತೆಯಿಂದ ಬದುಕಿ ಬಾಳಲು ಸಾಧ್ಯವಾಗುತ್ತಲಿದೆ ಎಂದು ಬೆಂಗಳೂರು ಸಿಓಡಿ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚೆನ್ನಣ್ಣನವರ ಹೇಳಿದರು.
ಅವರು ಶನಿವಾರ ಇಲ್ಲಿನ ಈಶ್ವರ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದ ಆವರಣದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ತಾಲೂಕ ಘಟಕವು ಆಯೋಜಿಸಿದ್ದ ಸಮಾಜದ ಗಣ್ಯರ ಅಧಿಕಾರಿಗಳ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ, ಕರೋನಾ ವಾರಿಯರ್ಸ್ಗಳ ಅಭಿನಂದನಾ, ಗೌರವ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಮಕ್ಕಳ ಪಾಲಿಗೆ ತಂದೆ ತಾಯಿಗಳು ಸದಾ ಕಾಲ ಗೌರವ ನೀಡುವುದರ ಜೊತೆಗೆ ಪ್ರೀತಿ ವಿಶ್ವಾಸದಿಂದ ನೋಡಿಕೊಂಡು ಅವರಿಗೆ ಉತ್ತಮ ಶಿಕ್ಷಣ ದೊರಕಿಸಬೇಕು. ಅವರು ಶಿಕ್ಷಣವಂತರಾಗಿ ಯಾವುದೇ ಇಲಾಖೆಯಲ್ಲಿ ನೌಕರಿ ಮಾಡುತ್ತಿದ್ದರೆ ಆ ಮನೆಯಲ್ಲಿ ಯಾವುದೇ ತೊಂದರೆ ತಾಪತ್ರಯ ಗದ್ದಲ ಗಲಾಟೆಗಳು ಇರುವುದಿಲ್ಲ. ಕೇವಲ ಶಿಕ್ಷಣ ಪಡೆದರೆ ಸಾಲದು ಅದರ ಜೊತೆಗೆ ಸಂಸ್ಕಾರವು ಹೊಂದಿರಬೇಕು ಇದರಿಂದ ಸಮಾಜದಲ್ಲಿ ಬದುಕುವ ದಾರಿ ತನ್ನಿಂದ ತಾನೆ ಸಿಗುತ್ತದೆ ಎಂದರು.
ಮಾತುಗಳು ಸಾಧನೆಯಾಗಬಾರದು, ಸಾಧನೆ ಮಾತಾಗಬೇಕು. ಅವುಗಳು ಬಂಗಾರದ ಆಭರಣಗಳಂತೆ ಶೋಭಿಸಬೇಕು. ಕೇವಲ ಸರ್ಟಿಪಿಕೆಟ್ ನಿಂದ ಮಾನ್ಯತೆ, ಅರ್ಹತೆ ಬರುವುದಿಲ್ಲ. ಪ್ರಸ್ತುತ ಸಮಾಜದಲ್ಲಿ ಬಹುತೇಕವಾಗಿ ಅಕ್ಷರಸ್ಥರೇ ನಿರುದ್ಯೋಗಿಗಳಾಗುತ್ತಿದ್ದಾರೆ. ಯಾವ ಮನೆಯಲ್ಲಿ ನಿರುಧ್ಯೋಗತನ ಇರುತ್ತದೋ ಆಮನೆಯಲ್ಲಿ ಆರ್ಥಿಕವಾಗಿ ಸಭಲರಾಗುವುದಿಲ್ಲ. ಅಲ್ಲಿಯವರೆಗೂ ಆಂತರಿಕ ಕಿತ್ತಾಟ ಒಳಜಗಳ ತಪ್ಪಿದ್ದಲ್ಲ. ಈಗಾಗಿ ತಂದೆ ತಾಯಿಯಾದವರೂ ತಮ್ಮ ಮಕ್ಕಳ ಬಗ್ಗೆ ಕನಿಷ್ಠ ಅರ್ಧ ತಾಸು ಅವರ ಭವಿಷ್ಯದ ಬಗ್ಗೆ ಸೂಕ್ಷ್ಮವಾಗಿ ಚಿಂತನೆ ನಡೆಸಬೇಕು. ಇದರಿಂದ ತನ್ನಿಂದ ತಾನೆ ಮನೆಯ ವಾತಾವರಣ ಸುಧಾರಿಸಿ ಆರ್ಥಿಕವಾಗಿ ಸಮೃದ್ಧಿಗೊಂಡು ಸಮಾಜದಲ್ಲಿ ಸಮಾನತೆ ಸಾಧಿಸಲು ಸಾಧ್ಯವಾಗುವುದು ಎಂದ ಅವರು, ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಶಿಕ್ಷಣ ಒಂದೇ ತಾರಕ ಮಂತ್ರವಾಗಿದೆ ಎಂದರು.
ನಿವೃತ್ತ ಪ್ರಾಚಾರ್ಯ ಸಿ.ಕೆ.ಪಾರ್ವತೇರ ಅವರು ಸಮಾರಂಭ ಉದ್ಘಾಟಿಸಿ ಚಾಲನೆ ನೀಡಿದರು. ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕ ಅಧ್ಯಕ್ಷ ಚಂದ್ರ್ಪ ಹೆಚ್ ಬೇಡರ್ ಅವರು ಸಂಘಟನೆ ನಡೆದು ಬಂದ ದಾರಿ ಕುರಿತು ಸಾಧ್ಯಾಂತವಾಗಿ ವಿವರಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರಾದ ರವೀಂದ್ರಗೌಡ ಪಾಟೀಲ, ನಾಗರಾಜಪ್ಪ ಹಳ್ಳೇಳ್ಳೇಪ್ಪನವರ, ಡಾಽಽ ರಮೇಶ ತೆವರಿ, ಮಂಜುನಾಥ ಓಲೇಕಾರ, ಸಣ್ಣತಮ್ಮಪ್ಪ ಭಾರ್ಕಿ, ಬಸವರಾಜಪ್ಪ ಬಳ್ಳಾರಿ, ಡಾಽ ಕೆ.ಎಸ್.ಮುಕ್ಕಣ್ಣನವರ, ಗಿರಿಜಮ್ಮ ಬ್ಯಾಲದಹಳ್ಳಿ, ಮತ್ತಿತರ ಗಣ್ಯರು ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅನ್ನಪೂರ್ಣ ಮುದುಕಮ್ಮನವರ, ನಾಗೇಶ ತಳವಾರ, ಡಾ.ಪರಮೇಶ ಹುಬ್ಬಳ್ಳಿ, ಡಾ. ಸಂತೋಷಕುಮಾರ ಜಿ, ಸುರೇಶ ಡಂಬರ ಮತ್ತು ಪ್ರಮೋದ ನಲವಾಗಲ, ರಾಜೀವ ಕೂಲೇರ್, ಡಾ. ರಾಜಶೇಖರ ಪಾರ್ವತೇರ, ರಾಮಪ್ಪ ಭಜಾರಿ, ಡಾ.ಜಗದೀಶ್ ಪಾಟೀಲ. ಡಾ.ಸೋಮಶೇಖರ ಸಣ್ಣಮನಿ, ಡಾ. ಲಕ್ಷ್ಮಣ ಚಳಗೇರಿ, ಡಾ. ಬಸವರಾಜ ತಳವಾರ, ಡಾ.ಗಣೇಶ ಮುತ್ತಳ್ಳಿ, ಉದಯಕುಮಾರ ಬಿ.ಟಿ, ಮಂಜುನಾಥ ಕುಪ್ಪೇಲೂರು, ಹೆಚ್.ಎನ್.ರಾಮನಗೌಡ್ರ, ಸುರೇಶ ಬೇಡರ್, ನಾಗಪ್ಪ ಕಾಡಜ್ಜಿ ಸೇರಿದಂತೆ ನೂರಾರು ಗಣ್ಯರನ್ನು ಸನ್ಮಾನಿಸಿದರು. ಅಲ್ಲದೇ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಮತ್ತು ಕೋವಿಡ್-19 ಅವಧಿಯಲ್ಲಿ ಜೀವದ ಹಂಗು ತೊರೆದು ಸೇವೆ ನೀಡಿದ ಕರೋನಾ ವಾರಿಯರ್ಸ್ಗಳಿಗೆ ಅಭಿನಂದಿಸಿ ಸನ್ಮಾನಿಸಿ ಗೌರವಿಸಿದರು. ವೈಷ್ಣವಿ ಮಣಿಗಾರ ಪ್ರಾರ್ಥಿಸಿದರು. ಹನುಮಂತಪ್ಪ ಮೀನಕಟ್ಟಿ ಸ್ವಾಗತಿಸಿದರು. ಶ್ರೀನಿವಾಸ ನಲವಾಗಲ, ಜಗದೀಶ ಹುಲ್ಯಾಳ ನಿರೂಪಿಸಿ, ಡಿ.ಕೆ.ಆಂಜನೇಯ ವಂದಿಸಿದರು. ಸಮಾಜದ ಈ ಅದ್ದೂರಿ ಕಾರ್ಯಕ್ರಮದಲ್ಲಿ ಸಾವಿರಾರು ನಾಗರೀಕರು ಪಾಲ್ಗೊಂಡಿದ್ದರು.