ಪರಿಪೂರ್ಣ ಬದುಕಿಗೆ ಶಿಕ್ಷಣ ಅವಶ್ಯ : ಮಂಜುನಾಥ ಕುನ್ನೂರ
ಶಿಗ್ಗಾವಿ13: ಜೀವನದಲ್ಲಿ ಸಾಧನೆ ಮಾಡಬೇಕಾದರೆ ಛಲ ಇರಬೇಕು. ಛಲದಿಂದ ಕೂಡಿದ ಮನುಷ್ಯನ ಬದುಕು ಪರಿಪೂರ್ಣವಾಗಲು ಶಿಕ್ಷಣ ಅವಶ್ಯ ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಅಭಿಪ್ರಾಯಪಟ್ಟರು.
ಶನಿವಾರ ಮುಗಳಿ ಗ್ರಾಮದಲ್ಲಿ ಜರುಗಿದ ವಿಶ್ವಗುರು ಹಳೆಯ ವಿದ್ಯಾರ್ಥಿಗಳ ಸಂಘದ ತೃತೀಯ ವರ್ಷದ ಸಂಸ್ಥಾಪನಾ ದಿನಾಚರಣೆ, ನಿವೃತ್ತ ನೌಕರರ, ಹಿರಿಯ ಕಲಾವಿದರ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿ, ವಿದ್ಯೆಯಿಂದ ವಂಚಿತರಾದವರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಮೂಲಕ ಗಮನ ಸೆಳೆದಿರುವ ವಿಶ್ವಗುರು ಹಳೆಯ ವಿದ್ಯಾರ್ಥಿಗಳ ಸಂಘ ಮುಂದಿನ ದಿನಗಳಲ್ಲಿ ತಾಲೂಕಿನ ರೈತರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಲಿ ಎಂದು ಹೇಳಿದರು.
ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ತಾಪಂ ಸದಸ್ಯ ಶ್ರೀಕಾಂತ ಪೂಜಾರ, ಸಹಕಾರಿ ಧುರೀಣ ಶಿವಾನಂದ ರಾಮಗೇರಿ ಮಾತನಾಡಿದರು. ನಿವೃತ್ತ ಮುಖ್ಯ ಶಿಕ್ಷಕ ವಿ.ಜಿ. ದುಂಡಪ್ಪನವರ, ಹಿರಿಯ ಕಲಾವಿದರಾದ ಬಸವಣ್ಣೆಪ್ಪ ಮುಂದಿನಮನಿ, ಚಿಕ್ಕಪ್ಪ ಸಕ್ರಿ, ಚನ್ನಪ್ಪ ಕಾಮನಹಳ್ಳಿ, ಗ್ರಾಮ ಪಂಚಾಯತಿಗೆ ನೂತನವಾಗಿ ಆಯ್ಕೆಯಾಗಿರುವ ಶಿವಾನಂದ ಬಿಶೆಟ್ಟಿ, ನಿಂಗಪ್ಪ ದುಂಡಪ್ಪನವರ, ಸರೋಜಾ ಗೊಬ್ಬಿ, ರೇಣುಕಾ ಬಿಶೆಟ್ಟಿ, ರೇಣುಕಾ ತಳವಾರ, ಸಾಧಕರಾದ ಮಲ್ಲನಗೌಡ ಭರಮಗೌಡ್ರ, ಹನುಮಂತಪ್ಪ ಬೆಂಗೇರಿ, ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಶಿಗ್ಗಾವಿ ವಿರಕ್ತ ಮಠದ ಸಂಗನಬಸವ ಮಹಾಸ್ವಾಮೀಜಿ, ಬಂಕಾಪುರ ಕೆಂಡದ ಮಠದ ರೇವಣಸಿದ್ದೇಶ್ವರ ಸ್ವಾಮೀಜಿ, ಪಂಚಯ್ಯಸ್ವಾಮಿ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ವಿಶ್ವಗುರು ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವಿ.ಜಿ. ದುಂಡಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಮಹಾರುದ್ರಪ್ಪ ಇಟಗಿ, ಮಲ್ಲಿಕಾರ್ಜುನ ಯುವಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿ.ಎಸ್. ಭದ್ರಶೆಟ್ಟಿ ಸ್ವಾಗತಿಸಿದರು. ನಿಂಗಪ್ಪ ಸಕ್ರಿ ನಿರೂಪಿಸಿದರು. ಮಂಜುನಾಥ ಬಿಶೆಟ್ಟಿ ವಂದಿಸಿದರು.