ಬೆಳಗಾವಿ

ಮಕ್ಕಳ ಜೀವನ ಸಮೃದ್ಧಿಗೆ ಶಿಕ್ಷಣ, ಸಂಸ್ಕಾರ ಅಗತ್ಯ: ಮಹೇಶ್ ಮಸಾಲ

ಮಕ್ಕಳ ಜೀವನ ಸಮೃದ್ಧಿಗೆ ಶಿಕ್ಷಣ, ಸಂಸ್ಕಾರ ಅಗತ್ಯ: ಮಹೇಶ್ ಮಸಾಲ
Education and values ​​are essential for the enrichment of children's lives: Mahesh Masala

ಲೋಕದರ್ಶನ ವರದಿ  

                                                    ಪೋಷಕರ ಸಬಲೀಕರಣ ಕಾರ್ಯಕ್ರಮ ಉದ್ಘಾಟನೆ  

ಹಾರೂಗೇರಿ 03 : ಸಂವಾದ, ಸಹಕಾರ ಮತ್ತು ಸಂಸ್ಕಾರಗಳು ಮಕ್ಕಳ ಜೀವನವನ್ನು ಸಮೃದ್ಧಿ, ಸಂತೋಷ ಹಾಗೂ ಯಶಸ್ಸಿನತ್ತ ಕೊಂಡೊಯ್ಯುತ್ತವೆ ಎಂದು ಧಾರವಾಡದ ಶಿಕ್ಷಣ ತಜ್ಞ ಮಹೇಶ್ ಮಸಾಲ ಹೇಳಿದರು.  

ಪಟ್ಟಣದ ಜನತಾ ಶಿಕ್ಷಣ ಸಂಸ್ಥೆಯ ಅನುದಾನಿತ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರಗತಿ ಪ್ರೌಢಶಾಲೆ, ಭಗವಾನ್ ಆಂಗ್ಲ ಮಾಧ್ಯಮ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಆದಿನಾಥ ಜೈನ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಪೋಷಕರ ಸಬಲೀಕರಣ ಪರಿವರ್ತನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಮಕ್ಕಳಲ್ಲಿ ಅಡಗಿರುವ ಶಕ್ತಿಯನ್ನು ಗುರುತಿಸಬೇಕು  

ಭಾರತೀಯರ ಬುದ್ಧಿಶಕ್ತಿ ಮತ್ತು ಆಲೋಚನಾ ಸಾಮರ್ಥ್ಯ ವಿಶ್ವದಲ್ಲೇ ವಿಶಿಷ್ಟವಾಗಿದೆ. ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ಸೂಚಿಸುವಷ್ಟು ಸಾಮರ್ಥ್ಯ ಭಾರತೀಯರಲ್ಲಿದೆ. ಆದರೆ ಇಂದಿನ ದಿನಗಳಲ್ಲಿ ಮಕ್ಕಳು ಕುಟುಂಬ ಸಂಬಂಧಗಳಿಂದ ಹಾಗೂ ಸಾಮಾಜಿಕ ಸಂಪರ್ಕಗಳಿಂದ ದೂರವಾಗುತ್ತಿರುವುದು ವಿಷಾದನೀಯ ಎಂದು ಹೇಳಿದರು.  

ಪಠ್ಯವನ್ನು ಮಾತ್ರ ಕಲಿಯುವುದರಿಂದ ಮಕ್ಕಳ ಜೀವನ ಸಂಪೂರ್ಣವಾಗುವುದಿಲ್ಲ. ಅವರು ಜೀವನದ ಪಾಠವನ್ನೂ ಕಲಿಯಬೇಕು. ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಷ್ಟೇ ಗುರಿಯಾಗಬಾರದು; ಜೀವನವನ್ನು ಅರ್ಥಮಾಡಿಕೊಳ್ಳುವ ಶಿಕ್ಷಣ ನೀಡಬೇಕು ಎಂದು ಅವರು ಸಲಹೆ ನೀಡಿದರು.  

ಮಕ್ಕಳ ಮನಸ್ಸಿನಲ್ಲಿರುವ ಸಾಮರ್ಥ್ಯವನ್ನು ಅರ್ಥಮಾಡಿಕೊಂಡು, ಅವರ ಭಾವನೆಗಳಿಗೆ ಸ್ಪಂದಿಸಿದಾಗ ಮಾತ್ರ ಅವರಲ್ಲಿರುವ ಅಪಾರ ಶಕ್ತಿಯನ್ನು ಹೊರತರಲು ಸಾಧ್ಯ ಎಂದು ಮಹೇಶ್ ಮಸಾಲ ಹೇಳಿದರು.  

ಪೋಷಕರ ಸಹಕಾರ ಮಕ್ಕಳ ಅಭಿವೃದ್ಧಿಗೆ ಪ್ರಮುಖ  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಬಿ.ಬಿ. ಕರ್ಣವಾಡಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಪೋಷಕರ ಸಹಕಾರವೇ ಪ್ರಮುಖ ಆಧಾರವಾಗಿದೆ. ಶಾಲೆ ಮತ್ತು ಶಿಕ್ಷಕರಷ್ಟೇ ಪೋಷಕರ ಜವಾಬ್ದಾರಿಯೂ ಮುಖ್ಯವಾಗಿದೆ ಎಂದು ಹೇಳಿದರು.  

ಗಣ್ಯರ ಉಪಸ್ಥಿತಿ  

ಕಾರ್ಯಕ್ರಮದಲ್ಲಿ ಜಾಗೃತಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಬಿ.ಎನ್‌. ಅಲಗೂರ, ಸಂಸ್ಥೆಯ ಕಾರ್ಯದರ್ಶಿ ಬ್ರಹ್ಮದೇವ ಕರ್ಣವಾಡಿ, ಆಡಳಿತ ಮಂಡಳಿ ಸದಸ್ಯ ಅನಂತ ಕರ್ಣವಾಡಿ, ಮುಖ್ಯಾಧ್ಯಾಪಕ ಟಿ.ಬಿ. ಸಾಜನರ, ಎ.ಜೆ. ಚೌಗಲಾ, ಪಾರೀಸ್ ನಾಗನೂರ, ಕೆ.ಎಸ್‌. ಚೌಗಲಾ, ಎ.ಜೆ. ನಲವಡೆ ಸೇರಿದಂತೆ ಸಾವಿರಾರು ಪೋಷಕರು ಉಪಸ್ಥಿತರಿದ್ದರು.  ಶಿಕ್ಷಕ ಎ.ಬಿ. ಕಿಲ್ಲೇದಾರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ದಾವಲಮಲಿಕ್ ಜಮಾದಾರ ಕಾರ್ಯಕ್ರಮ ನಿರೂಪಿಸಿದರು. 


ಸುದ್ದಿ ಓದಿ