ಶಿಕ್ಷಣ ಮತ್ತು ಸಂಸ್ಕಾರ ಒಂದೇ ನಾಣ್ಯದ ಎರಡು ಮುಖಗಳು : ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು

ಶಿಕ್ಷಣ ಮತ್ತು ಸಂಸ್ಕಾರ ಒಂದೇ ನಾಣ್ಯದ ಎರಡು ಮುಖಗಳು : ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು Education and culture are two sides of the same coin: Dr. Allamaprabhu Mahaswamiji

ಲೋಕದರ್ಶನ ವರದಿ 

ಬೆಳಗಾವಿ:  ವಿದ್ಯಾರ್ಥಿಯ ವ್ಯಕ್ತಿತ್ವ ಆತನ ಸುತ್ತಮುತ್ತಲಿನ ಪರಿಸರ, ಶಿಕ್ಷಕ ಹಾಗೂ ಪೋಷಕರ ಮೇಲೆ ಅವಲಂಬನೆಯಾಗಿರುತ್ತದೆ. ಇವರೆಲ್ಲರ ಸಮನ್ವಯದಿಂದ ಆದರ್ಶ ವ್ಯಕ್ತಿ ನಿರ್ಮಾಣವಾಗುತ್ತಾನೆ.  ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಎಷ್ಟು ಮುಖ್ಯವೋ ಪೋಷಕರ ಪಾತ್ರವೂ ಸಹ ಅಷ್ಟೇ ಮಹತ್ವದ್ದಾಗಿದೆ. ಮಕ್ಕಳು ಮನೆಯಲ್ಲಿಯಲ್ಲಿದ್ದಾಗ ಉತ್ತಮ ಸಂಸ್ಕಾರದ ಗುಣಗಳನ್ನು ಪೋಷಕರು ಕಲಿಸಿಕೊಡಬೇಕು. ವ್ಯಕ್ತಿಯ ವ್ಯಕ್ತಿತ್ವ ವಿಕಸನವಾಗಬೇಕಾದರೆ ಶಿಕ್ಷಣದ ಜೊತೆಗೆ ಸಂಸ್ಕಾರವು ಅತ್ಯವಶ್ಯ. ಶಿಕ್ಷಣ ಮತ್ತು ಸಂಸ್ಕಾರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ ಅಲ್ಲಮಪ್ರಭು ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.  

ಅವರು ಇಂದು ಶಿವಬಸವ ನಗರದ ಆರ್‌. ಎನ್‌. ಶೆಟ್ಟಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಎಸ್ ಜಿ ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ 2026-27 ನೇ ಸಾಲಿನ ಪ್ರಥಮ ವರ್ಷದ ಬಿ.ಇ. ಮತ್ತು ಬಿ.ಸಿ.ಎ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜೆ.ಪಿ.ಎಫ್ ಮೆಟಾಕಾಸ್ಟ  ಪ್ರೈವೇಟ್ ಲಿಮಿಟೆಡ್ ನ ಕಾರ್ಯ ನಿರ್ವಾಹಕ ನಿರ್ದೇಶಕ ಗೌರವ ಪಂಡಿತ ಮಾತನಾಡಿ ಇಂಜಿನಿಯರ್ ಎನ್ನುವುದು ಕೇವಲ ಪದವಿಯಲ್ಲ ಅದು ಸಮಾಜದ ಸಮಸ್ಯೆಗಳಿಗೆ ಪರಿಹಾರ ಕೊಡುವ  ಜವಾಬ್ದಾರಿಯಾಗಿದೆ ಎಂದರು. 

 ಇನ್ನೋರ್ವ  ಅತಿಥಿ ಹೈಡ್ರೊಪ್ಯಾಕ್ ಇಂಡಿಯಾ ಪ್ರೈ.ಲಿ. ವ್ಯವಸ್ಥಾಕ ನಿರ್ದೇಶಕರಾದ ಸುಧೀರ ದರೆಕರ್ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ನಿರ್ಧಿಷ್ಟ ಗುರಿಯನ್ನು ಹೊಂದಿರುವುದಷ್ಟೆ ಅಲ್ಲದೆ ಅದನ್ನು ಇಡೇರಿಸಿಕೊಳ್ಳಲು ಸತತ ಪ್ರಯತ್ನದ ಜೊತೆಗೆ ಸಮಯ ಪ್ರಜ್ಞೆ, ಶಿಸ್ತು , ತಾಳ್ಮೆಯಿಂದ ವರ್ತಿಸಬೇಕು. ಇದರಿಂದ ಮಾತ್ರ ಯಶಸ್ಸು ಸಾದ್ಯ ಎಂದರು.  ವೇದಿಕೆಯ ಮೇಲೆ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ವಿಲಾಸ ಬಾದಾಮಿ, ಪ್ರಭಾಕರ ನಾಗರಮುನ್ನೋಳ್ಳಿ ಹಾಗೂ ಸಂಸ್ಥೆಯ ಕಾರ್ಯದರ್ಶಿ ಎಸ್‌.ಪಿ.ಹಿರೇಮಠ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಆರ್‌.ಪಟಗುಂದಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕಿ ಡಾ. ಅನಿತಾ  ಪಾಟೀಲ ನಿರೂಪಿಸಿದರು. ಕೊನೆಗೆ ಬೇಸಿಕ್ ಸೈನ್ಸ್‌ ವಿಭಾಗದ ಮುಖ್ಯಸ್ಥ ಡಾ. ಅಶೋಕ ಹುಲಗಬಾಳಿ ವಂದಿಸಿದರು.