ಶಿಕ್ಷಣಾಧಿಕಾರಿ ಶ್ರೀಶೈಲ್ ಕರೀಕಟ್ಟಿ ನಿವೃತ್ತಿ: ಬೀಳ್ಕೊಡುಗೆ
ಸವದತ್ತಿ 02: ದೇಶ ರಕ್ಷಣೆಗೋಸ್ಕರ ಸೈನಿಕರಾಗಿ ನಂತರ ವಿದ್ಯೆ ಕಲಿಸುವ ಗುರುವಾಗಿ ಶಿಕ್ಷಣಾಧಿಕಾರಿಗಳಾಗಿ ನಿವೃತ್ತಿ ಹೊಂದುತ್ತಿರುವ ಶ್ರೀಶೈಲ್ ಕರೀಕಟ್ಟಿಯವರ ನಡೆದು ಬಂದ ದಾರಿ ಎಲ್ಲರಿಗೂ ದಾರೀದೀಪವಾಗಿದೆ ಎಂದು ಮುನವಳ್ಳಿ ಸೋಮಶೇಖರ ಮುರುಘೇಂದ್ರ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲಾ ಶಿಕ್ಷಕರಿಂದ ಸೇವಾ ನಿವೃತ್ತಿ ಹೊಂದಿದ ಬಿಇಓ ಶ್ರೀಶೈಲ್ ಕರೀಕಟ್ಟಿ ಅವರಿಗೆ ಹಮ್ಮಿಕೊಂಡ ಬೀಳ್ಕೊಡುವ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಬೆಳವಡಿ ಮಲ್ಲಮ್ಮಳ ಕ್ಷೇತ್ರದಿಂದ ಸವದತ್ತಿಯ ಯಲ್ಲಮ್ಮನ ಸ್ಥಾನಕ್ಕೆ ಬಂದು ಉತ್ತಮ ಸೇವೆ ಸಲ್ಲಿಸಿ ಇಂದು ನಿವೃತ್ತರಾಗುತ್ತಿರುವ ಅವರ ಜೀವನ ನಿವೃತ್ತಿಯ ನಂತರ ಆನಂದಮಯವಾಗಿರಲಿ ಎಂದರು.
ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುವ ಮೂಲಕ ಶಿಕ್ಷಕರ ಜನಾನುರಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಇಂದು ನಿವೃತ್ತಿ ಹೊಂದುತ್ತಿರುವ ಕರೀಕಟ್ಟಿಯವರ ನಿವೃತ್ತ ಜೀವನ ಸುಖ ಸಂತೋಷ ನೆಮ್ಮದಿಯಿಂದ ಕೂಡಿರಲಿ ಎಂದರು. ಸದಾ ಚಟುವಟಿಕೆಯ ಸ್ವಭಾವದವರಾದ ಕರೀಕಟ್ಟಿಯವರು ತಾವು ಎಲ್ಲೆಲ್ಲಿ ಸೇವೆ ಸಲ್ಲಿಸಿರುವರೋ ಅಲ್ಲೆಲ್ಲಾ ತಮ್ಮದೇ ಕೊಡುಗೆಯನ್ನು ನೀಡಿ ಸವದತ್ತಿಯಲ್ಲಿ ಗುರುಭವನ ನಿರ್ಮಿಸುವ ಮೂಲಕ ಶಿಕ್ಷಕರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿಇಓ ಶ್ರೀಶೈಲ್ ಕರೀಕಟ್ಟಿಯವರು ತಮ್ಮ ಇದುವರೆಗಿನ ಸೇವೆಯ ದಿನಗಳನ್ನು ನೆನೆಯುತ್ತ ಎಲ್ಲ ಶಿಕ್ಷಕರ ಸಹಕಾರ ನನಗೆ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದ್ದನ್ನು ಮರೆಯಲಾರೆ ಎಂದರು.
ಮೂಲಿಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಕರೀಕಟ್ಟಿಯವರದು ಯೋಗಾಯೋಗದ ಕರ್ತವ್ಯದ ಬದುಕಾಗಿದ್ದು, ಅವರು ಬದುಕಿನ ಮೌಲ್ಯಗಳನ್ನು ತಮ್ಮಲ್ಲಿ ಮೈಗೂಡಿಸಿಕೊಂಡು ಕರ್ತವ್ಯ ನಿಷ್ಠೆ ಹೊಂದಿದ ಕಾರಣ ಪ್ರತಿಯೊಂದು ಕೆಲಸವನ್ನು ಉತ್ತಮವಾಗಿ ಮಾಡಿ ಶಿಕ್ಷಕರ ಮನದಾಳದಲ್ಲಿ ಉಳಿಯುವಂತಾಗಿದೆ ಎಂದರು. ದೇಶದ ಗಡಿಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿಯಾಗಿ ನಿವೃತ್ತ ಬದುಕು ರೈತನಾಗಿ ಕಳೆಯುವ ಅವರ ಸಂಕಲ್ಪ ನಿಜಕ್ಕೂ ಅಭಿನಂದನಾರ್ಹ ಅವರ ಬದುಕು ಉತ್ತರೋತ್ತರವಾಗಿ ದೈಹಿಕವಾಗಿ ಅಭಿವೃದ್ದಿ ಹೊಂದಲಿ ಎಂದು ಹಾರೈಸಿದರು.
ನಿವೃತ್ತಿ ಹೊಂದಿದ ಬಿಇಓ ಎಸ್.ಸಿ ಕರೀಕಟ್ಟಿ ದಂಪತಿಗಳಿಗೆ ಶಾಸಕ ವಿಶ್ವಾಸ್ ವೈದ್ಯ, ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿಯವರು, ಮೂಲಿಮಠದ ಮಲ್ಲಿಕಾರ್ಜುನ ಸ್ವಾಮೀಜಿ, ವಿರುಪಾಕ್ಷ ಮಾಮನಿ, ಸವದತ್ತಿ ತಾಲೂಕ ಪ್ರಾಥಮಿಕ ಪ್ರೌಢ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು, ಸೇವಾದಳ ಸಂಘಟನೆ, ಗ್ರಾಮೀಣ ಶಿಕ್ಷಕರ ಸಂಘ, ಎನ್.ಪಿ.ಎಸ್.ನೌಕರರ ಸಂಘ, ವಿವಿಧ ಸಿ.ಆರ್.ಸಿಗಳ ವ್ಯಾಪ್ತಿಯ ಶಾಲೆಗಳವರು, ನಿವೃತ್ತ ಸೇನಾ ಸಂಘಟನೆಯವರು, ನಿವೃತ್ತ ಶಿಕ್ಷಕರ ಸಂಘ, ಸಿ.ಆರ್.ಪಿ ಬಿ.ಆರ್.ಪಿಯವರಿಂದ ಹಾಗೂ ವಿವಿಧ ಗ್ರಾಮಗಳ ಪ್ರಮುಖರು ವಿವಿಧ ಶಾಲೆಗಳ ವತಿಯಿಂದ ಕರೀಕಟ್ಟಿಯವರನ್ನು ಸನ್ಮಾನಿಸಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಮೈತ್ರಾದೇವಿ ವಸ್ತ್ರದ, ಕೃಷಿ ಇಲಾಖೆ ಉಪನಿರ್ದೇಶಕ ಸಹದೇವ ಯರಗೊಪ್ಪ, ಡಾ.ಅಭಿನಂದನ ಕಬ್ಬಿಣ, ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್.ಬ್ಯಾಳಿ, ಧಾರವಾಡ ಡೈಟ್ ಹಿರಿಯ ಉಪನ್ಯಾಸಕಿ ಡಾ.ರೇಣುಕಾ ಅಮಲಝರಿ, ಶಾಂತಾ ಮೇಟಿ, ವಿಜಯಲಕ್ಷ್ಮೀ ಅರ್ಕಸಾಲಿ, ಆರ್.ಆರ್.ಸದಲಗಿ, ಗೋಕಾಕ ಬಿ.ಇ.ಓ ಜಿ.ಬಿ.ಬಳಿಗಾರ, ನಿಪ್ಪಾಣಿ ಬಿ.ಇ.ಓ ರೇವತಿ ಮಠದ, ಚಿಕ್ಕೋಡಿ ಡಿ.ವೈ.ಪಿ.ಸಿ ಚಿಕ್ಕಮಠ, ಮೂಡಲಗಿ ಬಿ.ಇ.ಓ ಅಜಿತ್ ಮಣ್ಣೀಕೇರಿ. ಎಂ.ಬಿ.ಬಳಿಗಾರ ಇತರರು ಉಪಸ್ಥಿತರಿದ್ದರು.