ದ್ವಾದಶ ಜ್ಯೋತಿರ್ಲಿಂಗ
1. ಶಿವನಿಗೆ ಸೋಮನಾಥನೆಂದು ಏಕೆ ಕರೆಯುತ್ತಾರೆ?
ಪರಮಾತ್ಮ ಶಿವನಿಗೆ ಸಾವಿರಾರು ಹೆಸರುಗಳಿವೆ. ಅವುಗಳೆಲ್ಲವೂ ದೇಹಕ್ಕೆ ಇಟ್ಟಿರುವ ಹೆಸರುಗಳಲ್ಲ. ಪರಮಾತ್ಮನು ನಿರಾಕಾರನಾಗಿದ್ದು, ಅವನಿಗೆ ಗುಣವಾಚಕ ಮತ್ತು ಕರ್ತವ್ಯವಾಚಕ ನಾಮಗಳಿವೆ. ‘ಸೋಮನಾಥ’ ನೆಂದರೆ ‘ಅಮೃತದ ಒಡೆಯ’ ಎಂದರ್ಥ. ಪರಮಾತ್ಮ ಶಿವನು ಕಲಿಯುಗದ ಅಂತ್ಯದಲ್ಲಿ ಅಂದರೆ ಸಂಗಮಯುಗದಲ್ಲಿ ಅವತರಿಸಿ ಅಜ್ಞಾನ ನಿದ್ರೆಯಲ್ಲಿರುವ ಮನುಷ್ಯಾತ್ಮರಿಗೆ ಜ್ಞಾನಾಮೃತವನ್ನು ನೀಡಿ ಜಾಗೃತಗೊಳಿಸುತ್ತಾನೆ. ಈ ಸತ್ಯ ಆಧ್ಯಾತ್ಮಿಕ ಜ್ಞಾನವೇ ಸೋಮ ಅಂದರೆ ಅಮೃತವಾಗಿದೆ. ಆದರೆ ಪೌರಾಣಿಕವಾಗಿ ಸೋಮನೆಂದರೆ ಚಂದ್ರನೆ0ದು ಹೇಳುತ್ತಾ ಚಂದ್ರನಿಗೆ ದೇವನ ಪಟ್ಟ ಕಟ್ಟಿ ದಕ್ಷ ಪ್ರಜಾಪತಿಯ 27 ಕನ್ಯೆಯರನ್ನು ಮದುವೆ ಮಾಡಿಕೊಟ್ಟಂತೆ ತೋರಿಸಲಾಗಿದೆ. ಇದು ಕಟ್ಟುಕಥೆಯಾಗಿದೆ. ವಾಸ್ತವದಲ್ಲಿ ಚಂದ್ರನು ವ್ಯಕ್ತಿಯಲ್ಲ, ಒಂದು ನಿರ್ಜಿವ ಉಪಗ್ರಹ ಮಾತ್ರ.
2. ಶಿವನಿಗೆ ವಿಶ್ವನಾಥನೆಂದು ಏಕೆ ಕರೆಯುತ್ತಾರೆ?
ಶಿವನ ನಾಮಗಳೆಲ್ಲವೂ ಕರ್ತವ್ಯವಾಚಕ ಮತ್ತು ಗುಣವಾಚಕಗಳು. ಪರಂಜ್ಯೋತಿ ಸ್ವರೂಪ ಪರಮಾತ್ಮ ಶಿವನ ನಾಮಗಳಲ್ಲಿ ಅತಿ ಪ್ರಸಿದ್ಧವಾದ ನಾಮ ವಿಶ್ವನಾಥ. ವಿಶ್ವನಾಥನೆಂದರೆ ಬ್ರಹ್ಮಾಂಡಕ್ಕೆ ಮಾಲೀಕ. ವಿಶ್ವದ ಸರ್ವ ಜಾತಿ, ಮತ, ಧರ್ಮ, ಕುಲಗಳಿಗೆ ಪರಮಾತ್ಮ ಶಿವನು ಒಡೆಯನಾಗಿದ್ದಾನೆ. ಸರ್ವ ಆತ್ಮರುಗಳಿಗೆ ತಂದೆಯಾಗಿದ್ದಾನೆ. ಪರಮಾತ್ಮ ಶಿವನು ಪರಮಪಿತ, ಪರಮ ಶಿಕ್ಷಕ, ಪರಮ ಸದ್ಗುರುವಾಗಿದ್ದಾನೆ. ಇಂತಹ ಶ್ರೇಷ್ಠಾತಿ ಶ್ರೇಷ್ಠ ಪರಮಾತ್ಮ ಶಿವನು ಮಾನವರನ್ನು ದೇವ ಮಾನವರನ್ನಾಗಿ ಮಾಡಿ ಅವರನ್ನು ಸಂಪೂರ್ಣ ಸೃಷ್ಟಿಗೆ ಮಾಲೀಕರನ್ನಾಗಿ ಮಾಡುತ್ತಾನೆ. ಸರ್ವರಿಂದಲೂ ವಂದನೀಯನಾಗಿರುವ ಪರಮಾತ್ಮ ಶಿವನಿಗೆ ಭಕ್ತರು ವಿಶ್ವನಾಥನೆಂದು ಕರೆದಿದ್ದಾರೆ.
3. ಶಿವನಿಗೆ ಶ್ರೀಶೈಲ ಮಲ್ಲಿಕಾರ್ಜುನನೆಂಬ ಮಹಿಮೆ ಏಕೆ ಇದೆ?
ಆಂಧ್ರ್ರದೇಶದ ಕೃಷ್ಣಾ ನದಿ ತೀರದಲ್ಲಿರುವ ಶ್ರೀಶೈಲ ಮಲ್ಲಿಕಾರ್ಜುನ ತೀರ್ಥಸ್ಥಳವನ್ನು ದಕ್ಷಿಣ ಕೈಲಾಸವೆನ್ನುತ್ತಾರೆ. ಅನೇಕ ಪುರಾಣಗಳಲ್ಲಿ ಇದರ ಮಹಿಮೆ ಇದೆ. ಮಲ್ಲಿಕಾರ್ಜುನ ಎಂಬ ಶಬ್ದವು ‘ಮಲ್ಲಿಕಾ’ ಮತ್ತು ‘ಅರ್ಚನ’ ಎಂಬ ಶಬ್ದಗಳಿಂದ ಆಗಿದೆ. ಮೊಟ್ಟಮೊದಲು ಮಲ್ಲಿಕಾ (ಮಲ್ಲಿಗೆ) ಹೂವುಗಳಿಂದ ಶಿವನನ್ನು ಅರ್ಚನೆ ಮಾಡಿದ ಕಾರಣ ಈ ಶಿವಲಿಂಗಕ್ಕೆ ‘ಮಲ್ಲಿಕಾರ್ಜುನ’ ಎಂಬ ಹೆಸರು ಬಂದಿತು. ಪರಂಜ್ಯೋತಿ ಸ್ವರೂಪ ಪರಮಾತ್ಮ ಶಿವನು ಕಲಿಯುಗದ ಅಂತ್ಯದಲ್ಲಿ ಪ್ರಜಾಪಿತ ಬ್ರಹ್ಮಾರವರ ತನುವಿನಲ್ಲಿ ಪರಕಾಯ ಪ್ರವೇಶ ಮಾಡಿ ಸುಗಂಧ ರಹಿತ ಅಂದರೆ ಗುಣರಹಿತ ಮುಳ್ಳಿನ ಸಮಾನವಾಗಿರುವ ಮನುಷ್ಯಾತ್ಮರಲ್ಲಿ ಈಶ್ವರೀಯ ಜ್ಞಾನ ಮತ್ತು ಸಹಜ ರಾಜಯೋಗದಿಂದ ಸುಗಂಧವನ್ನು ಅಂದರೆ ಗುಣವನ್ನು ತುಂಬಿ ದೇವಾತ್ಮರನ್ನಾಗಿ ಮಾಡುತ್ತಾನೆ. ಈ ದೇವಾತ್ಮರೇ ಅರ್ಚನೆಗೆ ಯೋಗ್ಯರಾಗುತ್ತಾರೆ. ಈ ಪ್ರತೀಕವಾಗಿ ಶಿವನಿಗೆ ‘ಮಲ್ಲಿಕಾಜುನ’ ಎಂಬ ಹೆಸರು ಬಂದಿದೆ.
4. ಶಿವನಿಗೆ ಮಹಾಕಾಲೇಶ್ವರನೆಂದು ಏಕೆ ಕರೆಯುತ್ತಾರೆ?
ಮಧ್ಯಪ್ರದೇಶದ ಧಾರ್ಮಿಕ ರಾಜಧಾನಿ ಅವಂತಿಕ ಎಂದು ಕರೆಯಲ್ಪಡುವ ಉಜ್ಜೈನಿ ನಗರದಲ್ಲಿ ಜ್ಯೋತಿ ಸ್ವರೂಪನಾದ ಶಿವಪರಮಾತ್ಮನ ಪ್ರತೀಕವಾದ ಮಹಾಕಾಲೇಶ್ವರ ಮಂದಿರವು ಸ್ಥಿತವಾಗಿದೆ. ಇಲ್ಲಿ ಭಸ್ಮದಾರತಿ ಮಾಡಲಾಗುತ್ತದೆ. ಇದು ಏಕಮಾತ್ರ ದಕ್ಷಿಣಮುಖಿ ಜ್ಯೋತಿರ್ಲಿಂಗವಾಗಿದೆ. ಸಾಮಾನ್ಯವಾಗಿ ಸಾವಿನ ಭಯ ಎಲ್ಲರಿಗೂ ಇದ್ದೇ ಇರುತ್ತದೆ. ಹಾಗಾಗಿ ಜನರು ಆಯಸ್ಸಿನ ವೃದ್ಧಿ ಹಾಗೂ ಆಯಸ್ಸಿನ ಮೇಲಿರುವ ಕಂಟಕವನ್ನು ದೂರಮಾಡಲು ಮಹಾಕಾಲೇಶ್ವರ ಶಿವನನ್ನು ಪೂಜಿಸುತ್ತಾರೆ. ಇಲ್ಲಿ ಕಾಲನೆಂದರೆ ಸಾವು ಎಂದರ್ಥ. ಮಹಾಕಾಲೇಶ್ವರನೆಂದರೆ ಎಲ್ಲರಿಗೂ ಸಾವನ್ನು ನೀಡಿ ಅವರವರ ಕರ್ಮದ ಅನುಸಾರವಾಗಿ ಮುಕ್ತಿ-ಜೀವನ್ಮುಕ್ತಿಯನ್ನು ನೀಡುವವನು. ಪರಮಾತ್ಮ ಶಿವನು ಅಮರ ಆತ್ಮದ ಜ್ಞಾನವನ್ನು ನೀಡಿ ಮನುಷ್ಯಾತ್ಮರನ್ನು ಸಾವಿನ ಭಯದಿಂದ ಮುಕ್ತರನ್ನಾಗಿ ಮಾಡುತ್ತಾನೆ. ಈಶ್ವರೀಯ ಜ್ಞಾನವನ್ನು ನೀಡಿ ಯೋಗಿಗಳನ್ನಾಗಿ ಮಾಡಿ ದೀರ್ಘಾಯುಷಿಗಳನ್ನಾಗಿ ಮಾಡುತ್ತಾನೆ. ಇದರಿಂದ ಮನುಷ್ಯಾತ್ಮರು ಆತ್ಮಜ್ಞಾನದಿಂದ ಸಾವಿನ ಭಯವನ್ನು ತ್ಯಜಿಸುತ್ತಾರೆ. ಯೋಗಿ-ಜೀವನದಿಂದ ದೀರ್ಘಾಯುಷಿಯಾಗುತ್ತಾರೆ.
5. ಪರಮಾತ್ಮ ಶಿವನಿಗೆ ಓಂಕಾರೇಶ್ವರನೆ0ದು ಏಕೆ ಕರೆಯುತ್ತಾರೆ?
ಓಂಕಾರೇಶ್ವರ ಜ್ಯೋತಿರ್ಲಿಂಗವು ಮಧ್ಯಪ್ರದೇಶದ ಪ್ರಸಿದ್ಧ ನಗರ ಇಂದೌರ್ನ ಸಮೀಪದಲ್ಲಿದೆ. ನರ್ಮದ ನದಿಯ ಬೆಟ್ಟಗಳ ಸುತ್ತಲೂ ಹರಿಯುವಾಗ ಓಂಕಾರ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ‘ಓಂ’ ಶಬ್ದವು ಬ್ರಹ್ಮಾನ ಬಾಯಿಂದ ಮೊದಲು ಉಚ್ಛರಿಸಲ್ಪಟ್ಟಿತು ಎಂದು ಹೇಳಲಾಗುತ್ತದೆ. ಧಾರ್ಮಿಕ ಕಾರ್ಯವು ಓಂಕಾರದೊ0ದಿಗೆ ಪ್ರಾರಂಭವಾಗುತ್ತದೆ. ಈ ಜ್ಯೋತಿರ್ಲಿಂಗವು ‘ಓಂ’ ಆಕಾರದಲ್ಲಿದೆ. ವಾಸ್ತವದಲ್ಲಿ ‘ಓಂ’ ಎಂದರೆ ಆತ್ಮವೆಂದರ್ಥ. ಈಶ್ವರನೆಂದರೆ ಮಾಲೀಕನೆಂದರ್ಥ. ಸರ್ವ ಆತ್ಮರಿಗೂ ಪರಮಪಿತನು ಓಂಕಾರೇಶ್ವರ ಶಿವನಾಗಿದ್ದಾನೆ. ಮನುಷ್ಯಾತ್ಮರು ತಮ್ಮನ್ನು ತಾವು ದೇಹವೆಂದು ತಿಳಿದು ವಿಕೃತಿಯಲ್ಲಿ ಮುಳುಗಿದಾಗ ಪರಂಜ್ಯೋತಿ ಸ್ವರೂಪ ಪರಮಾತ್ಮ ಶಿವನು ಕಲಿಯುಗದ ಅಂತ್ಯದಲ್ಲಿ ಪ್ರಜಾಪಿತ ಬ್ರಹ್ಮಾರವರ ತನುವಿನಲ್ಲಿ ಪರಕಾಯ ಪ್ರವೇಶ ಮಾಡಿ ಮೊದಲು ಅವರ ಬಾಯಿಯಿಂದ ಓಂಕಾರ ಮಾಡುತ್ತಾ ಆತ್ಮ ಸ್ಥಿತಿಯಲ್ಲಿ ಸ್ಥಿತರಾಗುವ ಸಂದೇಶವನ್ನು ಸರ್ವ ಆತ್ಮರಿಗೂ ನೀಡುತ್ತಾನೆ. ಇದರ ಪ್ರತೀಕವೇ ಓಂಕಾರೇಶ್ವರ.
6. ಪರಮಾತ್ಮ ಶಿವನಿಗೆ ಕೇದಾರನಾಥನೆಂಬ ಮಹಿಮೆ ಏಕೆ ಇದೆ?
ಕೇದಾರನಾಥ ಜ್ಯೋತಿರ್ಲಿಂಗವು ಉತ್ತರಾಖಂಡದಲ್ಲಿದೆ. ಇದನ್ನು ಕೈಲಾಸಕ್ಕೆ ಸಮಾನವೆಂದು ಹೇಳಲಾಗಿದೆ. ಕೇದಾರವೆಂಬ ಬೆಟ್ಟದಲ್ಲಿ ಈ ಜ್ಯೋತಿರ್ಲಿಂಗವು ಇರುವ ಕಾರಣ ಈ ಶಿವಲಿಂಗಕ್ಕೆ ಕೇದಾರನಾಥ ಅಥವಾ ಕೇದಾರೇಶ್ವರ ಎಂದು ಕರೆಯಲಾಗುತ್ತದೆ. ನರ-ನಾರಾಯಣರೆಂಬ ಖುಷಿಗಳ ತಪಸ್ಸಿಗೆ ಮೆಚ್ಚಿ ಶಿವನು ಇಲ್ಲಿ ನೆಲೆಸಿದನೆಂದು ಹೇಳಲಾಗುತ್ತದೆ. ವಾಸ್ತವದಲ್ಲಿ ಪರಂಜ್ಯೋತಿ ಸ್ವರೂಪನಾದ ಶಿವ ಪರಮಾತ್ಮನು ಕಲಿಯುಗದ ಅಂತ್ಯದಲ್ಲಿ ಪ್ರಜಾಪಿತ ಬ್ರಹ್ಮಾರವರ ತನುವಿನಲ್ಲಿ ಪರಕಾಯ ಪ್ರವೇಶ ಮಾಡಿ ಅಬುಪರ್ವತದ ಪವಿತ್ರ ಸ್ಥಳದಲ್ಲಿ ಅವತರಿಸುವ ಪ್ರತೀಕವೇ ಕೇದಾರ ಪರ್ವತ. ನರನನ್ನು ಶ್ರೀ ನಾರಾಯಣ ಮತ್ತು ನಾರಿಯನ್ನು ಶ್ರೀಲಕ್ಷ್ಮಿಯನ್ನಾಗಿ ಮಾಡಲು ಪರಮಾತ್ಮ ಶಿವನು ಈಶ್ವರೀಯ ಜ್ಞಾನ ಮತ್ತು ಯೋಗದ ಶಿಕ್ಷಣವನ್ನು ನೀಡುತ್ತಾನೆ. ಇದರ ಪ್ರತೀಕವಾಗಿ ಕೇದಾರ ಕ್ಷೇತ್ರದಲ್ಲಿ ನರ-ನಾರಾಯಣರೆಂಬ ತಪಸ್ವಿಗಳನ್ನು ತೋರಿಸಲಾಗಿದೆ.
7. ಪರಮಾತ್ಮ ಶಿವನಿಗೆ ಭೀಮಾಶಂಕರನೆ0ಬ ಮಹಿಮೆ ಏಕೆ ಇದೆ?
ಪರಂಜ್ಯೋತಿ ಸ್ವರೂಪ ಶಿವ ಪರಮಾತ್ಮನ ಪ್ರತೀಕವಾದ ಪ್ರಸಿದ್ಧ ಜ್ಯೋತಿರ್ಲಿಂಗ ಭೀಮಾಶಂಕರವು ಮಹಾರಾಷ್ಟ್ರದ ಪೂನದ ಹತ್ತಿರ ಸಹ್ಯಾದ್ರಿ ಪರ್ವತದಲ್ಲಿದೆ. ಈ ಶಿವಲಿಂಗವು ಬೃಹದಾಕಾರವಾಗಿರುವುದರಿಂದ ಇದನ್ನು ಮೋಟೇಶ್ವರ ಮಹಾದೇವ ಎಂದು ಕರೆಯಲಾಗುತ್ತದೆ. ಈ ಮಂದಿರದ ಹತ್ತಿರ ಭೀಮಾ ನದಿ ಹರಿಯುತ್ತದೆ. ಕುಂಭಕರ್ಣನ ಮಗನಾದ ಭೀಮನೆಂಬ ರಾಕ್ಷಸನ ಉಪಟಳದಿಂದ ಎಲ್ಲರೂ ಪರಿತಪಿಸುತ್ತಿದ್ದರು. ಬ್ರಹ್ಮನಿಂದ ವರದಾನವನ್ನು ಪಡೆದಿದ್ದ ಭೀಮನನ್ನು ಸೋಲಿಸಲು ಯಾರಿಂದಲೂ ಆಗುತ್ತಿರಲಿಲ್ಲ. ಕೊನೆಗೆ ಶಿವನು ಅವನ ಹತ್ಯೆಯನ್ನು ಮಾಡಿದನೆಂದು ಶಿವಪುರಾಣದಲ್ಲಿ ಬರೆಯಲಾಗಿದೆ. ವಾಸ್ತವದಲ್ಲಿ ಪರಮಾತ್ಮ ಶಿವನಿಗೆ ದೇಹವಿಲ್ಲ, ಅವನು ಯಾರ ಹತ್ಯೆಯನ್ನೂ ಮಾಡುವುದಿಲ್ಲ. ಮನುಷ್ಯಾತ್ಮರಲ್ಲಿರುವ ದುರ್ಗುಣಗಳ ಪ್ರತೀಕವಾಗಿ ಅಸುರರನ್ನು ತೋರಿಸಲಾಗಿದೆ. ಈ ದುರ್ಗುಣಗಳು ಬಹಳ ಬಲಶಾಲಿ. ಇವುಗಳನ್ನು ಪರಮಾತ್ಮ ಶಿವನ ಶಕ್ತಿಯಿಂದಲೇ ಗೆಲ್ಲಲು ಸಾಧ್ಯ ಎಂಬುದನ್ನು ಈ ಭೀಮಾಶಂಕರ ಜ್ಯೋತಿರ್ಲಿಂಗವು ಸಾರುತ್ತದೆ.
8. ಪರಮಾತ್ಮ ಶಿವನಿಗೆ ತ್ರಯಂಬಕೇಶ್ವರನೆ0ಬ ಮಹಿಮೆ ಏಕೆ ಬಂದಿದೆ?
ತ್ರಯ0ಬಕೇಶ್ವರ ಜ್ಯೋತಿರ್ಲಿಂಗವು ಮಹಾರಾಷ್ಟೊದ ನಾಸಿಕ್ ಜಿಲ್ಲೆಯ ತ್ರಯಂಬಕ ಹಳ್ಳಿಯಲ್ಲಿದೆ. ಸಮೀದಲ್ಲಿಯೇ ಗೋದಾವರಿ ನದಿಯ ಉದ್ಗಮ ಸ್ಥಳವಿದೆ. ಈ ಮಂದಿನದ ಒಳಗೆ ಮೂರು ಚಿಕ್ಕ-ಚಿಕ್ಕ ಶಿವಲಿಂಗಗಳಿವೆ, ಅವುಗಳು ಬ್ರಹ್ಮಾ-ವಿಷ್ಣು-ಶಂಕರರ ಪ್ರತೀಕಗಳಾಗಿವೆ ಎಂದು ಹೇಳಲಾಗುತ್ತದೆ. ‘ತ್ರಯಂಬಕ’ ಎಂದರೆ ಮೂರು ನೇತ್ರಗಳು ಅಥವಾ ತ್ರಿನೇತ್ರಿ ಎಂದರ್ಥ. ವಾಸ್ತವದಲ್ಲಿ ಪರಮಾತ್ಮ ಶಿವನು ಬ್ರಹ್ಮಾರವರ ಮೂಲಕ ಸತ್ಯಯುಗಿ ದೈವಿ ಸೃಷ್ಟಿಯ ಸ್ಥಾಪನೆಯನ್ನು, ಶ್ರೀವಿಷ್ಣುವಿನ ಮೂಲಕ ಸತ್ಯಯುಗಿ ದೈವಿ ಸೃಷ್ಟಿಯ ಪಾಲನೆಯನ್ನು ಮತ್ತು ಶಂಕರನ ಮೂಲಕ ಕಲಿಯುಗಿ ಅಸುರಿ ಸೃಷ್ಟಿಯ ವಿನಾಶವನ್ನು ಮಾಡಿಸುತ್ತಾನೆ. ಕಲಿಯುಗದ ಅಂತ್ಯದಲ್ಲಿ ಪರಂಜ್ಯೋತಿ ಸ್ವರೂಪನಾದ ಶಿವನು ಮನುಷ್ಯಾತ್ಮರಿಗೆ ಈಶ್ವರೀಯ ಜ್ಞಾನವೆಂಬ ಮೂರನೇ ನೇತ್ರವನ್ನು ನೀಡುವುದರ ಪ್ರತೀಕವೇ ತ್ರಯಂಬಕೇಶ್ವರ ಜ್ಯೋತಿರ್ಲಿಂಗವಾಗಿದೆ.
9. ಪರಮಾತ್ಮ ಶಿವನಿಗೆ ವೈದ್ಯನಾಥನೆಂದು ಏಕೆ ಕರೆಯುತ್ತಾರೆ?
ವೈದ್ಯನಾಥ ಎಂಬ ಹೆಸರಿನಿಂದ ಪ್ರಸಿದ್ಧವಾದ ಜ್ಯೋತಿರ್ಲಿಂಗವು ಜಾರ್ಖಂಡ್ ರಾಜ್ಯದ ದೇವಘರ್ನಲ್ಲಿದೆ. ಇದು ಪವಿತ್ರ ತೀರ್ಥಸ್ಥಳವಾಗಿರುವ ಕಾರಣ ಜನರು ಇದನ್ನು ವೈದ್ಯನಾಥ ಧಾಮವೆಂದು ಕರೆಯುತ್ತಾರೆ. ‘ದೇವಘರ್’ ಎಂದರೆ ದೇವತೆಗಳ ಮನೆ ಎಂದರ್ಥ. ಈ ಜ್ಯೋತಿರ್ಲಿಂಗದ ದರ್ಶನ ಮಾಡುವವರು ತಮ್ಮ ಎಲ್ಲಾ ಪಾಪಗಳಿಂದ ಮುಕ್ತರಾಗಿ ತಮ್ಮ ದೈಹಿಕ, ದೈವಿಕ ಮತ್ತು ಭೌತಿಕ ತಾಪಗಳಿಂದ ಮುಕ್ತರಾಗುತ್ತಾರೆಂಬ ನಂಬಿಕೆ ಜನರಲ್ಲಿದೆ. ವಾಸ್ತವದಲ್ಲಿ ಪರಮಾತ್ಮ ಶಿವನು ಈಶ್ವರೀಯ ಜ್ಞಾನವೆಂಬ ಓಷಧಿ ಮತ್ತು ಸಹಜ ರಾಜಯೋಗ ಇಂಜೆಕ್ಷನನ್ನು ಮನುಷ್ಯಾತ್ಮರಿಗೆ ನೀಡಿ ಅವರನ್ನು ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳೆ0ಬ ಮಹಾಮಾರಿಯಿಂದ ಮುಕ್ತಗೊಳಿಸಿ ಭವಬಂಧನವನ್ನು ಕಳೆಯುತ್ತಾನೆ. ಪರಮಾತ್ಮ ನೀಡುವ ಜ್ಞಾನ ಜಲದ ಪ್ರತೀಕವಾಗಿ ಭಕ್ತರು ಶಿವಲಿಂಗಕ್ಕೆ ಜಲಾಭಿಷೇಕವನ್ನು ಮಾಡುತ್ತಾರೆ.
10. ಪರಮಾತ್ಮ ಶಿವನಿಗೆ ನಾಗೇಶ್ವರ ಎಂಬ ಮಹಿಮೆ ಏಕೆ ಇದೆ?
ನಾಗೇಶ್ವರ ಜ್ಯೋತಿರ್ಲಿಂಗವು ಗುಜರಾತಿನ ದ್ವಾರಕ ನಗರದ ಸಮೀಪ ಇದೆ. ನಾಗೇಶ್ವರನೆಂದರೆ ನಾಗಗಳ ಈಶ ಎಂದರ್ಥ. ಈ ನಾಮವು ವಿಷ ಮತ್ತು ಇತ್ಯಾದಿ ದುಷ್ಟಶಕ್ತಿಗಳಿಂದ ರಕ್ಷಣೆ ಹೊಂದುವ ಪ್ರತೀಕವಾಗಿದೆ. ರುದ್ರ ಸಂಹಿತೆಯಲ್ಲಿ ದಾರುಕವನೇ ನಾಗೇಶಂ ಎಂದು ಹೇಳಲಾಗಿದೆ. ವಾಸ್ತವದಲ್ಲಿ ಹಾವುಗಳಲ್ಲಿರುವ ವಿಷವು ಅಸುರಿ ಗುಣಗಳ ಪ್ರತೀಕವಾಗಿದೆ. ಮನುಷ್ಯಾತ್ಮನಲ್ಲಿರುವ ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳೇ ವಿಷವಾಗಿದೆ. ಪರಂಜ್ಯೋತಿ ಸ್ವರೂಪ ಶಿವ ಪರಮಾತ್ಮನು ಕಲಿಯುಗದ ಅಂತಿಮ ಸಮಯದಲ್ಲಿ ಈ ಧರೆಗೆ ಬಂದು ಮನುಷ್ಯಾತ್ಮರಿಗೆ ಈಶ್ವರೀಯ ಜ್ಞಾನಾಮೃತವನ್ನು ನೀಡಿ, ಅವರಲ್ಲಿ ಶಿವಸ್ಮೃತಿಯೆಂಬ ಯೋಗವೆಂಬ ಅಗ್ನಿಯನ್ನು ಪ್ರಜ್ವಲಿಸಿ ಅಸುರಿಗುಣಗಳೆಂಬ ವಿಷದಿಂದ ಮುಕ್ತರನ್ನಾಗಿ ಮಾಡುತ್ತಾನೆ. ಇದರ ಪ್ರತೀಕವಾಗಿಯೇ ನಾಗೇಶ್ವರನೆಂಬ ಮಹಿಮೆ ಬಂದಿದೆ.
11. ಪರಮಾತ್ಮ ಶಿವನಿಗೆ ರಾಮೇಶ್ವರಂ ಎಂಬ ಹೆಸರು ಏಕೆ ಬಂದಿದೆ?
ರಾಮೇಶ್ವರಂ ಜ್ಯೋತಿರ್ಲಿಂಗವು ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯಲ್ಲಿದೆ. ಉತ್ತರ ಭಾರತದಲ್ಲಿ ಕಾಶಿ ವಿಶ್ವನಾಥನಿಗೆ ಇರುವ ಮಾನ್ಯತೆಯಷ್ಟೇ ದಕ್ಷಿಣ ಭಾರತದಲ್ಲಿ ಶ್ರೀರಾಮೇಶ್ವರಂಗೆ ಇದೆ. ಶ್ರೀರಾಮನು ರಾವಣನ ಮೇಲೆ ಜಯಿಸಿದ ಕಾರಣಕ್ಕಾಗಿ ತನ್ನ ಆರಾಧ್ಯ ದೈವ ಶಿವ ಪರಮಾತ್ಮನಿಗೆ ಕೃತಜ್ಞತೆಯನ್ನು ಸಲ್ಲಿಸಲು ಮರಳಿನಲ್ಲಿ ಶಿವಲಿಂಗವನ್ನು ನಿರ್ಮಿಸಿದನು. ಆಗ ಭಗವಂತನಾದ ಶಿವನು ಜ್ಯೋತಿ ಸ್ವರೂಪದಲ್ಲಿ ಪ್ರಕಟನಾಗಿ ಶ್ರೀರಾಮನಿಗೆ ದರ್ಶನ ನೀಡಿದನು. ಅಂದಿನಿ0ದ ಈ ಜ್ಯೋತಿರ್ಲಿಂಗಕ್ಕೆ ಶ್ರೀರಾಮೇಶ್ವರಂ ಎಂಬ ಹೆಸರು ಬಂದಿತು ಎಂದು ಹೇಳಲಾಗುತ್ತದೆ. ಭಾರತದಲ್ಲಿ ಸತ್ಯಯುಗವಿದ್ದಾಗ ಶ್ರೀವಿಷ್ಣು-ಶ್ರೀಲಕ್ಷ್ಮಿಯವರ ರಾಜ್ಯವಿತ್ತು, ಭಾರತದಲ್ಲಿಯೇ ತ್ರೇತಾಯುಗವಿದ್ದಾಗ ಶ್ರೀರಾಮ-ಶ್ರೀಸೀತೆಯವರ ರಾಜ್ಯವಿತ್ತು. ಈ ಎಲ್ಲಾ ದೇವಾತ್ಮರುಗಳಿಗೂ ಹಾಗೂ ಸರ್ವ ಮನುಷ್ಯಾತ್ಮರಿಗೂ ಪರಂಜ್ಯೋತಿ ಸ್ವರೂಪನಾದ ಪರಮಾತ್ಮನು ಪಾರಲೌಕಿಕ ತಂದೆಯಾಗಿದ್ದಾನೆ.
12. ಪರಮಾತ್ಮ ಶಿವನಿಗೆ ಘೃಷ್ಣೇಶ್ವರ/ಘೃಷ್ಮೇಶ್ವರ ಎಂಬ ಹೆಸರು ಏಕೆ ಬಂದಿದೆ?
ಮಹಾರಾಷ್ಟ್ರದ ಓರಂಗಬಾದ್ನ ಹತ್ತಿರ ಘೃಷ್ಣೇಶ್ವರ ಮಹಾದೇವನ ಮಂದಿರವಿದೆ. ಈ ಮಂದಿರವನ್ನು ಅಹಿಲ್ಯಬಾಯಿ ಹೋಳ್ಕರ್ ಕಟ್ಟಿಸಿದ್ದಾಳೆ. ಘೃಶ್ಮ ಎಂಬ ಒಬ್ಬ ಸ್ತ್ರೀಯು ಪ್ರತಿದಿನ 101 ಶಿವಲಿಂಗಗಳನ್ನು ಸ್ಥಾಪಿಸಿ ಪೂಜಿಸುತ್ತಿದ್ದಳು. ಪರಮಾತ್ಮ ಶಿವನು ಪರಂಜ್ಯೋತಿ ಸ್ವರೂಪದಲ್ಲಿ ಇವಳಿಗೆ ದರ್ಶನ ನೀಡಿ ಹತ್ಯೆಯಾದ ಅವಳ ಮಗುವಿಗೆ ಮರುಜನ್ಮ ನೀಡಿದನೆಂಬ ಪ್ರತೀತಿ ಇದೆ. ಹಾಗಾಗಿ ಸಂತಾನಹೀನರು ಈ ಮಂದಿರಕ್ಕೆ ಭೇಟಿ ನೀಡುವುದು ಹೆಚ್ಚು. ವಾಸ್ತವದಲ್ಲಿ ನಾವೆಲ್ಲರೂ ಪರಮಾತ್ಮ ಶಿವನಿಗೆ ಆತ್ಮದ ರೂಪದಲ್ಲಿ ಸಂತಾನರು. ನಾವು ಮೊಟ್ಟಮೊದಲು ಪರಮಾತ್ಮ ಶಿವನನ್ನು ತಂದೆಯೆ0ದು ಒಪ್ಪಿ ಅವನಿಗೆ ಸಂತಾನರಾಗಬೇಕು. ಆಗಲೇ ನಮಗೆ ಮುಕ್ತಿ ಸಿಗುತ್ತದೆ. ‘ಮಕ್ಕಳಾಗದೇ ಮುಕ್ತಿಯಿಲ್ಲ’ ಎಂಬ ಮಾತು ಇದರಿಂದಲೇ ಪ್ರಚಲಿತವಾಗಿದೆ. ಇದನ್ನು ಅಜ್ಞಾನಿಗಳು ‘ನಮಗೆ ಮಕ್ಕಳಾಗದಿದ್ದಲ್ಲಿ ಮುಕ್ತಿಯಿಲ್ಲ’ ಎಂದು ತಿಳಿದಿದ್ದಾರೆ. ಆದರೆ ನಾವು ಪರಮಾತ್ಮ ಶಿವನಿಗೆ ಶರಣಾಗಿ ಅವನ ಮಕ್ಕಳಾಗಬೇಕು. ಆಗಲೇ ಅವನಿಂದ ಸರ್ವಪ್ರಾಪ್ತಿಗಳು ದೊರೆಯುತ್ತವೆ.
- ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ, ದಾವಣಗೆರೆ.