ಶ್ರೀಮಂತ ಪಾಟೀಲರ ಅವಧಿಯಲ್ಲಿ ಕಾಗವಾಡ ಮತಕ್ಷೇತ್ರ ಸಮಗ್ರ ಅಭಿವೃದ್ಧಿಯತ್ತ ದಾಪುಗಾಲು
ಅಥಣಿ 11: ಕಾಗವಾಡ ಮತಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಶಾಸಕ ಶ್ರೀಮಂತ ಪಾಟೀಲರ ನೇತೃತ್ವದಲ್ಲಿ ರಸ್ತೆ, ಕುಡಿಯುವ ನೀರು, ನೀರಾವರಿ, ಶಿಕ್ಷಣ, ವಿದ್ಯುತ್, ಕೃಷಿ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಸಹ ನೂರಾರು ಕೋಟಿ ರೂ.ಗಳ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಳ್ಳುವ ಮೂಲಕ ಕಾಗವಾಡ ಮತಕ್ಷೇತ್ರ ಸಮಗ್ರ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದೆ ಎಂದು ಕರ್ನಾಟಕ ಕ್ಷೇತ್ರಿಯ ಮಹಾ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಭಾವುಸಾಹೇಬ ಜಾಧವ ಹೇಳಿದರು.
ಅವರು ಪಾರ್ಥನಹಳ್ಳಿ ಗ್ರಾಮದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.
ಶ್ರೀಮಂತ ಪಾಟೀಲರು ಶಾಸಕರಾಗುವ ಪೂರ್ವದಲ್ಲಿ ಕಾಗವಾಡ ಕ್ಷೇತ್ರದಲ್ಲಿ ಮುಖ್ಯ ಹಾಗೂ ಸಂಪರ್ಕ ರಸ್ತೆಗಳು ದುಃಸ್ಥಿಯಲ್ಲಿದ್ದವು ಅಲ್ಲದೆ ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಕೊಠಡಿಗಳ ಕೊರತೆ ಸಾಕಷ್ಟಿತ್ತು ಇದನ್ನು ಗಮನಿಸಿದ ಶಾಸಕರು ಕ್ಷೇತ್ರದಲ್ಲಿ ಸುಸಜ್ಜಿತ ರಸ್ತೆಗಳ ಹಾಗೂ ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಆ ಶಾಲೆಗಳಲ್ಲಿ ಕೊಠಡಿಗಳ ನಿರ್ಮಾಣ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ ಎಂದ ಅವರು ಮಹಾರಾಷ್ಟ್ರ ರಾಜ್ಯಕ್ಕೆ ಹೊಂದಿಕೊಂಡ ಕಾಗವಾಡ ಮತಕ್ಷೇತ್ರದ ಕೊನೆಯ ಗ್ರಾಮ ಅರಳಿಹಟ್ಟಿಯಿಂದ ಜೇವರ್ಗಿ ಸಂಕೇಶ್ವರ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ, ಅನಂತಪುರದಿಂದ ಖಿಳೇಗಾಂವ ಗ್ರಾಮದ ಸಂಪರ್ಕ ರಸ್ತೆಯನ್ನು ರಾಜ್ಯ ಹೆದ್ದಾರಿಗೆ ಮೇಲ್ದರ್ಜೆಗೇರಿಸಿ ಸುಸಜ್ಜಿತ ರಸ್ತೆ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿದೆ ಎಂದರು.
ಕಾಗವಾಡ ಮತಕ್ಷೇತ್ರದ ಬರಗಾಲ ಪೀಡಿತ ಗ್ರಾಮಗಳ ಸಾವಿರಾರು ಹೆಕ್ಟೇರ ಪ್ರದೇಶಕ್ಕೆ ನೀರಾವರಿ ಒದಗಿಸುವ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ ಕೆಲವೇ ತಿಂಗಳಲ್ಲಿ ಈ ಯೋಜನೆ ಪೂರ್ಣಗೊಂಡು ಕಾಲುವೆಗಳ ಮೂಲಕ ನೀರಾವರಿ ಒದಗಿಸಲಿದೆ ಎಂದರು. ಅಗ್ರಹಾರಿಣಿ ನದಿ ಉದ್ದಗಲಕ್ಕೂ ಕೂಡ ಸಾಕಷ್ಟು ಸಂಖ್ಯೆಯಲ್ಲಿ ಚೆಕ್ಕ ಡ್ಯಾಂಮಗಳನ್ನು ನಿರ್ಮಿಸಲಾಗಿದೆ ಇದರಿಂದ ಮಳೆಗಾಲದಲ್ಲಿ ಹರಿದು ಬರುವ ನೀರನ್ನು ಸಂಗ್ರಹಿಸಲಾಗುತ್ತಿದ್ದು, ಇದರಿಂದ ಅತರ್ಜಲದ ಮಟ್ಟ ಹೆಚ್ಚಿಸಲಾಗಿದೆ ಎಂದ ಅವರು ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತ ವರ್ಗಗಳ ಜನವಸತಿ ಪ್ರದೇಶದಲ್ಲಿಯೂ ಸಹ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಿದ್ದಾರೆ ಎಂದರು.
ಶ್ರೀಮಂತ ಪಾಟೀಲರ ನೇತೃತ್ವದಲ್ಲಿ ಸಾಕಷ್ಟು ಜನಪರ ಹಾಗೂ ಅಭಿವೃದ್ಧಿ ಪರ ಕಾರ್ಯಗಳು ಅನುಷ್ಠಾನಗೊಂಡಿದ್ದರೂ ಕೂಡ ಅಭಿವೃದ್ಧಿಯನ್ನು ಸಹಿಸದ ಕೆಲವರು ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹ ಹೇಳಿಕೆಗಳ ಸತ್ಯಾಂಶ ಪರೀಕ್ಷಿಸಬೇಕು ಎಂದು ಕಾಗವಾಡ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದ ಅವರು 4.30 ಕೋಟಿ ವೆಚ್ಚದ ಅಬ್ಬಿಹಾಳ ಗ್ರಾಮದಿಂದ ಶಿವನೂರ ಕ್ರಾಸ್ ವರೆಗಿನ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.