13ರಿಂದ ದುರ್ಗಾ ಪರಮೇಶ್ವರಿ ಜಾತ್ರಾ ಮಹೋತ್ಸವ
ಬೈಲಹೊಂಗಲ 02: ಪಟ್ಟಣದ ಬಸವನಗರದ ಶ್ರೀಮಾತಾ ದುರ್ಗಾ ಪರಮೇಶ್ವರಿ ಜಾತ್ರಾ ಮಹೋತ್ಸವ ಶ್ರೀಮಾತಾ ಸಂಭ್ರಮ 2021 ಕಾರ್ಯಕ್ರಮವು ದಿ. 13 ರಿಂದ 15 ರವರೆಗೆ ದೇವಿ ಆರಾಧಕ ಡಾ. ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ ಅವರ ಸಾನಿಧ್ಯದಲ್ಲಿ ನಡೆಯಲಿದೆ ಎಂದು ಜಾತ್ರಾ ಕಮೀಟಿ ಅಧ್ಯಕ್ಷ ರಾಜು ಕುಡಸೋಮಣ್ಣವರ, ಉಪಾಧÀ್ಯಕ್ಷ ಸುಭಾಸ ತುರಮರಿ ಹೇಳಿದರು.
ಪಟ್ಟಣದ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದ ಅವರು, ಕೊರೊನಾ ಭೀತಿ ಹಿನ್ನೆಲೆಯಲ್ಲಿ ಕೋವಿಡ್ 19 ನಿಯಮಗಳು ಮತ್ತು ರಾಜ್ಯ ಸರಕಾರದ ಮಾರ್ಗದರ್ಶಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಂಡು ಸರಳವಾಗಿ ಜಾತ್ರೆ ನಡೆಸಲು ಈಗಾಗಲೇ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ದಿ. 13ರಂದು ಬೆಳಿಗ್ಗೆ 6ಕ್ಕೆ ಅಮ್ಮನವರಿಗೆ ಅಭಿಷೇಕ, ಕುಂಕುಮಾರ್ಚನೆ, ಬೆಳಿಗ್ಗೆ 8ಕ್ಕೆ ಪಂಚಾಚಾರ್ಯ ದ್ವಜಾರೋಹಣವನ್ನು ದೊಡವಾಡ ಜಡಿಶಿದ್ದೇಶ್ವರ ಮಹಾಸ್ವಾಮೀಜಿ ನೆರವೇರಿಸುವರು. ಬೆಳಿಗ್ಗೆ 9ಕ್ಕೆ ಗಣಪತಿ ಪೂಜೆ, ಭೈರವ ಹೋಮ, ನವಗ್ರಹ ಮಂಡಲ ಆರಾಧನೆ ಪೂಜಾ ಕಾರ್ಯಕ್ರಮ ವಿವಿಧ ಪೂಜ್ಯರಿಂದ ನಡೆಯಲಿದೆ.
ಸಂಜೆ 6ಕ್ಕೆ ಯುಗಾದಿ ಸಂಭ್ರಮ ಉದ್ಘಾಟನೆ, 500 ಮಾಜಿ ಸೈನಿಕರ ದಂಪತಿಗಳಿಗೆ ಗೌರವ ಸನ್ಮಾನ, ರಾಷ್ಟ್ರ ಮತ್ತು ಧರ್ಮ ಹಿಂದುತ್ವದ ಬಗ್ಗೆ ಕು. ಚೈತ್ರಾ ಕುಂದಾಪೂರರಿಂದ ಉಪನ್ಯಾಸ ನಡೆಯಲಿದೆ. ಮುರಗೋಡ ನೀಲಕಂಠ ಮಹಾಸ್ವಾಮೀಜಿ ಸಾನಿಧ್ಯದಲ್ಲಿ, ಅಧ್ಯಕ್ಷತೆಯನ್ನು ಧಾರವಾಡ ಮಲ್ಲಿಕಾರ್ಜುನ ಮಹಾಸ್ವಾಮೀಜಿ ವಹಿಸುವರು.
ದಿ. 13ರಂದು ಸಂಜೆ 6ಕ್ಕೆ ಡ್ಯಾನ್ಸ ಕರುನಾಡು ಡ್ಯಾನ್ಸ ರಾಜ್ಯ ಮಟ್ಟದ ಸಮೂಹ ನೃತ್ಯ ಸ್ಪರ್ಧೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಧಾರವಾಡ ಶಿಕ್ಷಣ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ, ಉಪವಿಭಾಗಾಧಿಕಾರಿ ಶಶಿಧರ ಬಗಲಿ, ತಹಶೀಲ್ದಾರ ಬಸವರಾಜ ನಾಗರಾಳ, ಶ್ರೀರಾಮ ಸೇನೆ ಮುಖಂಡ ರಮಾಕಾಂತ ಕೊಂಡಸ್ಕರ ಆಗಮಿಸುವರು. ವಿಶೇಷ ಅಹ್ವಾನಿತರಾಗಿ ಧಾರಾವಾಹಿ ನಟಿಯರಾದ ಪಾರು ಮತ್ತು ಅಂಕಿತಾ, ಕಲಾವಿದರಾದ ಹನಮಂತ, ದಿವ್ಯಾ ರಾಮಚಂದ್ರ, ಅರ್ಜುನ ಇಟಗಿ, ಮಹನ್ಯಾ ಗುರುಪಾಟೀಲ ಪಾಲ್ಗೊಳ್ಳುವರು.
ದಿ. 14ರಂದು ಬೆಳಿಗ್ಗೆ 8ಕ್ಕೆ ಪ್ರತ್ಯಂಗೀರ ಲಕ್ಷ ಜಪ ಹಾಗೂ ಹೋಮ ಬೆಳಿಗ್ಗೆ 10ಕ್ಕೆ ಜೀ ಟಿವಿ ಮಹರ್ಷಿವಾಣಿ ಖ್ಯಾತಿಯ ಡಾ. ಮಹರ್ಷಿ ಆನಂದ ಗುರೂಜಿ ಸಾನಿಧ್ಯದಲ್ಲಿ ಮುತೈದೆಯರಿಗೆ ಬಾಗಿನ ಅರ್ಪಣೆ, ಆನಂದ ಸಿದ್ದಿಪೀಠಂದಿಂದ ಶ್ರೀ ಚಕ್ರ ವಿತರಣೆ, ಮಧ್ಯಾಹ್ನ 12ಕ್ಕೆ ಗುರುಜಿಯವರ ಸಾನಿದ್ಯದಲ್ಲಿ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ಧರ್ಮಸಭೆ ನಡೆಯಲಿದೆ. ಸಾನಿದ್ಯವನ್ನು ತೋರಗಲ್ಲ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮೀಜಿ ವಹಿಸುವರು. ಅಧ್ಯಕ್ಷತೆಯನ್ನು ಬಾಗೋಜಿಕೊಪ್ಪ ಡಾ. ಶಿವಲಿಂಗ ಮುರಘರಾಜೇಂದ್ರ ಮಹಾಸ್ವಾಮೀಜಿ ವಹಿಸುವರು.
ಸಂಜೆ 6ಕ್ಕೆ ಸಂಗೀತ ಸಂಜೆ, ನಗೆಮುದ್ದು ಕಾರ್ಯಕ್ರಮ, ಸಂಗೀತ ಕಾರ್ಯಕ್ರಮ, ಜೀ ಟಿವಿ ಕಾಮಿಡಿ ಕಿಲಾಡಿ ತಂಡದಿಂದ ಹಾಸ್ಯೋತ್ಸವ ನಡೆಯಲಿದೆ. ಸಾನಿಧÀ್ಯವನ್ನು ರಾಯಚೂರ ತ್ರಿವಿದ ದಾಸೋಹ ಮೂರ್ತಿ ಬ್ರಹ್ಮಶ್ರೀ ವೀರಭದ್ರ ಸ್ವಾಮೀಜಿ ವಹಿಸುವರು. ಅಧ್ಯಕ್ಷತೆಯನ್ನು ಕಮತಗಿ ಹುಚ್ಚೇಶ್ವರ ಮಠದ ಹುಚ್ಚೇಶ್ವರ ಸ್ವಾಮೀಜಿ ವಹಿಸುವರು. ಕುಂದರಗಿ ಅಮರಸಿದ್ದೇಶ್ವರ ಸ್ವಾಮೀಜಿ ಉಪನ್ಯಾಸ ನೀಡುವರು. ಅರಳಿಕಟ್ಟಿ ಶಿವಮೂರ್ತಿ ದೇವರು, ದೊಡವಾಡ ಜಡಿಸಿದ್ದೇಶ್ವರ ಸ್ವಾಮೀಜಿ ನೇತೃತ್ವ ವಹಿಸುವರು. ವಿಶೇಷ ಅಹ್ವಾನಿತರಾಗಿ ದಾರಾವಾಹಿ ನಟಿಯರಾದ ಸತ್ಯ, ಮಿಂಚು,ಮಂಥನಾ, ಕಲಾವಿದರಾದ ಸುರಜ, ಕಿನ್ನಾಳ, ಸಿದ್ದಿ, ಸಂಜು ಬಸಯ್ಯಾ, ಓಂಖಾರ ಪತ್ತಾರ, ಕಾಶಿಂ ಪಾಲ್ಗೊಳ್ಳುವರು.
ದಿ. 15ರಂದು ಬೆಳಿಗ್ಗೆ 6ಕ್ಕೆ ಅಮ್ಮನವರಿಗೆ ಅಭಿಷೇಕ, ಕುಂಕುಮಾರ್ಚನೆ ನಡೆಯಲಿದೆ. ಸಂಜೆ 4ಕ್ಕೆ ಶಾಖಾ ಮೂರುಸಾವಿರಮಠದಿಂದ ಸಕಲ ವಾದ್ಯ ಮೇಳದೊಂದಿಗೆ ಪೂರ್ಣಕುಂಭಮೇಳದೊಂದಿಗೆ ಉಜ್ಜಯಿನಿ ಸದ್ದರ್ಮ ಸಿಂಹಾಸನಾಧಿಶ್ವರ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಭಗವಾತ್ಪಾದರ ಸಾರೋಟ ಉತ್ಸವ ಅಮ್ಮನವರ ದೇವಸ್ಥಾನಕ್ಕೆ ತಲುಪುವುದು. ಸಂಜೆ 6 ಕ್ಕೆ ಧರ್ಮ ಚಿಂತನ ಗೋಷ್ಠಿ ಶಾಂಭವಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಅಧ್ಯಕ್ಷತೆಯನ್ನು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ದ ರಾಜಯೋಗಿಂದ್ರ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಶಿರಹಟ್ಟಿ ಫಕೀರೇಶ್ವರ ಮಠದ ಜ. ಫಕೀರಸಿದ್ದರಾಮ ಮಹಾಸ್ವಾಮೀಜಿ ಉದ್ಘಾಟಿಸುವರು. ವಿವಿಧ ಮಠಾಧೀಶರು ಪಾಲ್ಗೊಳ್ಳುವರು.
ಇದೇ ವೇಳೆ ಪ್ರಸಕ್ತ ವರ್ಷದ ಶಾಂಭವಿ ಶ್ರೀ ಪ್ರಶಸ್ತಿಯನ್ನು ಚಲನಚಿತ್ರ ಸಂಗೀತ ನಿರ್ದೆಶಕ ಅರ್ಜುನ ಜನ್ಯಾ ಅವರಿಗೆ ನೀಡಿ ಗೌರವಿಸಲಾಗುವುದು. ರಾತ್ರಿ 10ಕ್ಕೆ ಕುಂಟಕೋಣ ಮೂಕ ಜಾಣ ನಾಟಕ ಪ್ರದರ್ಶನ ನಡೆಯಲಿದೆ. ಸದ್ಬಕ್ತರು ಕಡ್ಡಾಯವಾಗಿ ಮಾಸ್ಕ ದರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದರು. ಜಾತ್ರಾ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.