ಅಥಣಿ

ಮಡಸನ್ಸ ರಸಾಯನ ರಹಿತ ಬೆಲ್ಲ ತಯಾರಿಕಾ ಘಟಕಕ್ಕೆ ಚಾಲನೆ

ಮಡಸನ್ಸ ರಸಾಯನ ರಹಿತ ಬೆಲ್ಲ ತಯಾರಿಕಾ ಘಟಕಕ್ಕೆ ಚಾಲನೆ

ಅಥಣಿ 08: ಯುವಕರು ಸ್ವಯಂ ಉದ್ಯೋಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರಕಾರ ಅನೇಕ ಸಬ್ಸಿಡಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಕರೆ ನೀಡಿದರು.  

ಅವರು ದರೂರ ಗ್ರಾಮದ ಅರವಟಿಗೆಯಲ್ಲಿ ಮಡಸನ್ಸ ರಸಾಯನ ರಹಿತ ಬೆಲ್ಲ ತಯಾರಿಕಾ ಘಟಕಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಈ ಕಾರಖಾನೆ ದಿನನಿತ್ಯ 30 ಟನ್‌ಗಳಷ್ಟು  ಕಬ್ಬು ನುರಿಸಿ 5 ಟನ್ ರಸಾಯನ ರಹಿತ ಬೆಲ್ಲ ಉತ್ಪಾದನೆ ಮಾಡುತ್ತದೆ ಆದರೆ ಈ ಬೆಲ್ಲದ ಮಾರಾಟಕ್ಕೆ ವ್ಯವಸ್ಥಿತವಾಗಿ ಮಾರುಕಟ್ಟೆ ಕಲ್ಪಿಸಿಕೊಳ್ಳಲು ಶ್ರಮಿಸಬೇಕಾಗುತ್ತದೆ ಎಂದರು.        

ರಸಾಯನ ರಹಿತ ಬೆಲ್ಲ ಉತ್ಪಾದಿಸುವುದಷ್ಟೇ ಅಲ್ಲ ಕಬ್ಬನ್ನು ಕೂಡ ಸಾವಯವ ಪದ್ಧತಿಯಲ್ಲಿ ಬೆಳೆದು ಆ ಕಬ್ಬಿನಿಂದ ಉತ್ಪಾದಿಸಿದ ಸಾವಯವ ಬೆಲ್ಲವನ್ನು ಅತೀ ಸುಲಭವಾಗಿ ವಿದೇಶಗಳಲ್ಲಿಯೂ ಸಹ ಮಾರಾಟ ಮಾಡಲು ಸಾಧ್ಯವಾಗುತ್ತದೆ. ವೈಜ್ಞಾನಿಕವಾಗಿ ರಸಾಯನ ರಹಿತ ಬೆಲ್ಲ ಉತ್ಪಾದಿಸಿದಲ್ಲಿ ನಾನು ನಿಮ್ಮೊಂದಿಗೆ ಮಾರಾಟದ ವ್ಯವಸ್ಥೆಯಲ್ಲಿ ಸಹಕಾರ ನೀಡುತ್ತೇನೆ ಎಂದ ಅವರು ಇತ್ತೀಚಿಗೆ ರಸಾಯನ ಮಿಶ್ರಿತ ಆಹಾರ ಪದಾರ್ಥಗಳ ಬಳಕೆಯಿಂದ ದೇಶದಲ್ಲಿ ಕ್ಯಾನ್ಸರ್ ರೋಗಿಗಳ ಪ್ರಮಾಣ ಹೆಚ್ಚಾಗುತ್ತಿದ್ದು, ಇದರಿಂದ ಜನ ಸಾವಯವದತ್ತ ಒಲವು ತೋರುತ್ತಿದ್ದಾರೆ ಎಂದರು.   

ರೈತ ಗುಂಪಿನ ನಾಯಕ ಸುರೇಶ ಮಾಯಣ್ಣವರ ನೇತೃತ್ವದಲ್ಲಿ ದರೂರ ಗ್ರಾಮದ ರೈತರು ಗುಂಪುಗೂಡಿ ಸಾವಯವ ಬೆಲ್ಲ ಉತ್ಪಾದಿಸಿ ರೈತರನ್ನು ಸ್ವಾವಲಂಬನೆಯತ್ತ ಕೊಂಡೊಯ್ಯುತ್ತಿರುವ ನಿಮ್ಮ ಕಾರ್ಯಕ್ಕೆ ನಾನು ನಿಮ್ಮ ಜೊತೆಗೆ ಇರುತ್ತೇನೆ ಎಂದರು.  

ರೈತ ಗುಂಪಿನ ನಾಯಕ ಸುರೇಶ ಮಾಯಣ್ಣವರ ಮಾತನಾಡಿ, ಈ ಕಂಪನಿ ಪ್ರಾರಂಭಿಸಲು ಶಾಸಕ ಲಕ್ಷ್ಮಣ ಸವದಿ ಮಾರ್ಗದರ್ಶನ ನೀಡಿದ್ದು, ಪ್ರಾರಂಭದಲ್ಲಿ ಲಕ್ಷ್ಮಣ ಸವದಿ ಬಿಡಿಸಿಸಿ ಬ್ಯಾಂಕ ಮೂಲಕ ರಿಯಾಯತಿ ಬಡ್ಡಿ ದರದಲ್ಲಿ ಅತೀ ಶೀಘ್ರದಲ್ಲಿಯೇ ಸಾಲ ಮಂಜೂರು ಮಾಡಿಸಿಕೊಟ್ಟರು. ಇದರಿಂದ ಈ ಕಾರಖಾನೆ ಪ್ರಾರಂಭಗೊಳ್ಳಲು ಅನಕೂಲವಾಯಿತು ಎಂದ ಅವರು ಈ ನಮ್ಮ ಕಾರಖಾನೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ 35ಅ ಸಬ್ಸಿಡಿ ಕೂಡ ದೊರಕಿದ್ದು, ಇದೇ ಮಾದರಿಯಲ್ಲಿ  ಗಾಣದ ಎಣ್ಣೆ  ಉತ್ಪಾದನೆ ಸೇರಿದಂತೆ  ಅನೇಕ ಕೃಷಿ ಕಚ್ಚಾ ವಸ್ತುಗಳನ್ನು ಪಕ್ಕಾ ವಸ್ತುಗಳಾಗಿ ಉತ್ಪಾದಿಸಲು ಕಾರಖಾನೆಗಳನ್ನು ಪ್ರಾರಂಭಿಸಲು ರೈತರು ಮುಂದಾಗಿ ಸರಕಾರದ ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಎಂದರು. ನಾವು ಈ ಕಾರಖಾನೆಗೆ ಮಡಸನ್ಸ ಹೆಸರು ಇಟ್ಟಿದ್ದು, ಮಡಸನ್ಸ ಎಂದರೆ ರೈತನ ಮಕ್ಕಳು ಎಂದಾಗುತ್ತದೆ ಎಂದರು.  

ಅತಿಥಿಗಳಾಗಿ ಆಗಮಿಸಿ ಮಾತನಾಡಿದ ರೈತ ಧುರೀಣ ರಾಜು ನಾಡಗೌಡ, ರೈತರು ತಾವು ಬೆಳೆದ ಬೆಳೆಗಳಿಗೆ ಯೋಗ್ಯ ಮತ್ತು ಬೆಂಬಲ ಬೆಲೆ ಸಿಗಬೇಕಾದರೆ ಕೃಷಿ ಕಚ್ಚಾ ವಸ್ತುಗಳಿಂದ ಪಕ್ಕಾ ವಸ್ತುಗಳಾಗಿ ಪರಿವರ್ತಿಸಿದಲ್ಲಿ ಮಾತ್ರ ರೈತರಿಗೆ ಕೃಷಿ ಉತ್ಪನ್ನಗಳಿಂದ ಲಾಭವಾಗುತ್ತದೆ ಎಂದ ಅವರು ಇತ್ತೀಚಿನ ವರ್ಷಗಳಲ್ಲಿ ರಸಾಯನ ಬಳಸುತ್ತಿರುವ ಪರಿಣಾಮ ಜಮೀನುಗಳು ಫಲವತ್ತತೆಯನ್ನು ಕಳೆದುಕೊಳ್ಳುತ್ತಿದ್ದು, ಇದರಿಂದಾಗುವ ಹಾನಿಯನ್ನು ನಾವು ಉತ್ಪಾದಕರ ಸಂಘ ಮಾಡಿಕೊಂಡು ಪಕ್ಕಾ ವಸ್ತುಗಳನ್ನು ಉತ್ಪಾದಿಸಬೇಕಿದೆ ಎಂದರು.  

ಸಾನಿಧ್ಯ ವಹಿಸಿ ಮಾತನಾಡಿದ ಅಮರೇಶ್ವರ ಮಹಾರಾಜರು, ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಪಕ್ಕಾ ವಸ್ತುಗಳನ್ನಾಗಿಸಿ ನೇರವಾಗಿ ಗ್ರಾಹಕರಿಗೆ ತಲುಪಿಸಬೇಕು. ಆಗ ಮಾತ್ರ ರೈತರು ಸ್ವಾವಲಂಬಿಗಳಾಗಲು ಸಾಧ್ಯ ಎಂದ ಅವರು ಈ ನಿಟ್ಟಿನಲ್ಲಿ ಸುರೇಶ ಮಾಯಣ್ಣವರ ಅವರ ಪ್ರಯತ್ನ ಅಭಿನಂದನಾರ್ಹ ಎಂದರು.  

 ವೇದಿಕೆಯಲ್ಲಿ ಡಿಸಿಸಿ ಬ್ಯಾಂಕ ನಿರ್ದೇಶಕ ಸಂಜೀವ ಅವಕ್ಕನವರ, ಕೃಷ್ಣಾ ಸಕ್ಕರೆ ಕಾರಖಾನೆ ನಿರ್ದೇಶಕ ಶಾಂತಿನಾಥ ನಂದೇಶ್ವರ ಉಪಸ್ಥಿತರಿದ್ದರು.   ಪಿ.ಎಲ್‌.ಡಿ ಬ್ಯಾಂಕ ಅಧ್ಯಕ್ಷ ದುಂಡಪ್ಪ ಅಸ್ಕಿ, ಮುಖಂಡರಾದ ಶ್ರೀಕಾಂತ ಅಸ್ಕಿ, ಮಹಾದೇವ ಬಸಗೌಡರ, ಮಹಾದೇವ ಬಸಗೌಡರ, ಧರ್ಮಣ್ಣ ದಳವಾಯಿ, ಸುರೇಶ ಮಾಯಣ್ಣವರ, ಅಶೋಕ್ ಬಸಗೌಡರ್, ಶಿವಗೊಂಡ ಬಸಗೌಡರ್, ಪ್ರಕಾಶ್ ಬಸಗೌಡರ್, ಶಂಕರ್ ಮಾಯಣ್ಣವರ, ಬಾಳಗೌಡ ಬಸಗೌಡರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ