ಲಸಿಕೆ ಬಗ್ಗೆ ಅಂಜಿಕೆ-ಆತಂಕ ಬೇಡ : ಶಂಕರಗೌಡ ಪಾಟೀಲ
ಹಿರೇಬಾಗೇವಾಡಿ 20 : ಕಳೆದ 8 ತಿಂಗಳಿನಿಂದ ಮಹಾಮಾರಿ ಕೋರೋನಾದಿಂದ ಇಡೀ ಜಗತ್ತೇ ತಲ್ಲಣಗೊಂಡಿದೆ. ಸತತ ಪ್ರಯತ್ನದಿಂದ ಸಂಜೀವಿನಿ ಎನ್ನಲಾದ ಕೊರೊನಾ ಲಸಿಕೆಯನ್ನು ಕಂಡು ಹಿಡಿದಿದ್ದು ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಕೊರೊನಾ ಲಸಿಕೆಯನ್ನು ಕೊರೊನಾ ವಾರಿಯರ‍್ಸಗಳಾದ ಅಂಗನವಾಡಿ, ಆಶಾ ಕಾರ‍್ಯಕರ್ತೆಯರಿಗೆ, ಆಸ್ಪತ್ರೆಯ ವೈದ್ಯ ಸಿಬ್ಬಂದಿಗಳಿಗೆ ಹಾಗೂ ಖಾಸಗಿ ವೈದ್ಯ ಸಿಬ್ಬಂದಿಗಳಿಗೆ ನೀಡಲಾಗುತ್ತಿದ್ದು ಪ್ರತಿಯೊಬ್ಬರೂ ಲಸಿಕೆ ಕುರಿತಂತೆ ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ ಅಂಜಿಕೆ ಅಳುಕವಿಲ್ಲದೇ ಧೈರ್ಯದಿಂದ ಪ್ರತಿಯೊಬ್ಬ ಆರೋಗ್ಯ ಕಾರ‍್ಯಕರ್ತರು ಲಸಿಕೆ ಪಡೆಯುವಂತೆ ಕರೆ ನೀಡಿದರು. ಆರೋಗ್ಯ ಸೇವೆ ನೀಡುವರು ಆರೋಗ್ಯವಾಗಿದ್ದಾಗ ಮಾತ್ರ ಸಮಾಜಕ್ಕೆ ಉತ್ತಮ ಸೇವೆ ನೀಡಲು ಸಾದ್ಯವೆಂದರು.
ಸಮುದಾಯ ಆರೋಗ್ಯ ಕೇಂದ್ರ ಆಸ್ಪತ್ರೆಯಲ್ಲಿ ಕೊರೊನಾ ಲಸಿಕಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕಾ ಪಂಚಾಯತ್ ಸದಸ್ಯೆ ಶಮೀನಾ ನಧಾಪ್ ಮಾತನಾಡಿ ಹಿರೇಬಾಗೇವಾಡಿಯಲ್ಲಿ ಪ್ರಪ್ರಥಮ ಕೋರಾನಾ ಕೇಸ್ ಪತ್ತೆಯಾಗಿ ಹಲವಾರು ತಿಂಗಳು ಪ್ರಕರಣಗಳು ಹೆಚ್ಚುತ್ತಾ ಆತಂಕದ ವಾತವಾರಣ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಸ್ಥಳೀಯ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನೊಳಗೊಂಡಂತೆ ಎಲ್ಲಾ ಸಿಬ್ಬಂದಿಗಳು ಹಗಲಿರುಳು ಶ್ರಮ ವಹಿಸಿ ಸೇವೆ ಸಲ್ಲಿಸಿದ್ದು ಅಭಿನಂದನಾರ್ಹವಾಗಿದೆ ಎಂದರಲ್ಲದೇ ಹಿರೇಬಾಗೇವಾಡಿ ಗ್ರಾಮದ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ತಾಲೂಕಾ ಪಂಚಾಯತ ಸದಸ್ಯೆ ಗಂಗಮ್ಮಾ ಪಾಟೀಲ ಮತ್ತು ಬೆಳಗಾವಿ ತಾಲೂಕಾ ಹಿರಿಯ ಆರೋಗ್ಯ ಸಹಾಯಕ ವಿ.ಎಲ್.ಪಾತಲಿ ಅತಿಥಿಗಳಾಗಿ,ಆಡಳಿತ ವೈದ್ಯಾಧಿಕಾರಿ ಡಾ. ನೀತಾ ವಿ ಚವ್ವಾಣ, ದಂತ ಆರೋಗ್ಯಾಧಿಕಾರಿ ಡಾ. ದೀಪಾ ಮಗದುಮ್, ಹಿರಿಯ ಪುರುಷ ಆರೋಗ್ಯ ಸಹಾಯಕ ಎಸ್.ಬಿ.ಮೇಳೇದ, ಕಛೇರಿ ಅಧೀಕ್ಷಕೆ ಶ್ರೀಮತಿ ಸುವರ್ಣಾ ಶೇಡಬಾಳ, ವಾಣೀಶ್ರೀ ಕೊಂಕಣಿ, ಶುಶ್ರೂಷಕ ಮಂಜುನಾಥ ಹೆಚ್, ಸುರೇಶ ಕುಂದರಗಿ ಒಳಗೊಂಡಂತೆ ಆಶಾ, ಅಂಗನವಾಡಿ ಕಾರ‍್ಯಕರ್ತೆಯರು ಮತ್ತು ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮೊದಲಿಗೆ ಆಕಾಶ್ ಥಬಾಜ ಸ್ವಾಗತಿಸಿ ಕಾರ‍್ಯಕ್ರಮ ನಿರೂಪಿಸಿದರು. ಎಸ್.ಬಿಮೇಳೆದ ವಂದಿಸಿದರು.