ಶಿಕ್ಷಕರ ದಿನಾಚರಣೆಯಂದು ಗಮನ ಸೆಳೆದ ನಾಟಕ
ಹೊಸಪೇಟೆ 06: ನಗರದ ಭಟ್ರಳ್ಳಿ ಆಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ “ಗುರು ಶಿಷ್ಯರ ಸಂಬಂಧ” ಎನ್ನುವ ನಾಟಕ ಪ್ರದರ್ಶನಗೊಂಡಿತು. ಈ ನಾಟಕವು ನೆರೆದ ಪ್ರೇಕ್ಷಕರ ಗಮನ ಸೆಳೆದು, ಗುರುವಿಗೆ ಸಿಗುವ ಸ್ಥಾನಮಾನ ಯಾವ ವೃತ್ತಿಗೂ ಸಿಗಲಾರದು ಎಂಬುದನ್ನು ಸಾಕ್ಷೀಕರಿಸಿ ಹೇಳುವಂತಿತ್ತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಹಾಗೂ ಥಿಯೇಟರ್ ಚೈತನ್ಯ ಕಲ್ಚರಲ್ ಟ್ರಸ್ಟ್ ಸಹಯೋಗದಲ್ಲಿ ಮಲ್ಲೇಶ್ ಮಾಲ್ವಿ ತಂಡದಿಂದ ನಾಟಕ ಪ್ರದರ್ಶನಗೊಂಡಿತು. ಮುಖ್ಯ ಅತಿಥಿಗಳಾಗಿ ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ ಮತ್ತು ನಗರಸಭೆ ಸದಸ್ಯ ಕಿರಣ್ ಭಾಗವಹಿಸಿದ್ದರು. ಪಂಡಿತ್ ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾರುತಿ, ವೀಣಾ, ವೀರೇಶ್, ಚೈತನ್ಯ ಕಲ್ಚರಲ್ ಟ್ರಸ್ಟ್ನ ಅಧ್ಯಕ್ಷೆ ರೇಣುಕಾ ಎಲ್ಲಪ್ಪ, ಕಾರ್ಯದರ್ಶಿ ಸಂತೋಷ, ಮನೋಹರ್ ಮತ್ತಿತರರು ಉಪಸ್ಥಿತರಿದ್ದರು. ಸುನಿಲ್ ಕುಮಾರ್ ಹಂಪಾಪಟ್ಟಣ ನಿರೂಪಣೆ, ಚೇತನ ಜಿ ವಿ ದಾವಣಗೆರೆ ಇವರ ಹಾಡುಗಾರಿಕೆಗಳು ಸಹ ಪ್ರೇಕ್ಷಕರ ಗಮನಸೆಳೆದವು.