30 ವರ್ಷ ಮೇಲ್ಪಟ್ಟವರು ಪ್ರತಿ 6 ತಿಂಗಳಿಗೊಮ್ಮೆ ಮಧುಮೇಹ ಪರೀಕ್ಷೆ ಮಾಡಿಸಿಕೊಳ್ಳಲು ಡಾ.ಮರಿಯಂಬಿ ವಿ.ಕೆ ಸಲಹೆ
ಲೋಕದರ್ಶನ ವರದಿ
ಬಳ್ಳಾರಿ 16: 30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಪ್ರತಿ 6 ತಿಂಗಳಿಗೊಮ್ಮೆ ಸಕ್ಕರೆ ಕಾಯಿಲೆ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಸದೃಢ ಆರೋಗ್ಯವನ್ನು ಹೊಂದಬಹುದು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ಮಧುಮೇಹ ದಿನಾಚರಣೆಯ ಅಂಗವಾಗಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ‘ಮಧುಮೇಹ ಜಾಗೃತಿ ನಡೆ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ವರ್ಷ ನವೆಂಬರ್ 14ರಂದು ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ವಿಶ್ವ ಮಧುಮೇಹ ದಿನದ ಘೋಷವಾಕ್ಯವಾಗಿ “ಮಧುಮೇಹದ ವಿರುದ್ಧ ಆರಂಭಿಕ ಕ್ರಮ ಹಿ ಉತ್ತಮ ಆರೋಗ್ಯದತ್ತ ಮೊದಲ ಹೆಜ್ಜೆ” ಎಂಬುದಾಗಿದೆ ಎಂದರು.
ಅಧಿಕ ಬಾಯಾರಿಕೆ, ಪದೇಪದೇ ಮೂತ್ರ ವಿಸರ್ಜನೆ, ಅಧಿಕ ಹಸಿವು, ಯಾವುದೇ ಕಾರಣವಿಲ್ಲದೆ ತೂಕ ಕಡಿಮೆಯಾಗುವುದು, ತೀವ್ರ ಸುಸ್ತು ಮತ್ತು ನಿಶ್ಯಕ್ತಿ, ದೃಷ್ಟಿ ಮಂಜಾಗುವುದು ಹಾಗೂ ಗಾಯಗಳು ಬೇಗ ಗುಣವಾಗದಿರುವುದು ಮಧುಮೇಹದ ಪ್ರಮುಖ ಲಕ್ಷಣಗಳಾಗಿವೆ ಎಂದು ತಿಳಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್. ಬಸವರೆಡ್ಡಿ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲೂ ಮಧುಮೇಹ ಕಾಯಿಲೆ ಕಂಡುಬರುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಮಕ್ಕಳ ಆರೋಗ್ಯ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಅನಾರೋಗ್ಯಕರ ಅಭ್ಯಾಸಗಳನ್ನು ದೂರಮಾಡಿ ಉತ್ತಮ ಆರೋಗ್ಯ ಒದಗಿಸಬೇಕು ಎಂದು ತಿಳಿಸಿದರು.
ವಯಸ್ಕರು ಪ್ರತಿದಿನ ಕನಿಷ್ಠ 30 ನಿಮಿಷ ವ್ಯಾಯಾಮ ಅಥವಾ ನಡೆಸುವುದು, ಪೌಷ್ಟಿಕಾಂಶಯುಕ್ತ ಸಮತೋಲಿತ ಆಹಾರ ಸೇವಿಸುವುದು, ಸಕ್ಕರೆ ಹಾಗೂ ಕೊಬ್ಬಿನಾಂಶವನ್ನು ಮಿತಗೊಳಿಸುವುದು, ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಹಾಗೂ ಧೂಮಪಾನ ಮತ್ತು ತಂಬಾಕು ಸೇವನೆಯಿಂದ ದೂರವಿರುವಂತೆ ತಿಳಿಸಿದರು.
ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ. ಮೇದಿನಿ ಅವರು ಮಧುಮೇಹ ನಿಯಂತ್ರಣ ಕುರಿತು ವಿವರವಾಗಿ ಮಾತನಾಡಿದರು.
*ಜಾಗೃತಿ ಜಾಥಾ:*
ನಂತರ ಜಿಲ್ಲಾ ಆಸ್ಪತ್ರೆಯಿಂದ ಆರಂಭಗೊಂಡ ‘ಮಧುಮೇಹ ಜಾಗೃತಿ ನಡೆ' ಜಾಥಾವು ಪವನ್ ಹೋಟೆಲ್ ರಸ್ತೆ, ರೂಪನಗುಡಿ ರಸ್ತೆ, ದೊಡ್ಡ ಮಾರ್ಕೆಟ್, ಬ್ರೂಸ್ ಪೇಟೆ, ಬೆಂಗಳೂರು ರಸ್ತೆ, ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಸಾಗಿ ಪುನಃ ಜಿಲ್ಲಾ ಆಸ್ಪತ್ರೆ ಆವರಣ ತಲುಪಿತು.
ಈ ವೇಳೆ ದೊಡ್ಡ ಮಾರ್ಕೆಟ್ ಹಾಗೂ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರಿಗೆ ಘೋಷಣೆಗಳ ಮೂಲಕ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಬಿ.ಕೆ. ಸುಂದರ್, ಡಾ.ತಿಪ್ಪಾರೆಡ್ಡಿ, ಬಿಎಂಸಿಆರ್ಸಿ ತಜ್ಞ ವೈದ್ಯರು, ಹಿರಿಯ ವೈದ್ಯಾಧಿಕಾರಿಗಳು, ಜಿಲ್ಲಾ ಸರ್ವೇಕ್ಷಣಾ ಘಟಕದ ಸಿಬ್ಬಂದಿ, ಐಎಂಎ ಪದಾಧಿಕಾರಿಗಳು, ಡಾ.ಜಬೀನ್ ತಾಜ್, ಡಾ.ವಿಶಾಲಾಕ್ಷಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ., ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೇಣುಕಾ ಜಡಗಣ್ಣವರ್ ಹಾಗೂ ಇತರ ಸಿಬ್ಬಂದಿ ಉಪಸ್ಥಿತರಿದ್ದರು.