ಬೈಲಹೊಂಗಲ

ಡಾ. ವಿರೇಂದ್ರ ಹೆಗಡೆ ಗ್ರಾಮೋದ್ಧಾರಕ್ಕೆ ಆದ್ಯತೆ

ಡಾ. ವಿರೇಂದ್ರ ಹೆಗಡೆ ಗ್ರಾಮೋದ್ಧಾರಕ್ಕೆ ಆದ್ಯತೆ
ಬೈಲಹೊಂಗಲ ತಾಲೂಕಿನ ಸಾಣಿಕೊಪ್ಪ ಗ್ರಾಮದಲ್ಲಿ ನಡೆಯುತ್ತಿರುವ ಕೆರೆ ಅಭಿವೃದ್ದಿ ಚಿತ್ರಗಳು

ಗ್ರಾಮ ಸ್ವರಾಜ್ಯದ ಕಲ್ಪನೆ ಹಲವಾರು ಜನಪರ ಯೋಜನೆಗಳಿಂದ ಸಾಕಾರ

ಬೈಲಹೊಂಗಲ 30: ಸಮಾಜ ಸದಾ ಸುಖದಿಂದ ಜೀವನ ನಡೆಸಬೇಕು. ಸ್ವಾವಲಂಬಿಯಾಗಿ ಬದುಕಬೇಕು. ಪರಿಸರದಲ್ಲಿನ ಸಂಪನ್ಮೂಲಗಳನ್ನೇ ಬಳಸಿಕೊಂಡು ಜನರು ಅಭಿವೃದ್ಧಿ ಹೊಂದಬೇಕು ಎಂಬ ಮಹತ್ವಾಕಾಂಕ್ಷೆಯ ಚಿಂತನೆ ರೂಪಿಸಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಸ್ಥೆ ಮೂಲಕ ರಾಜ್ಯದಲ್ಲಿ ಹಲವಾರು ಗುರುತರವಾದ ಯೋಜನೆಗಳನ್ನು ಜಾರಿ ಮಾಡಿ ಗ್ರಾಮ ಸ್ವರಾಜ್ಯದ ಕಲ್ಪನೆ ಹೊಂದಿದ ಧರ್ಮಸ್ಥಳದ ಡಾ. ವಿರೇಂದ್ರ ಹೆಗಡೆ ಅವರು ಸಮಾಜದಲ್ಲಿ ಮಾದರಿಯಾಗಿ ಗೋಚರವಾಗಿದ್ದಾರೆ.

ಧಾರ್ಮಿಕ, ಶೈಕ್ಷಣಿಕ, ವೈದ್ಯಕೀಯ, ಸಾಮಾಜಿಕ, ಅಧ್ಯಾತ್ಮಿಕ ಕ್ಷೇತ್ರದಲ್ಲಿ ಹಲವಾರು ಮೈಲಿಗಲ್ಲು ಸಾಧಿಸಿದ ಡಾ. ವಿರೇಂದ್ರ ಹೆಗಡೆ ಅವರು ತಮ್ಮ ಸಂಸ್ಥೆಯಲ್ಲಿ ಜನ ಕಲ್ಯಾಣದ ಕಾರ್ಯಗಳಿಗೆ ಹೆಚ್ಚಿನ ಮಹತ್ವ ಕೊಡುತ್ತಾ ಗ್ರಾಮೋದ್ಧಾರವಾಗಬೇಕೆಂದು ಗ್ರಾಮೀಣ ಪ್ರದೇಶಗಳಲ್ಲಿ ಜನಪರ ಯೋಜನೆಗಳಿಂದ ಭರವಸೆಯ ಬೆಳಕಾಗಿ ನಿಂತಿದ್ದಾರೆ. ಇಚ್ಚಾಶಕ್ತಿಯಿಂದ ಮಹಿಳಾ ಸಂಘಗಳನ್ನು ಸ್ಥಾಪಿಸಿ ಸ್ವಾವಲಂಬಿ ಬದುಕಿಗೆ ದಾರಿಯಾಗಿದ್ದಾರೆ.

ಬಡವ ಬಲ್ಲಿದ, ಮೇಳು, ಕೀಳು, ಜಾತಿ, ಧರ್ಮಗಳನ್ನು ಬದಿಗೊತ್ತಿ ಸಮಾನ ಅವಕಾಶವನ್ನು ಅರ್ಹರಿಗೆ ನೀಡುತ್ತಿರುವ ಶ್ರೀಗಳ ಸಾಧನೆ-ಸೇವೆ ಅನನ್ಯ. 

ತಮ್ಮ ಗ್ರಾಮಾಭಿವೃದ್ಧಿ ಯೋಜನೆಯ ಧನ ಸಹಾಯದಿಂದ ಹೂಳು, ತಾಜ್ಯ ತುಂಬಿದ್ದ ಕೆರೆಗಳಿಗೆ ಪುನಶ್ಚೇತನ ಕೊಟ್ಟು ಮರು ಬಳಕೆಗೆ ಕ್ರಿಯಾ ಯೋಜನೆ ರೂಪಿಸಿ ಅಂತರ್ಜಲ ಹೆಚ್ಚಾಗುವ ಜೊತೆಗೆ ನೀರಿನ ಕೊರತೆಯಾಗದಂತೆ ಅನ್ನದಾತನು ಸಂಕಷ್ಟಕ್ಕೀಡಾಗಬಾರದೆಂಬ ಸದುದ್ದೇಶವೂ ಹೊಂದಿ ನಮ್ಮ ಊರು ನಮ್ಮ ಕೆರೆ, ಕೆರೆ ಸಂಜೀವಿನಿ ಪ್ರಗತಿಯ ಕಾರ್ಯಗಳಿಂದ ಜನರ ಸುಖ ಜೀವನಕ್ಕೆ ನಾಂದಿಯಾಗಿದ್ದಾರೆ. 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬೈಲಹೊಂಗಲದಲ್ಲಿ 2011 ರಲ್ಲಿ ಸ್ಥಾಪಿತಗೊಂಡು ನಮ್ಮ ಊರು ನಮ್ಮ ಕರೆ ಯೋಜನೆ ಅಡಿಯಲ್ಲಿ ಈಗಾಗಲೇ ಆನಿಗೋಳ, ಚಿಕ್ಕ ಬಾಗೇವಾಡಿ, ಮರಡಿ ನಾಗಲಾಪೂರ ಕೆರೆಗಳು ಅಭಿವೃದ್ಧಿಯಾಗಿ ಹಸ್ತಾಂತರಗೊಂಡಿವೆ. ಇನ್ನೂ ಹಲವಾರು ಕೆರೆಗಳನ್ನು ನಿರ್ಮಿಸುವ ಯೋಜನೆಗಳಿವೆ.

ಸಾಣಿಕೊಪ್ಪ ಗ್ರಾಮದ ಕೆಂಗೇರಿ (ಸಣ್ಣಕೆರೆ)ಯ ಅಭಿವೃದ್ಧಿಗೆ 6 ಲಕ್ಷ 12 ಸಾವಿರ ರೂ. ಅನುದಾನ ಬಿಡುಗಡೆಯಾಗಿದ್ದು ಅಂದಾಜು 5 ಎಕರೆ 24 ಗುಂಟೆಯಲ್ಲಿ ಕೆರೆ ಮರು ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ. ಸುಮಾರು 19 ದಿನದಿಂದ ಕೆಲಸ ಪ್ರಗತಿಯಲ್ಲಿ ಸಾಗಿದ್ದು, 5954 ಟ್ರಿಪ್ ಮಣ್ಣನ್ನು ಈ ಪರಿಸರದಲ್ಲಿನ ರೈತರ ಜಮೀನುಗಳಿಗೆ ವಿಲೇವಾರಿ ಮಾಡಲಾಗಿದ್ದು, ಭವಿಷ್ಯದಲ್ಲಿ ಈ ಭಾಗದಲ್ಲಿ ಸಂಜೀವಿನಿಯಾಗಲಿದೆ ಎಂಬ ಅಶಯ ಎಲ್ಲರಲ್ಲಿದೆ. 

ಹಿರಿಯರ ವಾಡಿಕೆಯಂತೆ ಊರಿಗೊಂದು ಕೆರೆ ಕಟ್ಟಿ ನೋಡಿ ಎಂದು ಹೇಳುತ್ತಾ ಕೆರೆ ನಿರ್ಮಿಸಿ ಪೂಜಾ, ವಿಧಿವಿದಾನದೊಂದಿಗೆ ಕೆರೆ ಹಬ್ಬದ ಸಂಬ್ರಮ ಆಚರಿಸಲಾಗುತ್ತಿತ್ತು. ಅದೇ ಹಾದಿಯಲ್ಲಿ ಡಾ.ವೀರೇಂದ್ರ ಹೆಗಡೆ ನಮ್ಮ ಊರು ನಮ್ಮ ಕೆರೆ ಯೋಜನೆ ಹಲವಾರು ಜಾರಿಗೆ ತಂದಿದ್ದು ಸರಕಾರಕ್ಕೆ ಮಾದರಿಯಾಗಿ ನಿಂತಿದ್ದು ಮೆಚ್ಚುವಂತದ್ದು. ಇಡೀ ಸಮಾಜಕ್ಕಾಗಿಯೇ ಮುಡುಪಾಗಿಟ್ಟ ಅವರ ಬದುಕು ಸದಾ ಸುಖ, ಶಾಂತಿ, ಯಶಸ್ವಿಯಿಂದ ಕೂಡಿರಲಿ ಎಂಬುದು ಭಕ್ತರ ಅಶಯವಾಗಿದೆ. 

ಕೆರೆಯಿಂದ ಜನ, ಜಾನುವಾರು, ಪಕ್ಷಿಗಳಿಗೆ ಆಶ್ರಯವಾಗಬೇಕು. ಪೂಜ್ಯರ ಕನಸು ನನಸಾಗುವ ನಿಟ್ಟಿನಲ್ಲಿ ಯೋಜನೆ ಪ್ರಾರಂಭಗೊಂಡು ರಾಜ್ಯದಲ್ಲಿ 350 ಕ್ಕೂ ಹೆಚ್ಚಿನ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಒಂದು ಕೆರೆಗೆ 5 ರಿಂದ 10 ಲಕ್ಷದವರೆಗೆ ಸಂಸ್ಥೆಯಿಂದ ಅನುದಾನ ನೀಡಲಾಗುತ್ತಿದೆ.                                   

ಪ್ರದೀಪ ಜಿ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ)

ಜಿಲ್ಲಾ ನಿರ್ದೇಶಕರು, ಬೆಳಗಾವಿ 1  

ಜನರು ಸಹ ಈ ಯೋಜನೆಗೆ ತುಂಬಾ ಸಹಕಾರ ಕೊಡುತ್ತಿದ್ದು, ರಾಜ, ಮಹಾರಾಜರ ಕಾಲದಲ್ಲಿ ಕೆರೆಗಳನ್ನು ಅವಲಂಬಿಸಿದಂತೆ ಪ್ರಸ್ತುತ ಜನರು ಸಹ ಇವುಗಳನ್ನು ಸದ್ಭಳಕೆ ಆಗುವಂತೆ ಸಮೀತಿ ರಚಿಸಿ ರೈತಾಪಿ ಜನರಿಗೆ, ಸಮಾಜಕ್ಕೆ ಅನುಕೂಲದ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡಲಾಗುತ್ತಿದೆ. 

ಕೆ.ಪುರಸೋತ್ತಮ 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ)

ತಾಲೂಕಾ ಯೋಜನಾಧಿಕಾರಿ, ಬೈಲಹೊಂಗಲ



ಸುದ್ದಿ ಓದಿ