ಡಾ. ಬಾಬು ಜಗಜೀವನ್ ರಾಮ ಜನ್ಮದಿನ ಆಚರಣೆ
ಬೈಲಹೊಂಗಲ 06: ಸಮಾಜದಲ್ಲಿನ ಅಸ್ಪಶ್ಯತೆಯನ್ನು ತೊಡೆದು ಹಾಕಿ ಎಲ್ಲರಲ್ಲೂ ಸಮಾನತೆ ತರುವಲ್ಲಿ ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಂ ಕೊಡುಗೆಗಳು ಅಪಾರವಾಗಿವೆ ಎಂದು ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಹರಳಯ್ಯ ಕಾಲೋನಿಯ ಹರಳಯ್ಯ ಸಮುದಾಯ ಭವನದಲ್ಲಿ ತಾಲೂಕ ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ ಮತ್ತು ಪುರಸಭೆ ವತಿಯಿಂದ ಆಯೋಜಿಸಲಾಗಿದ್ದ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ್ ರಾಮ ಅವರ 117ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಡಾ.ಬಾಬು ಜಗಜೀವನ್ ರಾಮ್ ಅವರ ವಿಚಾರಗಳು ಅವಿಸ್ಮರಣೀಯವಾಗಿವೆ. ಸಾಮಾಜಿಕ ನ್ಯಾಯದ ಪ್ರತಿಪಾದಕರು, ಶೋಷಿತ ಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಅವರ ಧೈರ್ಯ, ತಟಸ್ಥ ಹಾಗೂ ಹೋರಾಟದ ಮನೋಭಾವದ ಗುಣಗಳು ಯುವ ಜನಾಂಗಕ್ಕೆ ಮಾರ್ಗದರ್ಶಕವಾಗಲಿ ಎಂದರು.
ತಹಶೀಲ್ದಾರ್ ಎಚ್ ಎನ್ ಶಿರಹಟ್ಟಿ, ತಾಪಂ ಇಒ ಗಂಗಾಧರ ಕಂದಕೂರ, ಡಿ ವೈ ಎಸ್ ಪಿ ರವಿ ನಾಯ್ಕ,ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿ ಬಿ ಯಮನೂರ, ವೀರೇಶ ಹಸಬಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ ಎನ್ ಪ್ಯಾಟಿ, ಶಿಕ್ಷಕ ಯು ಡಿ ತಲ್ಲೂರ, ಅರ್ಜುನ ರಾಯಬಾಗ, ಬಸವರಾಜ ರಾಯಬಾಗ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹರಳಯ್ಯ ಸಮಾಜ ಭಾಂದವರು ಇದ್ದರು.