ಡಾ. ಅಮರೇಶ ನುಗಡೋಣಿ ನಿವೃತ್ತಿ: ಬೀಳ್ಕೊಡುಗೆ
ಹಂಪಿ 30: ಹಿರಿಯ ವಿದ್ವಾಂಸರೊಂದಿಗೆ ಒಡನಾಟ, ಸಾಹಿತ್ಯ ಚಿಂತನೆ, ಚರ್ಚೆ, ಆಡಳಿತ ಅನುಭವ ಇದೆಲ್ಲ ನಾನು ಕನ್ನಡ ವಿಶ್ವವಿದ್ಯಾಲಯದಿಂದ ಪಡೆದುಕೊಂಡ ಅನುಭವ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ.ರಮೇಶ ಅವರು ಹೇಳಿದರು.
ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಡಾ. ಅಮರೇಶ ನುಗಡೋಣಿ ಅವರು ದಿ. 30ರಂದು ಸೇವೆಯಿಂದ ನಿವೃತ್ತಿ ಹೊಂದಿದ ಸಂದರ್ಭದಲ್ಲಿ ಕೋವಿಡ್-19 ನಿಯಮಗಳೊಂದಿಗೆ ಸಿಂಡಿಕೇಟ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಸರಳವಾದ ಕಾರ್ಯಕ್ರಮದಲ್ಲಿ ಕುಲಪತಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಮರೇಶ ಅವರ ‘ದಡ ಸೇರಿಸು ತಂದೆ’ ಕೃತಿಯ ಬಿಡುಗಡೆಯ ಕ್ಷಣಗಳನ್ನು ನೆನಪಿಸಿಕೊಂಡರು. ನಿವೃತ್ತಿಯ ನಂತರವೂ ಕನ್ನಡ ವಿಶ್ವವಿದ್ಯಾಲಯಕ್ಕೆ ಪ್ರಾಧ್ಯಾಪಕರ ವಿದ್ವತ್ತು ವಿದ್ಯಾರ್ಥಿಗಳಿಗೆ ಅಗತ್ಯವಾಗಿದೆ ಎಂದು ನುಡಿದರು. ಇದಕ್ಕೂ ಮೊದಲು ಡಾ.ಅಮರೇಶ ನುಗಡೋಣಿ ಅವರನ್ನು ಕುಲಪತಿಯವರು ಗೌರವಿಸಿದರು.
ಡಾ. ಅಮರೇಶ ನುಗಡೋಣಿ ಅವರನ್ನು ಕುರಿತು ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ರಹಮತ್ ತರೀಕೆರೆ ಅವರು ಮಾತನಾಡಿ ನುಗಡೋಣಿ ಅವರು ಒಬ್ಬ ಡೆಡಿಕೇಟೆಡ್ ಟೀಚರ್. ಕನ್ನಡ ವಿಶ್ವವಿದ್ಯಾಲಯಕ್ಕೆ ಸಮಯ ಕೊಡಲು ಅವರೆಂದೂ ಜಿಪುಣತನ ಮಾಡಿಲ್ಲ. ಅವರು ವಿದ್ಯಾರ್ಥಿಸ್ನೇಹಿ ಪ್ರೊಫೆಸರ್ ಆಗಿದ್ದರು. ಅವರ ಕಥೆಗಳಲ್ಲಿ ದುಡಿಮೆ, ಶ್ರಮ ಸಂಸ್ಕೃತಿ ದೊಡ್ಡ ಮೌಲ್ಯ ಆಗಿದೆ. ಶ್ರಮ ಸಂಸ್ಕೃತಿ ಮತ್ತು ಸೃಜನಶೀಲತೆಯ ಪ್ರತೀಕವಾಗಿರುವ ನುಗಡೋಣಿ ಅವರು ಈ ಮೂಲಕ ವಿಶ್ವವಿದ್ಯಾಲಯ ಕಟ್ಟಿದ್ದಾರೆ ಎಂದು ಹೇಳಿದರು.
ಭಾಷಾ ನಿಕಾಯದ ಡೀನ್ರಾದ ಡಾ.ವೀರೇಶ ಬಡಿಗೇರ ಅವರು ಅನೇಕ ಕನಸುಗಳನ್ನು ಕಟ್ಟಿಕೊಂಡು ನಾವೆಲ್ಲ ಹಲವು ಸಂಕಟ ಸಂತೋಷಗಳ ನಡುವೆ ಜೊತೆಯಾಗಿ ವಿಶ್ವವಿದ್ಯಾಲಯಕ್ಕೆ ಬಂದೆವು ಎಂದು ಅವರ ಒಡನಾಟದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತ, ವಿದ್ಯಾರ್ಥಿಗಳ ವಿಷಯದಲ್ಲಿ ಬಹಳ ಪ್ರಾಮಾಣಿಕರಾದ ನುಗಡೋಣಿ ಅವರ ಮಾರ್ಗದರ್ಶನ ವಿದ್ಯಾರ್ಥಿಗಳಿಗೆ ಬೇಕಾಗಿದೆ ಎಂದರು.
ಉಪಕುಲಸಚಿವ ಡಾ.ಎ.ವೆಂಕಟೇಶ ಮಾತನಾಡಿ ನುಗಡೋಣಿ ಅವರ ಕಾದಂಬರಿಗಳಲ್ಲಿರುವ ಭಾಷಾ ಸೊಗಡನ್ನು ನೆನೆದರು. ನಿವೃತ್ತಿ ಗೌರವ ಬೀಳ್ಕೊಡುಗೆ ಸ್ವೀಕರಿಸಿದ ಡಾ.ಅಮರೇಶ ನುಗಡೋಣಿ ಅವರು ಮಾತನಾಡುತ್ತ, ಕನ್ನಡ ವಿಶ್ವವಿದ್ಯಾಲಯ ನಮಗೆಲ್ಲ ಒಂದು ಅಸ್ತಿತ್ವ ನೀಡಿದೆ. ಬದುಕನ್ನು ಕೊಟ್ಟಿದೆ ಎಂದು ಸ್ಮರಿಸಿದರು. ಬಸವಕಲ್ಯಾಣದಲ್ಲಿ ನಡೆದ ಕ್ರಾಂತಿಗೆ, ಕಲ್ಯಾಣದ ವಚನಕಾರರಿಗೆ ಕನ್ನಡ ವಿಶ್ವವಿದ್ಯಾಲಯವನ್ನು ಹೋಲಿಸುತ್ತೇನೆ ಎಂದರು.
ನೀವೆಲ್ಲ ಅಕ್ಷರವನ್ನು ಉಸಿರಾಡಿ, ಕನ್ನಡ ವಿಶ್ವವಿದ್ಯಾಲಯಕ್ಕೆ ಕೀರ್ತಿ ತನ್ನಿ. ಕನ್ನಡ ವಿಶ್ವವಿದ್ಯಾಲಯದ ರಥ ಎಳೆಯಲು ಎಲ್ಲರೂ ಕೈ ಜೋಡಿಸಿರಿ ಎಂದು ವಿನಂತಿ ಮಾಡುತ್ತ, ಯಾವುದೇ ಹಣಕಾಸಿನ ಅಪೇಕ್ಷೆ ಇಲ್ಲದೆ ಉಚಿತವಾಗಿ ಇನ್ನು ಮುಂದೆ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಹಾಗೂ ಯೋಜನೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕೆಂದು ಕೇಳಿದರು. ಕುಲಸಚಿವ ಡಾ.ಎ.ಸುಬ್ಬಣ್ಣ ರೈ ಅವರು ಎಲ್ಲರನ್ನು ಸ್ವಾಗತಿಸಿದರು. ಡಾ.ಎ.ವೆಂಕಟೇಶ ಉಪಕುಲಸಚಿವ ಅವರು ವಂದಿಸಿದರು.