ಬೈಲಹೊಂಗಲ

ಬೂದಿಹಾಳ ಸರಕಾರಿ ಪ್ರೌಢಶಾಲೆಗೆ ಗ್ರಂಥಾಲಯ ಗಣಕೀಕರಣ ತಂತ್ರಾಂಶ ದೇಣಿಗೆ

ಬೂದಿಹಾಳ ಸರಕಾರಿ ಪ್ರೌಢಶಾಲೆಗೆ ಗ್ರಂಥಾಲಯ ಗಣಕೀಕರಣ ತಂತ್ರಾಂಶ ದೇಣಿಗೆ



ಬೈಲಹೊಂಗಲ26:  ತಾಲೂಕಿನ ಬೂದಿಹಾಳದ ಸರಕಾರಿ ಪ್ರೌಢಶಾಲೆಗೆ ಬಳ್ಳಾರಿಯ ಯುನಿಟೆಕ್ ಸೊಲ್ಯೂಶನ್ಸ್‌ ವತಿಯಿಂದ ಗ್ರಂಥಾಲಯ ಗಣಕೀಕರಣ ತಂತ್ರಾಂಶವನ್ನು ದೇಣಿಗೆ ನೀಡಲಾಯಿತು. ಇತ್ತೀಚೆಗೆ ಶಾಲೆಯಲ್ಲಿ ಈ ಆಧುನಿಕ ತಂತ್ರಾಂಶವನ್ನು ಅಳವಡಿಸಲಾಯಿತು.  

ಯುನಿಟೆಕ್ ಸೊಲ್ಯೂಷನ್ ವತಿಯಿಂದ ರಾಜ್ಯಾದ್ಯಂತ ಹಲವಾರು ಕಾಲೇಜುಗಳ ಗ್ರಂಥಾಲಯಗಳಿಗೆ ತಂತ್ರಾಂಶ ಅಳವಡಿಸಲಾಗಿದ್ದು ಬೂದಿಹಾಳ ಸರಕಾರಿ ಪ್ರೌಢಶಾಲೆ ಸದರಿ ಆಧುನಿಕ ತಂತ್ರಾಂಶ ಹೊಂದಿದ ಏಕೈಕ ಸರಕಾರಿ ಶಾಲೆಯಾಗಿದೆ. ಈ ದೊಡ್ಡ ಮೊತ್ತದ ದೇಣಿಗೆ ನೀಡಿ ಶಾಲಾ ಗ್ರಂಥಾಲಯದ ಮೆರಗು ಹೆಚ್ಚಿಸಿದ್ದಕ್ಕಾಗಿ ಮರೇಗೌಡ.ಆರ್ ಇವರನ್ನು ಎಸ್‌.ಡಿ.ಎಂ.ಸಿ ಹಾಗೂ ಶಾಲಾ ಸಿಬ್ಬಂದಿಗಳ ವತಿಯಿಂದ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಲಾಯಿತು. 

ಮುಖ್ಯಶಿಕ್ಷಕ ಎನ್‌.ಆರ್ ಠಕ್ಕಾಯಿ ಮಾತನಾಡಿ ನಮ್ಮ ಶಾಲೆಗೆ ರಾಷ್ಟ್ರ​‍್ರಶಸ್ತಿ ಲಭಿಸಿದ ಪತ್ರಿಕಾ ವರದಿಯನ್ನು ನೋಡಿ ಸ್ವಯಂ ಪ್ರೇರಿತರಾಗಿ ಸಂಪರ್ಕಿಸಿ ಖುಷಿಯಿಂದ ಗ್ರಂಥಾಲಯ ಗಣಕೀಕರಣ ತಂತ್ರಾಂಶವನ್ನು ದೇಣಿಗೆ ರೂಪದಲ್ಲಿ ನೀಡಿದ್ದು ಅಚ್ಚರಿಯ ಜೊತೆಗೆ ಸಂತಸ ತಂದಿದೆ ಎಂದರು. ಸಂಸ್ಥೆಯ ಮುಖ್ಯಸ್ಥರಾದ ಮರೇಗೌಡರ ಶೈಕ್ಷಣಿಕ ಕಾಳಜಿ ಹಾಗೂ ಉದಾರ ಗುಣ ನಿಜಕ್ಕೂ ಮೆಚ್ಚುವಂತದ್ದು ಎಂದು ಅವರು ಅಭಿಪ್ರಾಯಪಟ್ಟರು. 

ಸಂಸ್ಥೆಯ ಮುಖ್ಯಸ್ಥರಾದ ಮರೇಗೌಡ ಮಾತನಾಡಿ ಇಲ್ಲಿಯವರೆಗೂ ಸಾಕಷ್ಟು ಶಾಲೆ ಕಾಲೇಜುಗಳಲ್ಲಿ ಗ್ರಂಥಾಲಯ ಗಣಕೀಕರಣ ತಂತ್ರಾಂಶ ಅಳವಡಿಸಲಾಗಿದ್ದು ಇತ್ತೀಚೆಗೆ ಇದರ ಬಳಕೆ ಹೆಚ್ಚಾಗುತ್ತಿದೆ ಎಂದು ಹೇಳಿದರು. ತಂತ್ರಾಂಶದ ಬಳಕೆ ತುಂಬಾ ಸರಳವಾಗಿದ್ದು ಗ್ರಂಥಾಲಯದ ಡಿಜಿಟಲೀಕರಣಕ್ಕೆ ಸಹಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.  

ಏನಿದು ಗ್ರಂಥಾಲಯ ಗಣಕೀಕರಣ ತಂತ್ರಾಂಶ? : ನ್ಯೂಜೆನ್‌ಲಿಬ್ (ವರ್ಷನ್ 3.1.2) ಎಂಬ ಹೆಸರಿನ ಗ್ರಂಥಾಲಯ ಗಣಕೀಕರಣ ತಂತ್ರಾಂಶದಿಂದ ಗ್ರಂಥಾಲಯಕ್ಕೆ ಡಿಜಿಟಲ್ ರೂಪ ನೀಡಲಾಗುತ್ತದೆ. ಪುಸ್ತಕಗಳಿಗೆ ಬಾರ್‌ಕೋಡ್ ಅಂಟಿಸಿ ಪುಸ್ತಕಗಳ ಶೀರ್ಷಿಕೆ, ಕರ್ತೃ, ಬೆಲೆ ಮುಂತಾದ ಮಾಹಿತಿಯನ್ನು ಕಂಪ್ಯೂಟರ್‌ನಲ್ಲಿ ಅಳವಡಿಸಲಾಗುತ್ತದೆ. ವಿದ್ಯಾರ್ಥಿಗಳ ಹಾಗೂ ಸಿಬ್ಬಂದಿಯ ವಿವರಗಳನ್ನು ತಂತ್ರಾಂಶದಲ್ಲಿ ಸೇರಿಸಿ ಗುರುತಿನ ಸಂಖ್ಯೆ ಕೊಡಲಾಗುತ್ತದೆ. ಪುಸ್ತಕಗಳ ಬಾರ್‌ಕೋಡ್ ಸ್ಕ್ಯಾನ್ ಮಾಡುವುದರ ಅಥವಾ ಕ್ರಮಸಂಖ್ಯೆ ನಮೂದು ಮಾಡುವುದರ ಮೂಲಕ ಪುಸ್ತಕಗಳನ್ನು ನೋಂದಣಿಯಾದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ  ಎರವಲು ಕೊಡಲು ಮತ್ತು ಮರಳಿ ಪಡೆಯಬಹುದಾಗಿದೆ. ಹೊಸ ಪುಸ್ತಕಗಳನ್ನು ಸೇರಿಸಲು, ಹೊಸ ಸದಸ್ಯರನ್ನು ಸೃಷ್ಠಿಸಲು, ಪುಸ್ತಕಗಳನ್ನು ಹುಡುಕಲು, ಎರವಲು ಪಡೆದವರ ವಿವರ ಪಡೆಯಲು ಹೀಗೆ ಅನೇಕ ಅನುಕೂಲತೆಯನ್ನು ಈ ತಂತ್ರಾಂಶ ಒಳಗೊಂಡಿದೆ. ಗ್ರಂಥಾಲಯದಲ್ಲಿನ ಎಲ್ಲ ಪ್ರಕ್ರಿಯೆಗಳನ್ನು ಈ ತಂತ್ರಾಂಶದ ಮೂಲಕ ನಿರ್ವಹಿಸಬಹುದಾಗಿದೆ. 


ಸುದ್ದಿ ಓದಿ