ಪಿಂಜಾರ ನಿಗಮಕ್ಕೆ ಅನುಧಾನ, ಪದಾಧಿಕಾರಿಗಳ ಆಯ್ಕೆ ಮಾಡಿರಿ : ರಾಜ್ಯಾಧ್ಯಕ್ಷ ಜಲೀಲಸಾಬ
ಶಿಗ್ಗಾವಿ,10 : ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದ ಕರ್ನಾಟಕ ಪಿಂಜಾರ ಸಮಾಜದ ಅಭಿವೃದ್ಧಿಗಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತ್ಯೇಕ ನಿಗಮ ರಚನೆ ಮಾಡಿದ್ದು ಅದಕ್ಕೆ ಅನುಧಾನ ಹಾಗೂ ಪದಾಧಿಕಾರಿಗಳ ಆಯ್ಕೆ ಮಾಡಬೇಕು ಎಂದು ರಾಜ್ಯ ಪಿಂಜಾರ ಸಂಘದ ರಾಜ್ಯಾಧ್ಯಕ್ಷ ಜಲೀಲಸಾಬ ನದಾಫ್ ಒತ್ತಾಯಿಸಿದರು.
ಪಟ್ಟಣದ ಹನುಮಂತಗೌಡ್ರ ಕಲ್ಯಾಣ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾದ ಅವರು ಪಿಂಜಾರ ಜನಾಂಗ ರಾಜ್ಯದಲ್ಲಿ ಸುಮಾರು 28 ಲಕ್ಷ ಜನಸಂಖ್ಯೆ ಇದ್ದು, ಕಡುಬಡತನದಲ್ಲಿ ಕಷ್ಟಕರ ಜೀವನ ನಡೆಸುತ್ತಿರುವ ಅತಿ ಹಿಂದುಳಿದ ಸಮಾಜವಾಗಿದೆ. ಸರ್ಕಾರಿಸೌಲಭ್ಯಗಳಿಂದ ವಂಚಿತವಾಗಿರುವ, ತೀರ ಹಿಂದುಳಿದಿರುವ ಈ ಸಮಾಜದ ಅಭಿವೃದ್ಧಿಗಾಗಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದು ನಮ್ಮನ್ನು ಆಳುವ ಸರ್ಕಾರಗಳು ಕೇವಲ ನಮ್ಮನ್ನು ಬಳಕೆ ಮಾಡಿಕೊಂಡು ನಮ್ಮ ಸಮಾಜದ ಹಿಂದುಳಿದವರ ಅಭಿವೃದ್ಧಿಗಾಗಿ ಗಮನ ಕೊಡುತ್ತಿಲ್ಲ, ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಅವರು ಎಚ್ಚರಿಸಿದರು.
ರಾಜ್ಯ ಉಪಾಧ್ಯಕ್ಷ ಜಿ.ಡಿ.ನದಾಫ ಮಾತನಾಡಿ ಪಿಂಜಾರ ಸಮಾಜಕ್ಕೆ ಪ್ರವರ್ಗ-1 ಪ್ರಮಾಣ ಪತ್ರ ಕೊಡಲು ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದಂತೆ 1990-92 ರ ಅನ್ವಯ ಸ್ಥಳ ಪರೀಶೀಲನೆ ಮಾಡಿ ಅಧಿಕಾರಿಗಳು ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ಇದರಿಂದ ಮಕ್ಕಳ ಶೈಕ್ಷಣಿಕ ಭವಿಷ್ಯ ಕುಂಠಿತವಾಗುತ್ತಿದ್ದು, ಸಮಾಜದ ಬಡ ಮಕ್ಕಳ ಭವಿಷ್ಯಕ್ಕಾಗಿ ಪ್ರವರ್ಗ-1 ಪ್ರಮಾಣ ಪತ್ರ ಕೊಡಲು ಸರಕಾರ ಕಂದಾಯ ಇಲಾಖೆಯಿಂದ ಸ್ಪಷ್ಟ ಆದೇಶ ಹೊರಡಿಸಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು.
ರಾಜ್ಯ ಉಪಾಧ್ಯಕ್ಷ ಎಂ.ಹೆಚ್.ಬೆಂಡಿಗೇರಿ ಮಾತನಾಡಿ ಧಾರವಾಡ ವಿಶ್ವವಿದ್ಯಾಲಯದಲ್ಲಿ ಎರಡು ಕೋಟಿ ಅನುದಾನ ಮೀಸಲಿಟ್ಟು ಪಿಂಜಾರ ಅಧ್ಯಯನ ಪೀಠ ಸ್ಥಾಪನೆಗಾಗಿ ಸುಮಾರು ವರ್ಷಗಳಿಂದಲೂ ಹಕ್ಕುತಾಯ ಮಾಡುತ್ತಿದ್ದರು ಸಹ ರಾಜ್ಯ ಸರ್ಕಾರ ಇದುವರೆಗೂ ಅಧ್ಯಯನ ಪೀಠ ಸ್ಥಾಪನೆಗಾಗಿ ಗಮನ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಶರೀಫ ನದಾಫ ಮಾತನಾಡಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪಿಂಜಾರ ಸಮಾಜಕ್ಕೆ ನಿಗಮ ಮಂಡಳಿ ಮಾಡಿದ್ದಕ್ಕೆ ಸಮಾಜದ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಹಾಗೂ ಬರುವ ದಿನಗಳಲ್ಲಿ ಅನುಧಾನ ತರಲು ಪ್ರಯತ್ತಿಸುತ್ತೇನೆ ಎಂದರು.
ತಾಲೂಕ ಅಧ್ಯಕ್ಷ ಪೀರಸಾಬ ನದಾಫ ಮಾತನಾಡಿ ನಮ್ಮ ಸಮಾಜವನ್ನು ಬಳಸಿಕೊಂಡು ನಮ್ಮವರೇ ಕೆಲವು ರಾಜಕಾರಣಿಗಳು ತಮ್ಮ ಸ್ವಹಿತಕ್ಕೊಸ್ಕರ 28 ಲಕ್ಷ ಜನ ಹೊಂದಿರುವ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಇಂತಹ ಮಲತಾಯಿ ಧೋರಣೆ ಹೀಗೆ ಮುಂದುವರೆದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಅವರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಮಾಜದ ರಾಜ್ಯ, ಜಿಲ್ಲೆ, ತಾಲೂಕ ಪದಾಧಿಕಾರಿಗಳು ಉಪಸ್ಥಿತರಿದ್ದರು.