ರಕ್ತದಾನ ಮಾಡಿ ಇನ್ನೊಬ್ಬರ ಪ್ರಾಣ ಉಳಿಸಿ: ಶಿವಾಚಾರ್ಯ ಮಹಾಸ್ವಾಮಿ
ಕುಷ್ಟಗಿ 19: ದಾನಗಳಲ್ಲಿ ಶ್ರೇಷ್ಠವಾದ ದಾನ ರಕ್ತದಾನ ಕಾರಣ ಪ್ರತಿಯೊಬ್ಬ ನಾಗರಿಕರು ರಕ್ತದಾನ ಮಾಡುವ ಮೂಲಕ ರೋಗಿಗಳ ಪ್ರಾಣವನ್ನು ರಕ್ಷಣೆ ಮಾಡುವ ಅಗತ್ಯವಿದೆ ಎಂದು ಮದ್ದಾನೀಶ್ವರ ಮಠದ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಹಜರತ್ ಹೈದರಲಿ ನೌಜವಾನ ಕಮೀಟಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಷ್ಟಗಿ ಘಟಕದ ಆಶ್ರಯದಲ್ಲಿ ಪ್ರವಾದಿ ಮಹ್ಮದ್ ಪೈಗಂಬರ ಅವರ ಜನ್ಮ ದಿನಾಚರಣೆ ಅಂಗವಾಗಿ ಮಂಗಳವಾರ ಬೆಳಗ್ಗೆ ಇಲ್ಲಿನ ತೆಗ್ಗಿನ ಓಣಿಯ ಬಾಲಕಿಯರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಸಸಿಗಳಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಮಹಾನ್ ಮೇದಾವಿ ಪ್ರವಾದಿ ಮುಹಮ್ಮದ್ ಪೈಗಂಬರ ಅವರ ತತ್ವ ಆದರ್ಶ, ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನವನ್ನು ನೆಡಬೇಕು. ಪ್ರವಾದಿ ಮುಹಮ್ಮದ್ ಪೈಗಂಬರ ಅವರ ಜನ್ಮದಿನಾಚರಣೆ ಅಂಗವಾಗಿ ಪಟ್ಟಣದ ಹಜರತ್ ಹೈದರಲಿ ನೌಜವಾನ ಕಮೀಟಿಯ ಯುವಕರು ಡಿ.ಜೆ ಹಾಗೂ ಇನ್ನಿತರ ಸೌಂಡ್ ಸಿಸ್ಟಮ್ ಗಳನ್ನು ಬಳಸಿ ಹಾಡಿ ಕುಣಿದು ಕುಪ್ಪಳಿಸುವದನ್ನು ಮರೆತು ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ರೋಗಿಗಳ ಪಾಲಿನ ಸಂಜೀವಿನಿಯಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಹೆಚ್.ಕೆ.ಡಿ.ಬಿ ಮಾಜಿ ಅಧ್ಯಕ್ಷ ಶರಣಪ್ಪ ಕ್ಯಾವಟರ್ ಮಾತನಾಡಿದ ಅವರು ಮಹಾತ್ಮರು ಹಾಕಿಕೊಟ್ಟ ದಾರಿಯಲ್ಲಿ ನಾವು ನೀವೆಲ್ಲರೂ ಸಾಗಬೇಕು. ಅದರ ವಿರುದ್ಧ ಎಂದಿಗೂ ನಡೆಯಬಾರದು ಎಂದು ಹೇಳಿದರು.
ಮುಸ್ಲಿಂ ಸಮುದಾಯದ ಯುವಕರೆಲ್ಲರು ಸೇರಿ ಪಟ್ಟಣದಲ್ಲಿ ಈ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು ಸಂತೋಷ ಸಂಗತಿ. ಹೈದರಲಿ ನೌಜವಾನ ಕಮೀಟಿಯ ಇನ್ನೂ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಗತ್ತಿನಲ್ಲಿ ಹೆಚ್ಚು ಹೆಚ್ಚು ಬೆಳೆಯಲಿ ಎಂದು ಶುಭ ಹಾರೈಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ತಾಲೂಕು ಘಟಕ ಅಧ್ಯಕ್ಷ ಡಾ.ವಿಜಯ ಕುಮಾರ ಮಾತನಾಡಿ ಹೆಣ್ಣು ಗಂಡು ಎಂದು ಬೇದ ಭಾವಗಳು ಇಲ್ಲದೇ 18 ರಿಂದ 60 ವಯಸ್ಸಿನ ಆರೋಗ್ಯವಂತ ವ್ಯಕ್ತಿಗಳು ಈ ಶಿಬಿರದಲ್ಲಿ ರಕ್ತದಾನ ಮಾಡಬಹುದು. ಪ್ರತಿಯೊಬ್ಬ ರಕ್ತದಾನಿಯ ತೂಕ ಸರಾಸರಿ 45 ಕೆ.ಜಿಗಿಂತ ಹೆಚ್ಚು ಇರಬೇಕು. ಗಂಡಸರು 3 ತಿಂಗಳಿಗೆ, ಹೆಣ್ಣುಮಕ್ಕಳು 4 ತಿಂಗಳಿಗೊಮ್ಮೆಯಾದರು ರಕ್ತದಾನ ಮಾಡಬಹುದು ಎಂದು ರಕ್ತದಾನಿಗಳಲ್ಲಿ ಮನವಿ ಮಾಡಿದ್ದಾರೆ. ಪುರಸಭೆ ಅಧ್ಯಕ್ಷ ಗಂಗಾಧರಯ್ಯ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಂಖಡ ದೊಡ್ಡ ಬಸವನಗೌಡ ಪಾಟೀಲ್ ಬಯ್ಯಾಪೂರ, ಲಾಡ್ಲೇಮಸಾಕ್ ಯಲಬುರ್ಗಿ, ಪುರಸಭೆ ಸದಸ್ಯ ಮೈನುದ್ದಿನ್ ಮುಲ್ಲಾ, ಆರಿ್ಟ ಸುಬಾನಿ, ಮೈಬುಸಾಬ ಕಮ್ಮಾರ, ಹುಸೇನ ಕಾಯಗೆಡ್ಡಿ, ತಾಜುದ್ದೀನ್ ದಳಪತಿ, ಹಜರತ್ ಹೈದರಲಿ ನೌಜವಾನ ಕಮೀಟಿ ಅಧ್ಯಕ್ಷ ರಾಜು ಮಾಟಲದಿನ್ನಿ , ಸದ್ದಾಂ ಗುಮಗೇರಿ, ಕಾಜಾ ಕಮ್ಮಾರ, ಮುರ್ತುಜಾ ಬಂಗಾಳಿ, ಬಾಷಾ ಸವಡಿ, ಮೌಲಾ ಗುಮಗೇರಿ, ಹಸೇನ್ ನಧಾಪ್ ಹಾಗೂ ಹೈದರಲಿ ನೌಜವಾನ ಕಮೀಟಿ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಷ್ಟಗಿ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.