ನಾನು-ನನ್ನದೆಂಬ ಅಹಮಿಕೆ ಬೇಡ...
ಆಂಗ್ಲ ಸಾಹಿತಿ ವಿಲಿಯಂ ಶೇಕ್ಸಪೀಯರ್ ಅವರು “ಜೀವನ ಎಂಬುದು ಒಂದು ನಾಟಕ. ನಾವೆಲ್ಲರೂ ವಿವಿಧ ಪಾತ್ರಧಾರಿಗಳು. ಆ ದೇವರು ಆಡಿಸಿದಂತೆ ನಾವೆಲ್ಲ ನಮ್ಮ ಪಾತವನ್ನ್ರು ವಹಿಸುತ್ತೇವೆ ಅಷ್ಟೇ” ಎಂದು ಹೇಳಿರುತ್ತಾರೆ. ಆದ್ದರಿಂದ ನಮ್ಮಲ್ಲಿ ಏನೆಲ್ಲ ಸಂಪತ್ತು-ಆಸ್ತಿ, ಅಂತಸ್ತು ಹೊಂದಿದ್ದರೂ ತಾಯಿಯ ಗರ್ಭದಿಂದ ಹಿಡಿದು ಬದುಕಿನ ಅಂತಿಮ ಯಾತ್ರೆಯಲ್ಲಿ ಹೆಗಲು ಕೊಡಲು ಕನಿಷ್ಠ ನಾಲ್ಕು ಭುಜಗಳು ಬೇಕು. ಅದೇ ರೀತಿ ಪ್ರತಿಯೊಬ್ಬರ ಬದುಕು ಬಂಗಾರವಾಗಲು ಅದರ ಹಿಂದೆ ಸಾವಿರ ಕಾಣದ ಕೈಗಳು ಇರುತ್ತವೆ ಎಂಬುದು ಸತ್ಯವಾದ ಮಾತು. ಬದುಕೆಂಬ ಪಯಣದಲ್ಲಿ ನಾವು ಎದುರಾಗುವ ಸಂಕಷ್ಟ, ವೈಫಲ್ಯಗಳನ್ನು ಮೆಟ್ಟಿ ನಿಂತು ಸತತ ಪ್ರಯತ್ನ, ತಾಳ್ಮೆ, ಕಟಿ ಪರಿಶ್ರಮ, ಸಮಯದ ಮೌಲ್ಯವನರಿತು ಆತ್ಮವಿಶ್ವಾಸದೊಂದಿಗೆ ಹೋರಾಡುತ್ತಾ, ಯಸಸ್ಸಿನತ್ತ ಹೆಜ್ಜೆಹಾಕುತ್ತೇವೆ. ಹೀಗೆ ನಾವು ಜೀವನದಲ್ಲಿ ಕಂಡ ಯಶಸ್ಸು, ಪಡೆದ ಸಾಫಲ್ಯ, ಜಯದ ಹಿಂದೆ ನಮ್ಮ ತಂದೆ-ತಾಯಿ, ಹೆಂಡತಿ, ಸ್ನೇಹಿತರು, ಹಿತೈಷಿಗಳ ಸ್ಪೂರ್ತಿ, ಮಾರ್ಗದರ್ಶನ, ಪ್ರೇರಣೆ ಮತ್ತು ಸಹಾಯ-ಸಹಕಾರ ಮತ್ತು ದೇವರ ಕೃಪೆಯು ನಮ್ಮ ಮೇಲೆ ಇದ್ದೇ ಇರುತ್ತದೆ. ನಮ್ಮಲ್ಲಿರುವ ಏನನ್ನಾದರೂ ಸಾಧಿಸಬೇಕೆಂಬ ಮಹತ್ವಾಕಾಂಕ್ಷೆ, ಪರಿಶ್ರಮ, ದೃಢಸಂಕಲ್ಪಗಳೇ ನಮಗೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡುತ್ತವೆ. ಆದ್ದರಿಂದ ನಮ್ಮನ್ನು ಹೊತ್ತು, ಹೆತ್ತು, ಪಾಲನೆ-ಪೋಷಣೆ ಮಾಡಿ ಸಾಕಿ ಸಲುಹಿದ ತಾಯಿ, ತನ್ನ ಆಶೋತ್ತರಗಳನ್ನು ತ್ಯಾಗ ಮಾಡಿ, ಜೀವನವನ್ನೇ ಸವೆದು ವಿದ್ಯಾ-ಬುದ್ಧಿ ನೀಡಿದ ತಂದೆ, ಶಿಲೆಯಂತಿದ್ದ ನಮಗೆ ಮೂರ್ತಿ ರೂಪು ನೀಡಿ ಬದುಕಿಗೊಂದು ಗುರಿ ತೋರಿಸಿದ ಗುರುವರೇಣ್ಯ ಪೂಜ್ಯನೀಯ ಸ್ಥಾನ ಹೊಂದಿದ ಈ ಮೂರ್ವರಿಗೂ ಗೌರವ ಕೃತಜ್ಞತೆಗಳನ್ನು ಅರ್ಿಸಬೇಕು.
ಇನ್ನು ವಿವಾಹದ ನಂತರ ನನ್ನ ಜೊತೆ ಸಪ್ತಪದಿ ತುಳಿದು ಭಾವೀ ಜೀವನ ಅಥವಾ ಸಂಸಾರವೆಂಬ ಸಾಗರದಲ್ಲಿ ನಮಗೆ ಬಾಳ ಸಂಗಾತಿ ಅಥವಾ ಅರ್ಧಾಂಗಿಯಾಗಿ ಸುಖ-ದುಃಖಗಳೆರಡರಲ್ಲಿಯೂ ಸಮವಾಗಿ ಹಂಚಿಕೊಂಡು ಬದುಕಿನೊಳು ಸೋಲು ಕಂಡು ಮನನೊಂದಾಗ ನೈತಿಕ, ಮಾನಸಿಕ ಸ್ಥೈರ್ಯ ಮತ್ತು ಪತಿಗೆ ನೂರು ಆನೆಯ ಬಲ ಬರುವಂತೆ ಸ್ಫೂರ್ತಿ ತುಂಬಿದ ಹಾಗೂ ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎನ್ನವದು ನಿಜವಾಗಿರುತ್ತದೆ. ಅದೇ ರೀತಿ ನಮ್ಮ ಸಹದ್ಯೋಗಿ, ಸ್ನೇಹಿತರಾಗಿದ್ದು, ಪ್ರತಿಯೊಂದು ಏಳು-ಬೀಳುಗಳ ಸಂದರ್ಭದಲ್ಲಿ ಆತ್ಮಸ್ಥೈರ್ಯ ತುಂಬಿದ ಗಳೆಯರ ಪಾತ್ರವು ಅನನ್ಯವಾಗಿರುತ್ತದೆ. ನಾವು ಯಾವುದೇ ಹಂತದ ಶೈಕ್ಷಣಿಕ ಸಾಧನೆ ಅಥವಾ ಉನ್ನತ ಹುದ್ದೆಗೇರಿದಾಗ ಮೊದಲು ನೆನಪಾಗುವರು ಇವರೆಲ್ಲರು. ಇನ್ನು ಬಾಲ್ಯನಿಂದಲೂ ನಮ್ಮ ಜೊತೆ ಕಲಿತು, ಬೆರೆತು, ನಲಿದು-ಕುಣಿದು, ಕುಪ್ಪಳಿಸಿ ಆಟವಾಡಿದ ಮತ್ತು ಒಂದೇ ರೂಮಿನಲ್ಲಿ ಸಹಪಾಠಿಗಳಾಗಿ, ಒಂದೇ ಬೆಂಚಿನಲ್ಲಿ ಕುಳಿತು ಪಾಠ ಕೇಳಿದ ನಮ್ಮ ಸ್ನೇಹಿತರ ಬಳಗವನ್ನೆಲ್ಲ ಸಂದರ್ಭ ಬಂದಾಗ ಅವರೆಲ್ಲರನ್ನು ಕಂಡು ಹಿಂದಿನ ಸವಿ ದಿನಗಳನ್ನು ಸ್ಮರಿಸಿ, ಸಮಯ ದೊರೆತಾಗ ಒಟ್ಟಾಗಿ ಸೇರಿ ಅನು-ತನು ಮತ್ತು ಮನಗಳನ್ನು ಹಂಚಿಕೊಂಡಾಗ ಮಾತ್ರ ನಮ್ಮ ಜೀವನವೆಂಬುದು ಸುಖೀ ಮತ್ತು ಸಾರ್ಥಕವಾಗುತ್ತದೆ. ಅದೇ ರೀತಿ ನಾವು ಎಷ್ಟೇ ಮೇಲಿನ ಹುದ್ದೆಗೇರಿದರೂ ನಮ್ಮ ಮೂಲತನ ಮತ್ತು ಹಿಂದಿನ ದಿನಗಳನ್ನು ಮತ್ತು ಕಷ್ಟ-ಸುಖದ ದಿನಗಳನ್ನು ಮೆಲುಕು ಹಾಕುವದನ್ನು ಮರೆಯಬಾರದು.
ಜೀವನವೆಂದರೆ ಕೇವಲ ಬಯಸಿದ್ದನ್ನು ಪಡೆಯುವುದಲ್ಲ ಅಥವಾ ಅಂದುಕೊಂಡಂತೆ ಬದುಕುವುದಲ್ಲ. ಜೀವನದಲ್ಲಿ ನಾವು ಕಲಿತ, ಪಟ್ಟ ಶ್ರಮ, ಪಡೆದುಕೊಂಡ ಉದ್ಯೋಗ, ಕಷ್ಟ-ಸುಖಗಳ ಅನುಭವ, ಸಿದ್ದಿ-ಸಾಧನೆಗಳ ಒಟ್ಟು ಮೊತ್ತವೇ ಬದುಕು. ಹೀಗೆ ಈ ನಾವು ಕಟ್ಟಿಕೊಂಡ ಬದುಕುಅಥವಾ ಸಾಧಿಸಿದ ಗುರಿ ಮತ್ತು ಪಡೆದ ಯಶಸ್ಸು ದೊರೆತಿರುವುದು ಹಲವು ಜನರ ಬೆಂಬಲ, ಸ್ಪೂರ್ತಿ, ಸಹಕಾರ-ಸಹಾಯಗಳಿಂದ ಮಾತ್ರ ಎಂಬುದನ್ನು ಅರಿಯಬೇಕು. ಕೆಲವು ಜನ ಯಾವುದೇ ಸಾಧನೆ ಮಾಡಿದಾಗ ಅಥವಾ ಕಾರ್ಯದಲ್ಲಿ ಯಶ ಗಳಿಸಿದಾಗ “ನನ್ನ ಬದುಕನ್ನು ನಾನೇ ರೂಪಿಸಿಕೊಂಡೆ, ನಾನು, ನನ್ನದು, ಮತ್ತು ನನ್ನಿಂದ ಈ ಕಾರ್ಯ ಸಾಧನೆಯಾಯಿತು” ಎಂಬಂತಹ ಅಹಂಭಾವದ ಮಾತುಗಳನ್ನಾಡುತ್ತಾರೆ. ಅಂತಹವರು ಯಾರಾದರೂ ಇದ್ದರೆ ಅವರಷ್ಟು ಕೃತಘ್ನರು ಇನ್ನೊಬ್ಬರಿಲ್ಲವೆಂದು ಹೇಳಬಹುದು. ಹಿರಿಯರ ಅನುಭವದ ಮಾತಿನಂತೆ, ಮಾನವ ಸಂಘಜೀವಿ ಮತ್ತು ಸಮಾಜ ಜೀವಿಯಾಗಿದ್ದಾನೆ. ಅವನಲ್ಲಿ ಏಷ್ಟೇ ಪ್ರತಿಭೆ, ಜ್ಞಾನ, ಜಾಣ್ಮೆ, ಆಸ್ತಿ-ಪಾಸ್ತಿ, ಅಂತಸ್ತು-ಹಣ, ಶ್ರೀಮಂತಿಕೆ ಇದ್ದರೂ ನಿಷ್ಪ್ರಯೋಜಕ. ಕಷ್ಟ-ನಷ್ಟದಂತಹ ಸಂದರ್ಭಗಳಲ್ಲಿ ಬೇರೆಯವರ ಆಶ್ರಯ, ಸಹಾಯ ಬೇಕೇ ಬೇಕು. ಅಂದಾಗ ಮಾತ್ರ ನಮ್ಮ ಬದುಕು ಪರಿಪೂರ್ಣ ಅಥವಾ ಸಾರ್ಥಕತೆಯನ್ನು ಹೊಂದುತ್ತಾನೆ.
ಕನಕದಾಸರ ಅಧ್ಯಾತ್ಮಿಕ ಸಂದೇಶದ ಸಾರ ನಮಗೆಲ್ಲ ಮಾರ್ಗದರ್ಶಿಯಾಗಲಿ: ಒಮ್ಮೆ ಕನಕದಾಸರ ಗುರುಗಳು ತಮ್ಮೆಲ್ಲ ಶಿಷ್ಯವೃಂದದವರಲ್ಲಿ ನಿಮ್ಮಲ್ಲಿ ಯಾರು ಸ್ವರ್ಗಕ್ಕೆ ಹೋಗುತ್ತೀರಿ ಎಂದು ಕೇಳಲಾಗಿ ಅಲ್ಲಿದ್ದ ಶಿಷ್ಯರಲ್ಲಿ ಅನೇಕರು ನಾವು ಹೋಗುತ್ತೇವೆ, ನಾವು ಹೋಗುತ್ತೇವೆ ಎಂದು ಬಹಳ ಉತ್ಸುಕತೆಯಿಂದ ಮತ್ತು ಹಮ್ಮು-ಬಿಮ್ಮಿನಿಂದ ಹೇಳುತ್ತಾರೆ. ಆದರೆ ಕನಕದಾಸರು ಏನೂ ಹೇಳದೇ ಮೌನಿಯಾಗಿದ್ದರು, ಆಗ ಗುರುಗಳು ಕನಕದಾಸರನ್ನು ಕುರಿತು, ನೀನೇಕೆ ಏನೂ ಉತ್ತರಿಸಲಿಲ್ಲವೆಂದು ಕೇಳಿದಾಗ ಅದಕ್ಕೆ ಅವರು “ನಾ ಹೋದರೆ ಹೋಗಬಹುದು” ಎಂದು ಉತ್ತರಿಸಿದರು. ಇದರಿಂದ ಗುರುಗಳು ಆಶ್ಚರ್ಯಚಕಿತರಾಗಿ ಪುನಃ ಕನಕದಾಸರನ್ನು ಕೇಳಿದಾಗ ‘ನಾ ಎಂಬ ಅಹಂಭಾವ ನನ್ನಿಂದ ದೂರವಾದರೆ ಅಥವಾ ಹೋದಾಗ ಮಾತ್ರ ನಾನು ಹೋಗಬಲ್ಲೆ’ ಎಂಬ ಆಧ್ಯಾತ್ಮಿಕ ಭಾವದ ಮಾತು ನಿಜಕ್ಕೂ ನಮಗೆ ಮನವರಿಕೆಯಾಗುತ್ತದೆ. ಆದ್ದರಿಂದ ನಾವು ಏನನ್ನು ಪಡೆದಿದ್ದೇವೆಯೋ, ಗಳಿಸಿದ್ದೇವೆಯೋ ಅಥವಾ ಸಾಧಿಸಿದ್ದೇವೆಯೋ ಅದು ಇಲ್ಲಿಂದವೇ ಮಾತ್ರ ಎಂಬುದನ್ನು ಹಾಗೂ ನನ್ನೆಲ್ಲ ಯಶಸ್ಸು ಅಥವಾ ಸಾಧನೆಗೆ ನಾನು ಮಾತ್ರ ಕಾರಣನಲ್ಲ ಅದಕ್ಕೆ ಇತರ ಎಲ್ಲ ವ್ಯಕ್ತಿಗಳ ಸಹಾಯ-ಸಹಕಾರ, ಸ್ಪೂರ್ತಿ, ಬೆಂಬಲ ಮತ್ತು ಪ್ರೇರಣೆಯಿದೆ ಎನ್ನುವದನ್ನು ನಾವು ಮನಗಂಡು ಈ ಸಮಾಜದಲ್ಲಿ “ಎಲ್ಲದಕ್ಕೂ ನಾನು, ನನ್ನದು, ನನ್ನಿಂದ ಮತ್ತು ನಾನೇ ಎಲ್ಲ ಎಂಬ ಅಹಂಭಾವವನ್ನು ಬಿಟ್ಟು ನಾನು ಪಡೆದುದು ಆ ದೇವರ ಫಲಶ್ರುತಿ ಮತ್ತು ಅನುಗ್ರಹದಿಂದ ಮಾತ್ರ ಎಂದು ಅರಿತು ಬಾಳಿದರೆ ಬದುಕು ಸುಂದರ ಮತ್ತು ಬಂಗಾರಮಯವಾಗಲು ಸಾಧ್ಯವೆಂದು ಹೇಳಬಹುದು.
ಆದ್ದರಿಂದ ನಮ್ಮ ಬದುಕು ನಮ್ಮದಲ್ಲದ ಬದುಕು ಎಂಬುದು ಗೊತ್ತಿದ್ದರೂ ಜನರು ಈ ಜಗದ ತುಂಬ “ನಾನು, ಇದು ನನ್ನದು, ನಾನು ಗಳಿಸಿದೆ, ಇದೆಲ್ಲಾ ನನ್ನಿಂದಲೇ ಆಯಿತು” ಎನುವ ಅಹಮಿಕೆಯ ಮಾತುಗಳನ್ನು ಆಡುತ್ತಿರುವುದನ್ನು ನಾವು ಸಾಮಾನ್ಯವಾಗಿ ನೋಡುತ್ತೇವೆ. ಆದ್ದರಿಂದ ನಾವು ಇಂದು ಏನಾಗಿದ್ದೇವೆಯೋ ಅದು ನಾನು ಮಾತ್ರ ಅಲ್ಲ ಅದಕ್ಕೆ ನನ್ನ ಜೀವನದಲ್ಲಿ ಬಂದು ಹೋದ ಮತ್ತು ನನ್ನ ಬದುಕು ನಿರ್ಮಾಣಗೊಳ್ಳುವಲ್ಲಿ ಅನೇಕ ವ್ಯಕ್ತಿಗಳ ಪ್ರೇರಣೆ, ಸ್ಪೂರ್ತಿ, ಶುಭ ಹಾರೈಕೆ, ಸಹಾಯ-ಸಹಕಾರ ಮತ್ತು ಇತರರ ಕಾಣದ ಕೈಗಳಿಂದಲೇ ಸಹ ಸಾಧ್ಯವಾಯಿತು ಎಂಬುದನ್ನು ಅರಿತುಕೊಂಡಾಗ ಮಾತ್ರ ಬದುಕಿಗೊಂದು ಸಾರ್ಥಕತೆ ಹಾಗೂ ಅರ್ಥಪೂರ್ಣವಾಗಲು ಸಾಧ್ಯ. ಆದ್ದರಿಂದ ನಮ್ಮಲ್ಲಿರುವ ಅಹಂಭಾವವನ್ನು ತೊಲಗಿಸಿ ಯಾವುದೇ ಕಾರ್ಯವನ್ನು ಕೈಗೊಳ್ಳುವಾಗ ನಿಸ್ವಾರ್ಥತೆ ಹಾಗೂ ಪ್ರಾಮಾಣಿಕ ಪ್ರಯತ್ನಗೈಯುತ್ತಾ ಜೀವನದಲ್ಲಿ ಬರುಎಲ್ಲ ಕಷ್ಟ-ಸುಖಗಳನ್ನು ಸಮಾನವಾಗಿ ಸ್ವೀಕರಿಸಿ ಬಾಳಿ-ಬದುಕಿದರೆ ಅದರಷ್ಟು ಸಂತೋಷ ಮತ್ತೊಂದಿಲ್ಲ.
- ಮಲ್ಲಪ್ಪ. ಸಿ. ಖೊದ್ನಾಪೂರ
(ತಿಕೋಟಾ)
- * * * -