ಹಿಂದಿ ಭಾಷೆಗೆ ಗ್ರೇಡ್ ಬೇಡಾ..! ಅಂಕ ನೀಡಿ; ಶಿಕ್ಷಣ ಸಚಿವರಿಗೆ ಸನ್ಮತಿ ಸಮಿತಿಯ ವಿದ್ಯಾರ್ಥಿಗಳ ಕಳಕಳಿಯ ಮನವಿ..!!
ಲೋಕದರ್ಶನ ವರದಿ
ಕಾಗವಾಡ 04: ಹಿಂದಿ ಭಾಷೆಗೆ ಗ್ರೇಡ್ ನೀಡುವುದನ್ನು ನಿಲ್ಲಿಸಿ, ಅಂಕ ನೀಡಿ, ನಮ್ಮ ಭವಿಷ್ಯದ ಜೊತೆ ಚಲ್ಲಾಟವಾಡಬೇಡಿ. ಹಿಂದಿ ನಮ್ಮ ನೆಚ್ಚಿನ ಭಾಷೆಯಾಗಿದ್ದು, ಅಂಕ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ. ಆದ್ದರಿಂದ ಶಿಕ್ಷಣ ಸಚಿವರು ಕೂಡಲೇ ಹಿಂದಿ ಭಾಷಾ ವಿಷಯಕ್ಕೆ ಗ್ರೇಡ್ ನೀಡುವ ನಿರ್ಧಾರವನ್ನು ಕೈ ಬಿಟ್ಟು, ಅಂಕ ನೀಡಬೇಕೆಂದು ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಹಿಂದಿ ತೃತೀಯ ಭಾಷಾ ವಿದ್ಯಾರ್ಥಿಗಳು ಶಿಕ್ಷಣ ಸಚಿವ ಮಧು ಬಂಗಾರ್ಪನವರಿಗೆ ವಿನೂತನವಾಗಿ ತಮ್ಮ ಮನವಿ ಮಾಡಿಕೊಂಡಿದ್ದಾರೆ.
ಶನಿವಾರ ದಿ. 04 ರಂದು ಶಾಲಾ ಆವರಣದಲ್ಲಿ ಹಿಂದಿ ತೃತೀಯ ಭಾಷಾ ವಿದ್ಯಾರ್ಥಿಗಳು ಶಿಕ್ಷಣ ಸಚಿವರಿಗೆ ವಿನೂತವಾಗಿ ತಮ್ಮ ಮನದಾಳದ ಮಾತನ್ನು ತೋಡಿಕೊಂಡಿದ್ದಾರೆ. ಹಿಂದಿ ಭಾಷೆಗೆ ಗ್ರೇಡ್ ಬೇಡ. ಅಂಕ ಇರಲಿ. ಸರ್ಕಾರ ಏಕಪಕ್ಷೀಯ ನಿರ್ಧಾರ ಬಿಟ್ಟು, ತೃತೀಯ ಭಾಷೆಗೆ ಅಂಕ ನೀಡಲಿ. ವಿವಿಧ ಭಾಷೆ ಕಲಿಯುವುದು ಮಕ್ಕಳ ಹಕ್ಕು.. ನಮ್ಮ ಹಕ್ಕನ್ನು ಕಸಿದುಕೊಳ್ಳಬೇಡಿ. ಬದಲಾವಣೆಯ ನೆಪದಲ್ಲಿ ನೈತಕತೆ ಮರೆಯದಿರಿ, ಮಕ್ಕಳ ಮನಸ್ಸಿನ ಜೊತೆ ಚಲ್ಲಾಟವಾಡದಿರು ಎಂದು ಘೋಷಣೆಗಳನ್ನು ಕೂಗುತ್ತ ತಮ್ಮ ಆಕ್ರೋಶ ತೋಡಿಕೊಂಡಿದ್ದಾರೆ.
ಇನ್ನೂ ಈ ವೇಳೆ ವಿದ್ಯಾರ್ಥಿಗಳಾದ ಪ್ರಣಯ ಪಾಟೀಲ, ಅನುಷ್ಕಾ ರತ್ನಪ್ಪಗೋಳ, ಅಕ್ಷತಾ ನರವಾಡೆ ಮಾತನಾಡಿ, ವರ್ಷವಿಡಿ ಕಷ್ಟಪಟ್ಟು ಓದಿ, ಇನ್ನೇನು ಪರೀಕ್ಷೆ ಬರೆದು, ಹೆಚ್ಚಿನ ಅಂಕಗಳೊಂದಿಗೆ ಪಾಸಾಗೋಣ ಎನ್ನುವಷ್ಟರಲ್ಲಿ ಶಿಕ್ಷಣ ಸಚಿವರು ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯುತ್ತಿರುವಾಗಲೇ ಹಿಂದಿ ತೃತೀಯ ಭಾಷೆಗೆ ಅಂಕಗಳನ್ನು ನೀಡುವ ಬದಲಾಗಿ ಗ್ರೇಡ್ ನೀಡಲಾಗುತ್ತದೆ.
ಎಂದು ಘೋಷಣೆ ಮಾಡಿ, ಹಿಂದಿ ಭಾಷೆಯನ್ನು ತಮ್ಮ ನೆಚ್ಚಿನ ಭಾಷೆಯಾಗಿ ಓದಿ ಪರೀಕ್ಷೆ ಎದುರಿಸುತ್ತಿರುವ ನಮ್ಮಂತಹ ಅನೇಕ ವಿದ್ಯಾರ್ಥಿಗಳಿಗೆ ಇದರಿಂದ ಆಘಾತ ಉಂಟು ಮಾಡಿದ್ದಾರೆ. ಶಿಕ್ಷಣ ಸಚಿವರು ಕೂಡಲೇ ಈ ಆದೇಶವನ್ನು ಹಿಂದಕ್ಕೆ ಪಡೆದು ಹಿಂದಿ ಭಾಷೆಗೆ ಅಂಕ ನೀಡಿ, ವಿದ್ಯಾರ್ಥಿಗಳ ಹಕ್ಕನ್ನು ಕಾಪಾಡಬೇಕು ಎಂದು ಶಿಕ್ಷಣ ಸಚಿವರಲ್ಲಿ ಆಗ್ರಹಿಸಿದ್ದಾರೆ. ಈ ಸಮಯದಲ್ಲಿ ಹಿಂದಿ ತೃತೀಯ ಭಾಷೆಯ ಅನೇಕ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.