ಚಿಕ್ಕೋಡಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾದ ವೈದ್ಯರ, ಸಿಬ್ಬಂದಿ ವಸತಿ ಗೃಹಗಳು
ಮಾಂಜರಿ 19: ರಾಷ್ಟ್ರ್ರೀಯ ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅನುದಾನದಲ್ಲಿ ಚಿಕ್ಕೋಡಿ ಪಟ್ಟಣದ ಹೊರ ವಲಯದಲ್ಲಿ 5 ಎಕರೆ ಪ್ರದೇಶದಲ್ಲಿ 20 ಕೋಟಿ ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಗೊಂಡಿದೆ. 2015ರಲ್ಲಿ ಆರಂಭವಾದ 100 ಹಾಸಿಗೆಯ ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾಮಗಾರಿಯು ಬಹುತೇಕ ಮುಕ್ತಾಯಗೊಂಡಿದ್ದರೂ ಉದ್ಘಾಟನೆಯ ಭಾಗ್ಯ ಕಾಣದೇ ಇರುವುದು ಸ್ಥಳೀಯರಲ್ಲಿ ಬೇಸರ ಮೂಡಿಸಿದೆ.
ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಸ್ತ್ರೀ ರೋಗ ತಜ್ಞ-1, ಅರಿವಳಿಕೆ ತಜ್ಞರು-2, ಮಕ್ಕಳ ತಜ್ಞ-1, ರೇಡಿಯಾಲಾಜಿಸ್ಟ್-1, ಹಿರಿಯ ಶುಶೂಷಕ -1, ಶುಶೂಷಕ-20, ಕಿರಿಯ ಫಾರ್ಮಾಸಿಸ್ಟ್-1, ದ್ವಿತೀಯ ದರ್ಜೆ ಸಹಾಯಕ-1, ಡಾಟಾ ಎಂಟ್ರಿ ಆಪರೇಟರ್ 2, ಡಿ ಗ್ರೂಫ್ ನೌಕರರು 6 ಸೇರಿದಂತೆ ಒಟ್ಟು 36 ಹುದ್ದೆಗಳನ್ನು ಸರ್ಕಾರ ಮಂಜೂರು ಮಾಡಿದೆ.
ಸುಸಜ್ಜಿತ ಕಟ್ಟಡ, ಆವರಣಗೋಡೆ, ಶವಾಗಾರ, ವೈದ್ಯರ ಹಾಗೂ ಸಿಬ್ಬಂದಿಯ ವಸತಿ ಗೃಹ ನಿರ್ಮಾಣ ಕಾಮಗಾರಿಯು ಪೂರ್ಣಗೊಂಡಿದೆ ಶಸ್ತ್ರ ಚಿಕಿತ್ಸೆ ಕೊಠಡಿ, ವಾರ್ಡ್ಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ವೈದ್ಯಕೀಯ ಉಪಕರಣಗಳೂ ಬಂದಿವೆ. 2 ಲಿಫ್ಟ್ಗಳ ಪೈಕಿ ಈಗಾಗಲೇ 1 ಲಿಫ್ಟ್ ಕಾರ್ಯ ಪೂರ್ಣಗೊಂಡಿದೆ. 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಾಗಿದ್ದರಿಂದ ಇದೀಗ ಕೇವಲ ಒಂದು ಕೊಳವೆಬಾವಿ ಮಾತ್ರ ಇದೆ. ಇನ್ನೂ ಒಂದೆರಡು ಕೊಳವೆಬಾವಿ ಕೊರೆಯಿಸಿ ನೀರಿನ ಸೌಕರ್ಯ ಕಲ್ಪಿಸಬೇಕಿದೆ. ಆಸ್ಪತ್ರೆಗೆ ಆಂಬುಲೆನ್ಸ್ ಸೇರಿದಂತೆ ವಾಹನಗಳು ಸರಾಗವಾಗಿ ಆಗಮಿಸಲು ಉತ್ತಮ ರಸ್ತೆ ನಿರ್ಮಾಣಮಾಡಬೇಕಿದೆ.
ಚಿಕ್ಕೋಡಿ ತಾಲ್ಲೂಕು ವ್ಯಾಪ್ತಿಯಲ್ಲಿ ಪ್ರತಿ ತಿಂಗಳು 600ರಿಂದ 800 ಕ್ಕೂ ಹೆಚ್ಚು ಹೆರಿಗೆಗಳು ಆಗುತ್ತಿವೆ. ಈ ಕಾರಣಕ್ಕಾಗಿಯೇ ಪ್ರಕಾಶ ಹುಕ್ಕೇರಿ ಅವರ ಪ್ರಯತ್ನದಿಂದ ಕಟ್ಟಡ ತಲೆ ಎತ್ತಿದೆ. 2023ರ ಡಿಸೆಂಬರ್ನಲ್ಲಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಆಸ್ಪತ್ರೆಯ ಲೋಕಾರೆ್ಣಗೊಳ್ಳುತ್ತದೆ ಎಂಬ ನೀರೀಕ್ಷೆ ಹುಸಿಯಾಯಿತು.
ಸ್ವಾತಂತ್ರೋತ್ಸವ ದಿನ (ಆ.15)ನೀಡಲಾಗಿತ್ತು. ಈಗ ಅದೂ ಕೂಡ ಹುಸಿಯಾಗಿದೆ.
ಚಿಕ್ಕೋಡಿಯಲ್ಲಿ ತಾಯಿ- ಮಕ್ಕಳ ಆಸತೆಯ ಅವಶ್ಯಕತೆ ಬಹಳ ಇದೆ. ಖಾಸಗಿ ಆಸ್ಪತ್ರೆಗಳ ಸುಲಿಗೆ ನಿಲ್ಲಬೇಕಿದೆ. ಕೂಡಲೇ ಆಸ್ಪತ್ರೆ ಪ್ರಾರಂಭಿಸಬೇಕು
ಮಹಾದೇವಿ ಭೀಮಣ್ಣವರ್ ಚಿಕ್ಕೋಡಿ ತಾಲೂಕ ನಿವಾಸಿ
ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚದಿಂದಾಗಿ ಸ್ಥಳೀಯರ ಜೇಬಿಗೆ ಕತ್ತರಿ ಬೀಳುತ್ತಿದೆ. ಚಿಕ್ಕೋಡಿಯಲ್ಲಿ ಆಸ್ಪತ್ರೆ ಸಿದ್ದಗೊಂಡರೂ ಲೋಕಾರೆ್ಣ ಮಾಡದಿರುವುದು ಅಚ್ಚರಿ
ಚಂದ್ರಕಾಂತ್ ಹುಕ್ಕೇರಿ ಸಾಮಾಜಿಕ ಕಾರ್ಯಕರ್ತ
ಆಸ್ಪತ್ರೆ ಪ್ರಾರಂಭಿಸಲು ಅವಶ್ಯವಿರುವ ವೈದ್ಯರು ಶೂಶೂಷಕಿಯರು ಸಿಬ್ಬಂದಿ ಲಭ್ಯ ಇದ್ದಾರೆ. ಆಸ್ಪತ್ರೆಯನ್ನು ಇಲಾಖೆಗೆ ಹಸ್ತಾಂತರಿಸಿದಲ್ಲಿ ಸೇವೆ ಪ್ರಾರಂಭಿಸಲಾಗುವುದು
-ಡಾ.ಎಸ್.ಎಸ್.ಗಡದ ಹೆಚ್ಚುವರಿ ಜಿಲ್ಲಾ ಆರೋಗ್ಯಾಧಿಕಾರಿ ಚಿಕ್ಕೋಡಿ
ಜಿಲ್ಲೆಯ ಏಳು ತಾಯಿ ಮಕ್ಕಳ ಆಸ್ಪತ್ರೆಗಳ ಪೈಕಿ ಐದು ಕಾರ್ಯಾರಂಭ ಮಾಡಿವೆ. ಚಿಕ್ಕೋಡಿ ಖಾನಾಪುರ ಆಸ್ಪತ್ರೆಗಳ ಎಲ್ಲ ಅಗತ್ಯಗಳನ್ನು ಪೂರೈಸಲಾಗಿದೆ. ಶೀಘ್ರಆರಂಭಿಸಲಾಗುವುದು
- ಡಾ.ಮಹೇಶ ಕೋಣಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ