ರಾಷ್ಟ್ರೀಯ

ಸೋಮಾರಿತನ ಬೇಡ, ಹೆಚ್ಚು ಜಾಗರೂಕರಾಗಿರಿ; ದೇಶದ ಜನತೆಗೆ ಪ್ರಧಾನಿ ಮೋದಿ ಮನವಿ

ಸೋಮಾರಿತನ ಬೇಡ, ಹೆಚ್ಚು ಜಾಗರೂಕರಾಗಿರಿ; ದೇಶದ  ಜನತೆಗೆ ಪ್ರಧಾನಿ ಮೋದಿ ಮನವಿ

ನವದೆಹಲಿ, ಅ 13   ದೇಶದಲ್ಲಿ  ಕೊರೊನಾ  ಸೋಂಕು   ಪ್ರಕರಣಗಳು   ಮಂಗಳವಾರ ಎರಡು ತಿಂಗಳ  ಹಿಂದಿನ  ಕನಿಷ್ಟ ಪ್ರಮಾಣದಲ್ಲಿ  ವರದಿಯಾಗಿರುವ   ಹಿನ್ನಲೆಯಲ್ಲಿ  ಪ್ರಧಾನಿ ನರೇಂದ್ರ ಮೋದಿ  ಸಾಂಕ್ರಾಮಿಕದ  ಬಗ್ಗೆ   ಜನರು ಮತ್ತಷ್ಟು  ಎಚ್ಚರಿಕೆಯಿಂದ  ವ್ಯವಹರಿಸುವಂತೆ  ಮಂಗಳವಾರ ಮನವಿಮಾಡಿಕೊಂಡಿದ್ದಾರೆ. ಲಸಿಕೆ  ಬರುವವರೆಗೂ  ಜನರು   ಹೆಚ್ಚಿನ ಜಾಗರೂಕರತೆ  ವಹಿಸಲೇಬೇಕು   ಎಂದು ಎಚ್ಚರಿಸಿದ್ದಾರೆ.   ದೈಹಿಕ ಅಂತರ  ಕಾಪಾಡುವ  ಮೂಲಕ  ಕೋವಿಡ್ -19 ಶಿಷ್ಟಾಚಾರಗಳನ್ನು  ಕಟ್ಟು ನಿಟ್ಟಾಗಿ  ಪಾಲಿಸಬೇಕು, ಕೊರೊನಾ ಸಾಂಕ್ರಾಮಿಕದ  ಬೆದರಿಕೆ ಇನ್ನೂ ನಮ್ಮನ್ನು ಕಾಡುತ್ತಲೇ ಇದೆ  ಎಂದು ಅವರು ಹೇಳಿದ್ದಾರೆ.

ಕೇಂದ್ರ ಮಾಜಿ ಸಚಿವ ಬಾಳಾ ಸಾಹೇಬ್ ವಿಖೆ ಪಾಟೀಲ್ ಅವರ ಆತ್ಮಚರಿತ್ರೆಯನ್ನು ಬಿಡುಗಡೆ ಗೊಳಿಸಿದ ನಂತರ ಮಾತನಾಡಿದ  ಪ್ರಧಾನಿ ಮೋದಿ,    ಮಾಸ್ಕ್    ಧರಿಸುವ, ದೈಹಿಕ ಅಂತರ  ಕಾಪಾಡುವ  ವಿಷಯದಲ್ಲಿ ಯಾವುದೇ  ಸೋಮಾರಿತನ   ಬೇಡ ಎಂದು ಪ್ರಧಾನಿ  ತಾಕೀತು ಮಾಡಿದ್ದಾರೆ.  

ಕೊರೊನಾ  ವೈರಸ್ ಅಪಾಯ ಇನ್ನೂ  ಮುಂದುವರಿದಿದೆ,  ಮಹಾರಾಷ್ಟ್ರದಲ್ಲಿ  ಪರಿಸ್ಥಿತಿ ಸ್ವಲ್ಪ ಕಳವಳಕಾರಿಯಾಗಿದೆ.  ಲಸಿಕೆ ಬರುವವರೆಗೂ ಜಾಗರೂಕರಾಗಿರೋಣ  ಎಂದು ಅವರು   ಜನರಿಗೆ  ಮನವಿ ಮಾಡಿದ್ದಾರೆ. ದೇಶದಲ್ಲಿ  ಕಳೆದ 24 ಗಂಟೆಗಳಲ್ಲಿ 55,342  ಹೊಸ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ. ಆಗಸ್ಟ್ 18 ರ ನಂತರ ಅತ್ಯಂತ ಕಡಿಮೆ ಪ್ರಮಾಣದಲ್ಲಿ  ಪ್ರಕರಣಗಳು ದಾಖಲಾಗಿವೆ.  ಕಳೆದ ತಿಂಗಳು 90,000 ಕ್ಕೂ ಹೆಚ್ಚು ಕೊರೊನಾ  ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇತ್ತೀಚೆಗೆ  ಇದು ಅರ್ಧದಷ್ಟು ಕಡಿಮೆಯಾಗಿದೆ. ಹೊಸ ಪ್ರಕರಣಗಳು ಸೇರಿ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 71.75 ಲಕ್ಷಕ್ಕೆ  ತಲುಪಿದ್ದು, ಸಾವಿನ ಸಂಖ್ಯೆ 1,09,856ಕ್ಕೆ ಏರಿದೆ. 



ಸುದ್ದಿ ಓದಿ