ಅಥಣಿ

ಜಿಲ್ಲೆಯ ಯಾವುದೇ ಸಕ್ಕರೆ ಕಾರಖಾನೆ ಬಂದ ಮಾಡಲು ಅವಕಾಶ ಕೊಡಬೇಡಿ: ನಾಡಗೌಡ ಮನವಿ

ಜಿಲ್ಲೆಯ ಯಾವುದೇ ಸಕ್ಕರೆ ಕಾರಖಾನೆ ಬಂದ ಮಾಡಲು ಅವಕಾಶ ಕೊಡಬೇಡಿ: ನಾಡಗೌಡ ಮನವಿ

ಅಥಣಿ 07: ಕೆಲ ರೈತ ವಿರೋಧಿಗಳು ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಯನ್ನು ಬಂದ ಮಾಡುತ್ತೇವೆ ಎಂದು ಹೇಳಿಕೆ ನೀಡುತ್ತಿದ್ದು, ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ಅಷ್ಟೇ ಅಲ್ಲ ಜಿಲ್ಲೆಯ ಯಾವುದೇ ಸಕ್ಕರೆ ಕಾರಖಾನೆಯನ್ನು ಬಂದ ಮಾಡಲು ಅವಕಾಶ ಕೊಡಬಾರದು ಎಂದು ಪ್ರಗತಿ ಪರ ರೈತ ಮತ್ತು ಜಿಲ್ಲಾ ರೈತ ಜಾಗೃತಿ ವೇದಿಕೆ ಉಪಾಧ್ಯಕ್ಷ ರಾಜು ನಾಡಗೌಡ ತಾಲೂಕಾ ಆಡಳಿತವನ್ನು ಆಗ್ರಹಿಸಿದರು.   

ಅವರು ಪ್ರಗತಿ ಪರ ರೈತ ಸಂಘದ ನೇತೃತ್ವದಲ್ಲಿ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿ ಮಾತನಾಡುತ್ತಿದ್ದರು. ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ಕಳೆದ 22 ವರ್ಷಗಳಿಂದ ರೈತರಿಗೆ ಒಳ್ಳೆಯ ಬೆಂಬಲ ಬೆಲೆ ನೀಡುತ್ತಲೇ ಬಂದಿದೆ ಅಲ್ಲದೆ ರೈತರಿಗೆ ತೂಕದಲ್ಲಿಯೂ ಸಹ ನ್ಯಾಯ ಒದಗಿಸತ್ತಲೇ ಬಂದಿದೆ ಆದರೂ ಕೂಡ ಕೆಲವೇ ಕೆಲವರು ಕಾರಖಾನೆಯನ್ನು ಬಂದ ಮಾಡಿ ರೈತರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು.  

ಈಗಾಗಲೇ ನೀರಿನ ಕೊರತೆ ಹೆಚ್ಚಾಗುತ್ತಿರುವ ಪರಿಣಾಮ ಕಬ್ಬಿಗೆ ತೊಂದರೆಯಾಗುವ ಸಂಭವ ಇದ್ದುದರಿಂದ ಇಂತಹ ಸಂದರ್ಭದಲ್ಲಿ ಕಾರಖಾನೆಯನ್ನು ಬಂದ ಮಾಡಿದಲ್ಲಿ ಕಬ್ಬು ಬೆಳೆ ಒಣಗಿ ರೈತರಿಗೆ ಸಂಕಷ್ಟ ಉಂಟಾಗುವ ಸಾಧ್ಯತೆ ಇದ್ದುದರಿಂದ ಕಾರಖಾನೆಯನ್ನು ಬಂದ ಮಾಡಲು ಅವಕಾಶ ಕೊಡಬಾರದು ಎಂದು ಮನವಿ ಮಾಡಿದರು.  

ರೈತ ಧುರೀಣ ಅನಂತ ಬಸರಿಖೋಡಿ ಮಾತನಾಡಿ, ಪ್ರಸಕ್ತ ಹಂಗಾಮಿನಲ್ಲಿಯೂ ಸಹ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ಘೋಶಿಸುವ ಮೂಲಕ ರೈತರ ಬೆಂಬಲಕ್ಕೆ ನಿಂತಿದ್ದು, ದುರುದ್ದೇಶ ಪೂರ್ವಕವಾಗಿ ಕೆಲವು ಜನ ಕಾರಖಾನೆಯನ್ನು ಬಂದ ಮಾಡಲು ಮುಂದಾಗುತ್ತಿದ್ದಾರೆ ಇದಕ್ಕೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿದರು.  

ಜಡೆಪ್ಪ ಕುಂಬಾರ,  ಜಗದೀಶ ದಳವಾಯಿ, ಅರ್ಜುನ ನಾಯಿಕ, ಅರುಣ ಭಾಸಿಂಗಿ, ಮಲ್ಲಪ್ಪ ಬಾಳಿಕಾಯಿ, ಗುರುಲಿಂಗ ಗುಮತಾಜ, ಸುರೇಶ ವಾಡೇದ, ಕುಮಾರ ಪಾಟೀಲ, ಕುಮಾರ ಗಲಗಲಿ, ಪ್ರಶಾಂತ ಅಕ್ಕೋಳ, ಶ್ರೀಮಂತ ಬಚ್ಚಗೋಳ, ಪ್ರದೀಪ ನಂದಗಾಂವ, ಪಿಂಟು ಮುಂಜೆ ಸೇರಿದಂತೆ ನೂರಾರು ರೈತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.   

ಇದೇ ಸಂದರ್ಭದಲ್ಲಿ ರೈತರು ಡಿವೈಎಸ್‌.ಪಿ ಶ್ರೀಪಾದ ಜಲದೆ ಇವರಿಗೂ ಮನವಿ ಸಲ್ಲಿಸಿ ಆಗ್ರಹಿಸಿದರು. ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಸ್‌.ಐ ಎಸ್‌.ಎಮ್‌.ಕಾರಜೋಳ ಉಪಸ್ಥಿತರಿದ್ದರು. 


ಸುದ್ದಿ ಓದಿ