ಸಂಭವನೀಯ ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸಲು ಜಿಲ್ಲಾಡಳಿತ ಸಜ್ಜು: ಹಿರೇಮಠ
ಮಾಂಜರಿ 14: ಚಿಕ್ಕೋಡಿ, ನಿಪ್ಪಾಣಿ, ಅಥಣಿ ಮತ್ತು ರಾಯಬಾಗ ತಾಲೂಕಿನಲ್ಲಿ ಸಂಭವನಿಯ ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸಲು ಜಿಲ್ಲಾಡಳಿತ ಸಜ್ಜಾಗಿದೆ ಎಂದು ಜಿಲ್ಲಾಧಿಕಾರಿ ಎಮ್.ಜಿ.ಹಿರೇಮಠ ತಿಳಿಸಿದರು.ಅವರು ರವಿವಾರ ಸಮೀಪದ ಸುಕ್ಷೇತ್ರ ಯಡೂರಿನ ಸಿದ್ಧ ತೀರ್ಥ ಯಾತ್ರಿ ನಿವಾಸಕ್ಕೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಎದುರಿಸಲು ಬೀಡು ಬಿಟ್ಟಿರುವ ಎನ್ಡಿಆರ್ಎಫ್ ತಂಡದ ಜೊತೆ ಚರ್ಚಿಸಿ ನಂತರ ಈ ವಿಷಯ ತಿಳಿಸಿದರು.
ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸಲು ಮಹಾರಾಷ್ಟ್ರ ಸರಕಾರದ ನೀರಾವರಿ ಇಲಾಖೆಯ ಜೊತೆಗೆ ಸತತ ಸಂಪರ್ಕ ಇಟ್ಟುಕೊಂಡು ಅಗತ್ಯ ಬಿದ್ದರೆ ಅಲ್ಲಿಗೆ ಕರ್ನಾಟಕದಿಂದ ಒರ್ವ ಅಧಿಕಾರಿಯನ್ನು ನೇಮಿಸಿ ನೀರಿನ ಸಂಗ್ರಹ ಮತ್ತು ಬಿಡುಗಡೆಯ ಆಧಾರದ ಮೇಲೆ ಇತ್ತ ಆಲಮಟ್ಟಿ ಜಲಾಶಯದಿಂದ ನೀರು ಬಿಡುಗಡೆ ಮಾಡಿ ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸಲಾಗುವುದು ಎಂದು ಹೇಳಿದರು.
ಪ್ರವಾಹ ಪರಿಸ್ಥಿತಿ ಬಂದೆರಗಿದ ಸಂದರ್ಭದಲ್ಲಿ ಒಂದು ವೇಳೆ ಅವಶ್ಯಕ ಬಿದ್ದಲ್ಲಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಗಳಿಗೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಉಪಾಯ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಹೇಳಿದರು. ನಂತರ ಕೋವಿಡ್ ಸೆಂಟರ್ಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.
ತಹಶೀಲ್ದಾರ ಪ್ರವೀಣ ಜೈನ, ಗ್ರಾಪಂ ಅಧ್ಯಕ್ಷ ರಾಹುಲ ದೇಸಾಯಿ, ಅಜಯ ಸೂರ್ಯವಂಶಿ, ಗ್ರಾಪಂ ಸದಸ್ಯರು ಅಧಿಕಾರಿಗಳು ಉಪಸ್ಥಿತರಿದ್ದರು.