ಜಿಲ್ಲಾ ಲೇಖಕಿಯರ ಸಂಘದ ವಾರ್ಷಿಕೋತ್ಸವ: ಪ್ರಶಸ್ತಿ ಪುರಸ್ಕೃತರಿಗೆ ಗೌರವ ಸನ್ಮಾನ
ಲೋಕದರ್ಶನ ವರದಿ
ಬೆಳಗಾವಿ 20: ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚಿನ ಮಹಿಳೆಯರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಓದು, ಬರವಣಿಗೆ ಮತ್ತು ಸೃಜನಶೀಲ ಚಟುವಟಿಕೆಗಳ ಮೂಲಕ ಸಮಾಜದ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಸುಮಾ ಕಿತ್ತೂರ ಹೇಳಿದರು. ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಲೇಖಕಿಯರ ಸಂಘದ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪುರಸ್ಕೃತರ ಗೌರವ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾ ಲೇಖಕಿಯರ ಸಂಘದಲ್ಲಿ 50ಕ್ಕೂ ಹೆಚ್ಚು ಸಾಧಕಿಯರು ಸದಸ್ಯರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಿ ಸನ್ಮಾನಿಸುವುದು ಅವರ ಸಾಧನೆಗೆ ಸಲ್ಲಿಸುವ ಸೂಕ್ತ ಗೌರವವಾಗಿದೆ. ರಾಜ್ಯದಾದ್ಯಂತ ಜಿಲ್ಲೆಯ ಕವಯಿತ್ರಿಯರು ಹಾಗೂ ಲೇಖಕಿಯರು ತಮ್ಮ ಸಾಹಿತ್ಯ ಪ್ರತಿಭೆಯಿಂದ ವಿಶೇಷ ಹೆಸರು ಮಾಡಿದ್ದು, ಎಲ್ಲ ಸಾಹಿತಿಗಳ ಸಹಕಾರದಿಂದ ಸಂಘವು ಕಳೆದ ಎರಡು ವರ್ಷಗಳಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸಿದೆ ಎಂದು ತಿಳಿಸಿದರು.
ಹೊಸ ತಲೆಮಾರಿನ ಲೇಖಕಿಯರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸಂಘವು ನಿರಂತರವಾಗಿ ವಿವಿಧ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿಯೂ ಇಂತಹ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದರು. ಸಾಹಿತಿಗಳಾದ ಪ್ರೇಮಾ ತಹಶೀಲ್ದಾರ ಅವರು ಮಾತನಾಡಿ, ಜಿಲ್ಲಾ ಲೇಖಕಿಯರ ಸಂಘದ 25 ವರ್ಷ ಸುಧೀರ್ಘ ಹಾದಿಯನ್ನು ಮೆಲುಕು ಹಾಕಿದ ಅವರು, ಹಿರಿಯ ಸಾಹಿತಿ ಆಶಾ ಕಡಪಟ್ಟಿಯವರ ಧೈರ್ಯ ಪರಿಶ್ರಮವನ್ನು ಸ್ಮರಿಸಿದರು. ಸಾಹಿತ್ಯ ಮತ್ತು ರಂಗಭೂಮಿ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಮಹತ್ವದೆ. ಸಾಹಿತ್ಯವೆಂಬುದು “ "ಬದುಕಿನ ನಿರ್ವಚನವೇ"ಸಾಹಿತ್ಯ “ಸಾಹಿತ್ಯದಲ್ಲಿ ಪ್ರಸ್ತುತತೆ ವಸ್ತುವಾಗಬೇಕೆಂದೂ, ಓದಿನೊಂದಿಗೆ ಬರಹ ಪ್ರಭುದ್ಧವಾಗಲಿ, ಬದುಕು ಬರಹ ಒಂದೇ ಆಗಿರಬೇಕು. ಮಾನವೀಯತೆಗೆ ಪ್ರೇರಕವಾದ ಸಾಹಿತ್ಯವಿರಲಿ ಎಂದು ಹೇಳಿದರು.