65 ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ
ತಾಂತ್ರಿಕ ಸಮಸ್ಯೆ ಬಗೆಹರಿಸಿ ಉಳಿದ ಹಕ್ಕುಪತ್ರ ವಿತರಣೆ: ಸಚಿವ ಆನಂದ್ ಸಿಂಗ್
ಹೊಸಪೇಟೆ (ವಿಜಯನಗರ),ಜ.11: ತಾಂತ್ರಿಕ ಸಮಸ್ಯೆ ಕಾರಣದಿಂದ ಹಕ್ಕುಪತ್ರ ವಿತರಣೆ ವಿಳಂಬವಾಗಿತ್ತು, ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಉಳಿದ ಕೊಳಗೇರಿಗಳ ನಿವಾಸಿಗಳಿಗೂ ಹಕ್ಕುಪತ್ರ ವಿತರಿಸಲಾಗುತ್ತದೆ ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ತಿಳಿಸಿದರು.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಬಳ್ಳಾರಿ ಉಪವಿಭಾಗದ ವತಿಯಿಂದ ಹೊಸಪೇಟೆ ನಗರದ 21ನೇ ವಾರ್ಡ್ ವ್ಯಾಪ್ತಿಯ ಜೆ.ಪಿ ಭವನ, ಸಿರಸನಕಲ್ಲು, ಸಂಕ್ಲಾಪುರ ತಾಂಡಾ ಏರಿಯಾದ ಘೋಷಿತ ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ವಿಜಯನಗರ ವಿಧಾನಸಭಾ ಕ್ಷೇತ್ರದ ಹೊಸಪೇಟೆ ಹಾಗೂ ಕಮಲಾಪುರ ವ್ಯಾಪ್ತಿಯ ಒಟ್ಟು 77 ಕೊಳಗೇರಿ ನಿವಾಸಿಗಳಿಗೆ 12925 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ. ಕರ್ನಾಟಕ ರಾಜ್ಯದಲ್ಲೇ ಅತಿ ಹೆಚ್ಚಿನ ಹಕ್ಕುಪತ್ರ ವಿತರಣೆ ಆಗಿರುವುದು ವಿಜಯನಗರ ಕ್ಷೇತ್ರದಲ್ಲಿ ಎಂದು ಮಾಹಿತಿ ನೀಡಿದರು.
ಹೊಸಪೇಟೆ ಭಾಗದ 60 ಕೊಳಗೇರಿಗಳಲ್ಲಿ 48 ಘೋಷಿತ ಕೊಳಗೇರಿ ಆಯ್ದುಕೊಂಡು ಅಲ್ಲಿನ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಇಲಾಖೆ ಸಿಬ್ಬಂದಿಯೊಂದಿಗೆ ಪ್ರತಿ ಮನೆಗೆ ಚೆಕ್ಬಂದಿ ಬರೆದು, ಸಮೀಕ್ಷೆ ನಡೆಸಿ ಪರೀಶೀಲಿಸಿ ಒಂದು ಕಾಲು ವರ್ಷದ ಅವಧಿಯಲ್ಲಿ ಈ ಕಾರ್ಯ ನೆರವೇರಿದೆ. ಉಳಿದ 12 ಕೊಳಗೇರಿ ಪ್ರದೇಶವನ್ನು ಸಮೀಕ್ಷೆ ಕೈಗೊಂಡು ತಾಂತ್ರಿಕ ಸಮಸ್ಯೆ ಬಗೆಹರಿಸಿ ಹಕ್ಕುಪತ್ರ ವಿತರಿಸಲಾಗುತ್ತದೆ ಎಂದರು. ತಮಗೆ ನೀಡಿರುವ ಹಕ್ಕುಪತ್ರಗಳ ಪಟ್ಟಾ ಕರಾರು ನೋಂದಣಿ ಕೈಗೊಂಡರೆ ಸರ್ಕಾರದ ವಿವಿಧ ಯೋಜನೆ, ಸಾಲಸೌಲಭ್ಯ ಸಿಗುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ, ಹಿಂದುಳಿದ ವರ್ಗಕ್ಕೆ ನಿಗದಿತ ದರ ಪಾವತಿಸಿ ನೋಂದಣಿ ಕೈಗೊಳ್ಳಬೇಕು ಎಂದು ಕೊಳಗೇರಿ ನಿವಾಸಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ 9 ಕುಟುಂಬಗಳಿಗೆ ವೇದಿಕೆಯಲ್ಲಿ ಹಕ್ಕುಪತ್ರ ವಿತರಿಸಲಾಯಿತು. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಿ.ಕೃಷ್ಣಾ ರೆಡ್ಡಿ ಅವರು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾಧಿಕಾರಿ ವೆಂಕಟೇಶ್ ಟಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಆನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ, ಪೌರಾಯುಕ್ತ ಮನೋಹರ್, 25ನೇ ವಾರ್ಡ್ ನಗರಸಭೆ ಸದಸ್ಯೆ ಶಿಲ್ಪಾ ದ್ವಾರಕೀಶ್ ಸೇರಿದಂತೆ ನಗರಸಭಾ ಸದಸ್ಯರು, ಸ್ಥಳೀಯ ಮುಖಂಡರು ಇದ್ದರು.