ಸ್ಥಳೀಯ ಶಾಸಕರಿಂದ ಬಡವರ ಅನ್ನಕ್ಕೆ ಕತ್ತರಿ: ಉಳ್ಳವರಿಗೆ ಕಿಟ್ ತನಿಖೆಗೆ ಆಗ್ರಹ
ರಾಣೀಬೆನ್ನೂರ 04: ಕೇಂದ್ರದಲ್ಲಿ ಆಡಳಿತ ಹೊಂದಿರುವ ಬಿಜೆಪಿ ಸರ್ಕಾರವು ಕೋವಿಡ್ ಹಾವಳಿಯಿಂದ ಬದುಕನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಬಡ ಕಟ್ಟಡ ಕಾರ್ಮಿಕರಿಗೆ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ಸರ್ಕಾರ ವಿತರಿಸಲು ಕ್ರಮಕೈಗೊಂಡಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ. ಆದರೆ ಸ್ಥಳೀಯ ಶಾಸಕರು ನಿಜವಾದ ಫಲಾನುಭವಿಗಳಿಗೆ ತಲುಪಿಸದೇ ಇತರೆಯವರೆಗೆ ನೀಡಿರುವುದು ಅತ್ಯಂತ ವಿಷಾದದ ಸಂಗತಿಯಾಗಿದೆ. ಈ ಕುರಿತು ಸರ್ಕಾರ ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರಾಗಿರುವ ಎಲ್ಲರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಪಿಕೆಕೆ ಇನಿಷಿಯೇಟಿವ್ ಅದ್ಯಕ್ಷ ಪ್ರಕಾಶ ಕೋಳಿವಾಡ ಆಗ್ರಹಿಸಿದರು.
ಅವರು ಬುಧವಾರ ಇಲ್ಲಿನ ವಾಗೀಶ ನಗರದ ಕಾಂಗ್ರೇಸ್ ಪಕ್ಷದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಹತ್ತಾರು ಸಾವಿರ ಸಂಖ್ಯೆಯಲ್ಲಿ ಕಟ್ಟಡ ಕಾರ್ಮಿಕರಿದ್ದ್ದಾರೆ. ಅದಕ್ಕಾಗಿ ಕಾರ್ಮಿಕ ಇಲಾಖೆ ಇದೆ. ಜೊತೆಗೆ ಕಾರ್ಮಿಕರ ಸಂಘಟನೆಯೂ ಇದೆ. ಒಬ್ಬ ಅಧಿಕಾರಿ ತನ್ನ ಜವಾಬ್ದಾರಿಯನ್ನು ಸರಿಯಾಗಿ ಅನುಸರಿಸದೇ ಶಾಸಕರ ಹೇಳಿಕೆಯಂತೆ ನಡೆಯುವುದರ ಮೂಲಕ 200ಕ್ಕೂ ಹೆಚ್ಚು ಕಿಟ್‌ಗಳನ್ನು ನಿಯಮಬಾಹಿರವಾಗಿ ಮೆಡ್ಲೇರಿಯ ಓರ್ವ ವ್ಯಕ್ತಿಗೆ ಕೊಟ್ಟಿದ್ದಾರೆ. ಇದರಿಂದ ಬಡವರಿಗೆ ಅನ್ಯಾಯವಾಗಿದೆ. ಈ ಕುರಿತು ಶೀಘ್ರ ತನಿಖೆ ನಡೆಸಬೇಕು ವಿಳಂಬ ಧೋರಣೆ ಅನುಸರಿಸಿದರೆ ಕೆಲವೇ ದಿನಗಳಲ್ಲಿ ದುರುಪಯೋಗದ ವಿರುದ್ದ ಹೋರಾಟಕ್ಕೆ ಮುಂದಾಗುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
200 ಕಿಟ್‌ಗಳನ್ನು ವಿತರಿಸಿರವುದನ್ನು ನೋಡಿದರೆ ಭವಿಷ್ಯದ ದಿನಗಳಲ್ಲಿ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಸ್ಪರ್ಧಿಸಲು ಸಿದ್ಧತೆ ನಡೆಸಿರುವ ಆ ಭಾಗದ ಬಸವರಾಜ ಹುಲ್ಲತ್ತಿ ಅವರ ಆರಂಭಿಕ ಗಿಮಿಕ್ ಇದಾಗಿದೆ. ಬಡವರಿಗೆ ದಕ್ಕಬೇಕಾದ ಆಹಾರ ಕಿಟ್‌ಗಳು ರಾಜಕೀಯ ಗಿಮಿಕ್‌ಗೆ ಬಳಸುವುದು ಯಾವ ನ್ಯಾಯ? ಎಂದು ಬಲವಾಗಿ ಪ್ರಶ್ನಿಸಿದ ಪ್ರಕಾಶ ಕೋಳಿವಾಡ ತಪ್ಪು ಯಾರೇ ಮಾಡಲಿ ಯಾವ ಪಕ್ಷದವರೇ ಆಗಿರಲಿ ಅವರ ವಿರುದ್ದ ಹೋರಾಟ ನಡೆಸುವುದು ಕಾಂಗ್ರೇಸ್‌ನ ಗುರಿಯಾಗಿದೆ. ಇದು ಕೇವಲ ಆರೋಪವಲ್ಲ ಎಲ್ಲ ರೀತಿಯಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಿ ಮಾಧ್ಯಮದ ಮುಂದಿಟ್ಟಿದ್ದೇವೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ನಗರಸಭಾ ಸದಸ್ಯ ನಿಂಗರಾಜ ಕೋಡಿಹಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.