ಅಭಿವೃದ್ಧಿಗೆ ಜನರ ಸಹಕಾರ ಅಗತ್ಯ: ನಡಹಳ್ಳಿ
ತಾಳಿಕೋಟಿ: ಮತಕ್ಷೇತ್ರವನ್ನು ಜಿಲ್ಲೆಯ ಒಂದು ಮಾದರಿ ಮತಕ್ಷೇತ್ರವನ್ನಾಗಿ ಮಾಡಲು ಸಾಕಷ್ಟು ಅನುದಾನವನ್ನು ತಂದು ಗ್ರಾಮೀಣ ಭಾಗದ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದೇನೆ. ಈಗಾಗಲೇ ಕ್ಷೇತ್ರದಲ್ಲಿ ಶೇ.90ರಷ್ಟು ಗ್ರಾಮಗಳಲ್ಲಿ ಕಾಮಗಾರಿಗಳು ಮುಗಿದಿವೆ. ಇನ್ನೂಳಿದ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸುವುದು ಎಂದು ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ (ನಡಹಳ್ಳಿ) ಹೇಳಿದರು.
ತಾಲೂಕಿನ ಕೂಚಬಾಳ-ಲಿಂಗದಳ್ಳಿ ಎಲ್.ಟಿ.1 ಮತ್ತು 2ರಲ್ಲಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರೂ. 2 ಕೋಟಿ ಮೊತ್ತದ ಸಿಮೆಂಟ್ ಕಾಂಕ್ರೇಟ್ ರಸ್ತೆಗಳ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಕ್ಷೇತ್ರದಲ್ಲಿ 25 ವರ್ಷಗಳ ಕತ್ತಲೆಗೆ ಕೇವಲ 4 ವರ್ಷಗಳಲ್ಲಿ ಬೆಳಕು ಕೊಡುವ ಕೆಲಸ ಮಾಡಿದ್ದೇನೆ. ಇದಕ್ಕೆಲ್ಲ ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹವೇ ಕಾರಣವಾಗಿದೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನೀವು ನನಗೆ ಕೊಟ್ಟ ಓಟಿಗೆ ಮೋಸವಾಗದ ರೀತಿಯಲ್ಲಿ ಕೆಲಸ ಮಾಡಿದ್ದೇನೆ. ನನಗೆ ಮುಂದೆಯೂ ನಿಮ್ಮೆಲ್ಲರ ಆಶೀರ್ವಾದ ಬೇಕು, ನನಗೆ ಮತ ಹಾಕಿ ಗೆಲ್ಲಿಸಿದ ನನ್ನ ಜನರನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವುದೇ ನನ್ನ ಮೂಲ ಉದ್ದೇಶವಾಗಿದೆ ಎಂದ ಅವರು ದೇಶದಲ್ಲಿ ಕಾಂಗ್ರೆಸ್ ಮುಳುಗುತ್ತಿರುವ ಹಡಗು ಆ ಪಕ್ಷಕ್ಕೆ ಯಾವುದೇ ಭವಿಷ್ಯ ಇಲ್ಲ, ದೇಶದ ಜನ ಅವರನ್ನು ತಿರಸ್ಕರಿಸಿದ್ದಾರೆ. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ದೇಶ ಸುರಕ್ಷಿತ ಹಾಗೂ ಸುಭದ್ರವಾಗಿದೆ ಎಂದರು.
ಓಣಿಯಲ್ಲಿ ಸಂಚಾರ: ಕೂಚಬಾಳ ಗ್ರಾಮದಲ್ಲಿಯ ಪರಿಸ್ಥಿತಿಯನ್ನು ಅವಲೋಕಿಸಲು ಸ್ವತಃ ಶಾಸಕ ನಡಹಳ್ಳಿ ಅವರು ಅಲ್ಲಿಯ ಮುಖಂಡರು ಕಾರ್ಯಕರ್ತರು ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ಹೋಗಿ ಆಗಿರುವ ಕೆಲಸಗಳನ್ನು ಹಾಗೂ ಅಲ್ಲಿಯ ನೈಜ ಪರಿಸ್ಥಿತಿಯನ್ನು ಜನರಿಂದಲೇ ತಿಳಿದುಕೊಂಡು ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ಕೊಟ್ಟರು. ಈ ಸಮಯದಲ್ಲಿ ಜಿ.ಪಂ. ಮಾಜಿ ಸದಸ್ಯ ನಿಂಗಪ್ಪಗೌಡ ಬಪ್ಪರಗಿ, ಗುರಣ್ಣ ಮೇಟಿ, ಬಾವೂರ ಗ್ರಾಪಂ ಸದಸ್ಯರಾದ ಬಾಬು ಭಜಂತ್ರಿ, ಸೋಮು ಕಾಮರಡ್ಡಿ, ಎಇಇ ಹುಂಡೇಕಾರ, ಜೆ.ಇ. ಸಂದೀಪ ಪಾಟೀಲ, ಗುತ್ತಿಗೆದಾರ ಮಧು ಬಾವಿ ಇದ್ದರು.