ಶಿಗ್ಗಾವ್

ಉಚಿತ ಕೊಡುಗೆಗಳ ಭರದಲ್ಲಿ ಅಭಿವೃದ್ಧಿಗೆ ಅನುದಾನ ಕಡಿತ ಸಾಧ್ಯತೆ: ಬೊಮ್ಮಾಯಿ

ಉಚಿತ ಕೊಡುಗೆಗಳ ಭರದಲ್ಲಿ ಅಭಿವೃದ್ಧಿಗೆ ಅನುದಾನ ಕಡಿತ ಸಾಧ್ಯತೆ: ಬೊಮ್ಮಾಯಿ

ಶಿಗ್ಗಾವಿ : ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಅನುದಾನ ಕಡಿತವಾಗುವ ಸಾಧ್ಯತೆ ಇದ್ದು, ಉಚಿತ ಕೊಡುಗೆಗಳ ಭರದಲ್ಲಿ ಸರ್ಕಾರ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಕಡಿತ ಮಾಡಬಾರದು, ಸರ್ಕಾರ ಅದು ಆಗದಂತೆ ನೋಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

ತಾಲೂಕಿನ ಮಡ್ಲಿ ಗ್ರಾಮದಲ್ಲಿ ನಿರ್ಮಾಣವಾಗಿರುವ ನೂತನ ಶಾಲಾ ಕೊಠಡಿಗಳ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎರಡು ಶಾಲಾ ಕೊಠಡಿಗಳ ಉದ್ಘಾಟನೆಗೆ ಬಂದಿದ್ದಾರೆ ಎಂದು ನಿಮಗೆ ಆಶ್ಚರ್ಯ ಆಗಬಹುದು. ಆದರೆ ನಾನು ರಾಜ್ಯದ ಭವಿಷ್ಯ ಬರೆಯುವ ದೇಗುಲಗಳ ಉದ್ಘಾಟನೆ ಮಾಡಲು ಬಂದಿದ್ದೇನೆ, ಒಂದು ಗ್ರಾಮಕ್ಕೆ ಕುಡಿಯುವ ನೀರು ಆರೋಗ್ಯದ ಜೊತೆಗೆ ಶಾಲಾ ಕೊಠಡಿಗಳು ಮುಖ್ಯವಾಗಿದೆ. ಅದಕ್ಕಾಗಿ ನಾನು ಶಾಲಾ ಕೊಠಡಿ ನಿರ್ಮಾಣಕ್ಕೆ ಆದ್ಯತೆ ನೀಡಿದ್ದೇನೆ. ವಿವೇಕ ಯೋಜನೆ ಅಡಿಯಲ್ಲಿ  ಸುಮಾರು 9235 ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲು ಆದೇಶ ಮಾಡಿದ್ದೇವೆ, ರೈತನ ಭೂಮಿ ಎಷ್ಟಿದೆ ಅಷ್ಟೇ ಇದೆ. ಆದರೆ, ಕುಟುಂಬದ ಸದಸ್ಯರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಶಿಕ್ಷಣ ಅತ್ಯಂತ ಮುಖ್ಯ ಆದ್ದರಿಂದ ನಾನು ಶಿಕ್ಷಣಕ್ಕೆ ಶೇ.13 ರಷ್ಟು ಅನುದಾನ ನೀಡಿದ್ದೇನೆ. ಆರೋಗ್ಯ ಕ್ಷೇತ್ರಕ್ಕೆ ಶೇ.12 ರಷ್ಟು ಅನುದಾನ ನೀಡಿದ್ದೇನೆ ಎಂದರು. 

ನಮ್ಮ ಅವಧಿಯಲ್ಲಿ 15000 ಶಿಕ್ಷಕರ ನೇಮಕಾತಿ ಮಾಡಲಾಗಿದೆ. ಶಿಗ್ಗಾವಿ ಕ್ಷೇತ್ರದಲ್ಲಿ ಶಿಕ್ಷಕರ ಕೊರತೆ ಉಂಟಾದರೆ ನಮ್ಮ ದಿ. ಗಂಗಮ್ಮ ಬೊಮ್ಮಾಯಿ ಟ್ರಸ್ಟ್‌ ನಿಂದ ಶಿಕ್ಷಕರನ್ನ ನೀಡಲಾಗುವುದು, 

ರಾಜ್ಯದ ಎಲ್ಲ ಶಾಲೆಗಳಲ್ಲಿಯೂ ಶೌಚಾಲಯ ನಿರ್ಮಾಣಕ್ಕೆ 250 ಕೋಟಿ ರೂ. ನೀಡಿದ್ದೇನೆ. ಪದವಿ ವರೆಗೆ ವಿದ್ಯಾರ್ಥಿಗಳಿಗೆ  ಉಚಿತ ಶಿಕ್ಷಣಕ್ಕೆ ಅವಕಾಶ ನೀಡಲಾಗಿದೆ. ಬಸ್‌ನಲ್ಲಿ ಎಲ್ಲ ಮಹಿಳೆಯರಿಗೆ ಉಚಿತ ಆಗಿರುವುದರಿಂದ ಎಲ್ಲ ವಿದ್ಯಾರ್ಥಿನಿಯರಿಗೂ ಅನುಕೂಲ ಆಗಿದೆ ಎಂದರು. 

ಪ್ರಾಸ್ತಾವಿಕವಾಗಿ ಬಿಇಓ ಎಂ ಬಿ ಅಂಬಿಗೇರ ಮಾತನಾಡಿ, ಬೊಮ್ಮಾಯಿಯವರು ಸಿಎಂ ಆದಾಗ ಅವಕಾಶ ಬಳಸಿಕೊಂಡು ಶಿಕ್ಷಣ ಇಲಾಖೆಗೆ 20 ಕೋಟಿ ಅನುದಾನ ನೀಡಿದ್ದಾರೆ, ಶಿಥಿಲಾವ್ಯಸ್ಥೆಯಲ್ಲಿದ್ದ ಎಲ್ಲ ಕೊಠಡಿಗಳನ್ನು ನೆಲ ಸಮ ಮಾಡಿ ಹೊಸ ಕೊಠಡಿಗಳನ್ನು ನಿರ್ಮಿಸುತ್ತಿದ್ದಾರೆ, ಡೆಸ್ಕ್‌ಗಳ ವ್ಯವಸ್ಥೆ ಮಾಡಿದ್ದಾರೆ, ಮೂಲಭೂತ ಸೌಲಭ್ಯಗಳನ್ನು ಒದಗಿಸಿದ್ದಾರೆ, 5  ಹೈಸ್ಕೂಲ್ ಗಳನ್ನು ನೀಡಿದ್ದಾರೆ, ತಾಲೂಕಿನಲ್ಲಿ ಶಿಕ್ಷಕರ ಕೊರತೆ ಇದೆ ಎಂದಾಗ ಸರಕಾರ ನೀಡದಿದ್ದರೆ ನನ್ನ ಗಂಗಮ್ಮ ಬೊಮ್ಮಾಯಿ ಟ್ರಷ್ಟ್‌ ನಿಂದ ನೀಡುತ್ತೇನೆ ಎಂಬ ಬರವಸೆ ನೀಡಿದ್ದಾರೆ ಎಂದರು. 

ಕಾರ್ಯಕ್ರಮದಲ್ಲಿ ಶ್ರೀಕಾಂತ ದುಂಡಿಗೌಡ್ರ, ಶಿವಾನಂದ ಮ್ಯಾಗೇರಿ, ಹನುಮರೆಡ್ಡಿ ನಡುವಿನಮನಿ, ಎಸ್ ಆರ್ ಪಾಟೀಲ್, ಗ್ರಾಪಂ ಅಧ್ಯಕ್ಷ ರುದ್ರಗೌಡ ಪಾಟೀಲ್, ಅಶೋಕ ಅಕ್ಕಿ, ಹೇಮರೆಡ್ಡಿ ನಡುವಿನಮನಿ, ತಹಶೀಲ್ದಾರ ಸಂತೋಷ ಹಿರೇಮಠ, ಇಓ ಪ್ರಶಾಂತ ತುರ್ಕಾಣಿ, ಬಸನಗೌಡ್ರ ಪಾಟೀಲ್, ಬಸಮ್ಮ ಗುಳೇದ ಸೇರಿದಂತೆ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಗ್ರಾಮಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ