ಪದನಾಮ ಬದಲಾವಣೆ ಕ್ರಮ ಸ್ವಾಗತಾರ್ಹ: ಕುಂಬಾರ
ಚಿಕ್ಕೋಡಿ 28: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ಆರೋಗ್ಯ ಸಹಾಯಕ ವೃಂದ ಮತ್ತು ಪೋಷಕ ವೃಂದಗಳ ಪದನಾಮವನ್ನು ರಾಜ್ಯ ಸರಕಾರ ಬದಲಾವಣೆ ಮಾಡಿ ಆದೇಶ ಹೊರಡಿಸಿರುವುದು ಸಂತಸ ತಂದಿದೆ ಎಂದು ಕರ್ನಾಟಕ ರಾಜ್ಯ ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಕೇಂದ್ರದ ರಾಜ್ಯ ಅಧ್ಯಕ್ಷ ಬಿ.ಎ.ಕುಂಬಾರ ಹೇಳಿದರು.
ಚಿಕ್ಕೋಡಿ ನಗರದ ತಾಲೂಕಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ಆರೋಗ್ಯ ಸಹಾಯಕ ವೃಂದದ ಬೇಡಿಕೆಯಂತೆ ಕಿರಿಯ ಆರೋಗ್ಯ ಸಹಾಯಕ-ಹಿರಿಯ ಆರೋಗ್ಯ ಸಹಾಯಕ(ಪುರುಷ-ಮಹಿಳೆ) ಹುದ್ದೆಗಳ ಮತ್ತು ಪೋಷಕ ವೃಂದಗಳ ಪದನಾಮವನ್ನು ಆರೋಗ್ಯ ನೀರೀಕ್ಷಣಾಧಿಕಾರಿ, ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ, ಆರೋಗ್ಯ ಮೇಲ್ವಿಚಾರಕರ ಹುದ್ದೆಗೆ ಆರೋಗ್ಯ ಮೇಲ್ವಿಚಾರಣಾಧಿಕಾರಿ, ಕಿರಿಯ ಆರೋಗ್ಯ ಸಹಾಯಕರು(ಮಹಿಳೆ) ಹುದ್ದೆಯ ಪದನಾಮವನ್ನು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಎನ್ನುವ ಮೂಲಕ ಹೀಗೆ ಹಲವು ಹುದ್ದೆಗಳ ಪದನಾಮ ಬದಲಾವಣೆ ಮಾಡಿರುವ ಕ್ರಮ ಸ್ವಾಗತಾರ್ಹ ಎಂದರು.
ಆರೋಗ್ಯ ಇಲಾಖೆಯ ಸುಮಾರು 14 ಬೇಡಿಕೆ ಈಡೇರಿಸುವಂತೆ ಸರ್ಕಾರದ ಮಟ್ಟದಲ್ಲಿ ನಮ್ಮ ಸಂಘಟನೆ ಕಳೆದ 37 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿತ್ತು. ಈಗ ರಾಜ್ಯ ಸರ್ಕಾರ ಎರಡು ಬೇಡಿಕೆ ಈಡೇರಿಸುವ ಮೂಲಕ ಆರೋಗ್ಯ ಇಲಾಖೆ ಸಹಾಯಕರ ಮತ್ತು ಮೇಲ್ವಿಚಾರಕರ ಬೇಡಿಕೆಗಳಿಗೆ ಸ್ಪಂದಿಸಿದೆ. ಉಳಿದ ಬೇಡಿಕೆಗಳನ್ನು ತಕ್ಷಣಾ ಈಡೇರಿಸಬೇಕೆಂದು ಆರೋಗ್ಯ ಸಚಿವ ಡಿ.ಸುಧಾಕರ ಅವರಿಗೆ ಮನವಿ ಮಾಡಲಾಗಿದೆ ಎಂದರು.
ಆರೋಗ್ಯ ಇಲಾಖೆಯ ವಿವಿಧ ಹುದ್ದೆಗಳ ಪದನಾಮ ಬದಲಾವಣೆ ಮಾಡಬೇಕೆಂದು ಸರ್ಕಾರದ ಮಟ್ಟದಲ್ಲಿ ಬೇಡಿಕೆಗೆ ಸಹಕರಿಸಿದ ನೌಕರರ ಸಂಘದ ರಾಜ್ಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ರಾಜ್ಯದ ಆರೋಗ್ಯ ಸಹಾಯಕರ ಜಿಲ್ಲಾಧ್ಯಕ್ಷರು ಮತ್ತು ಸಂಘಟನೆಯ ಎಲ್ಲ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಕೆ.ಆರ್.ಕಾಂಬಳೆ, ಎಸ್.ವೈ.ದಿವಟೆ, ಬಿ.ವೈ.ನಾಯ್ಕರ ಉಪಸ್ಥಿತರಿದ್ದರು.