ಗೂಂಡಾವರ್ತನೆ ತೋರಿದ ಶಾಸಕರ ವಿರುದ್ದ ಕ್ರಮಕ್ಕೆ ಒತ್ತಾಯ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದಿಂದ ಮನವಿ
ಸವದತ್ತಿ: ಕೃಷ್ಣಾ ತೀರದ ಗ್ರಾಮಗಳಿಗೆ ಮಂಜೂರಾದ 19 ಕೋಟಿ ರೂ. ಅನುದಾನದ ಕಾಮಗಾರಿಯನ್ನು ಬೇರೆ ರಸ್ತೆ ಕಾಮಗಾರಿಗೆ ಬಳಸಿದ ಕುರಿತು ವಿಸ್ತೃತ ವರದಿ ಬಿತ್ತರಿಸಿದ ಮುದ್ದೇಬಿಹಾಳ ತಾಲೂಕಿನ ವರದಿಗಾರ ನಾರಾಯಣ ಮಾಯಾಚಾರಿ ಅವರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ದೂರವಾಣಿ ಮೂಲಕ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಇದು ಮಾದ್ಯಮದ ಅಭಿವ್ಯಕ್ತಿ ಸ್ವಾತಂತ್ರ್ಯದ ಕಗ್ಗೊಲೆ ಎಂದು ರಾಜ್ಯ ಉಪಾಧ್ಯಕ್ಷ ಬಿ.ಎಮ್. ಶಿರಸಂಗಿ ಹೇಳಿದರು.
ಇಲ್ಲಿನ ತಹಶೀಲ್ದಾರ ಜಿ.ಬಿ. ಜಕ್ಕನಗೌಡ್ರ ಮೂಲಕ ಮುಖ್ಯಮಂತ್ರಿಗಳಿಗೆ ವಿಜಯಪೂರ ಜಿಲ್ಲೆಯ ಮುದ್ದೇಬಿಹಾಳ ಶಾಸಕ ಪತ್ರಕರ್ತರ ಮೇಲೆ ತೋರಿದ ಗೂಂಡಾ ವರ್ತನೆ ಖಂಡಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದಿಂದ ಸೂಕ್ತ ಕಾನೂನು ಕ್ರಮಕ್ಕಾಗಿ ಮನವಿ ಸಲ್ಲಿಸಲಾಯಿತು.
ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭವೆಂದು ಭಾಷಣದಲ್ಲಿ ಹೇಳುವ ರಾಜಕಾರಣಿಗಳು ಸ್ಥಂಭದ ಬುಡ ಅಲ್ಲಾಡಿಸಲು ಪ್ರಯತ್ನಿಸಿದ್ದಾರೆ. ಪತ್ರಿಕೆಯ ವರದಿಗಾರ ಮತ್ತು ಸ್ಥಾನಿಕ ಸಂಪಾದಕ ಬ್ರಹ್ಮಾನಂದ ಅವರ ಕುರಿತು ಶಾಸಕರು ನಿಂದಿಸಿದ್ದಾರೆ. ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ಕಾರ್ಯನಿರ್ವಹಿಸಬೇಕಿದ್ದ ಮಾಧ್ಯಮ ಇಂದು ಗೂಂಡಾವರ್ತನೆಯ ಜನಪ್ರತಿನಿಧಿಗಳ ಮಧ್ಯೆ ನಲುಗುತ್ತಿರುವುದು ನಿಜಕ್ಕೂ ನೋವಿನ ಸಂಗತಿ.
ಇದನ್ನು ಧ್ವನಿ ಸಂಘಟನೆ ತೀವ್ರವಾಗಿ ಖಂಡಿಸುತ್ತೇವೆ. ರಾಜ್ಯದ ಬಹುತೇಕ ವರದಿಗಾರರಿಗೆ ಸೇವಾಭದ್ರತೆಯ ಹಾಗೂ ಪ್ರಾಣದ ರಕ್ಷಣೆ ಇಲ್ಲದಂತಾಗಿದೆ. ಘಟನೆ ಖಂಡಿಸಿ ಸಾಕ್ಷಿ ಆಧಾರಗಳ ಸಮೇತ ತಪ್ಪಿತಸ್ಥರ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸುತ್ತೇವೆ. ಸಿಎಮ್ ಬಸವರಾಜ ಬೊಮ್ಮಾಯಿ ಅವರು ಕೂಡಲೇ ಐಪಿಸಿ 504 ಮತ್ತು ಜೀವ ಬೆದರಿಕೆ ಐಪಿಸಿ 506 ರನ್ವಯ ಪ್ರಕರಣ ದಾಖಲಿಸಿ ಕ್ರಮವಹಿಸಿ ಶಾಸಕರ ರಾಜಿನಾಮೆ ಪಡೆದು ಮಾಧ್ಯಮರಂಗದ ಪ್ರತಿನಿಧಿಗೆ ಆದ ಅನ್ಯಾಯವನ್ನು ಸರಿಪಡಿಸಬೇಕೆಂದು ಆಗ್ರಹಿಸಿದ ಅವರು ನೊಂದ ಪತ್ರಕರ್ತನಿಗೆ ನ್ಯಾಯ ನೀಡಬೇಕೆಂದು ಸಂಘಟನೆಯ ಮನವಿಯಾಗಿದೆ ಎಂದರು.
ಈ ವೇಳೆ ತಾಲೂಕಾಧ್ಯಕ್ಷ ಬಾಳಕೃಷ್ಣ ಮಿರಜಕರ, ಮಂಜುನಾಥ ಜಗದಾರ, ಮಹೇಶ ಮಿರಜಕರ, ಫಕ್ಕೀರಪ್ಪ ಸಂಗಪ್ಪನವರ, ಶಿವಾಜಿ ಇಂಗಳೆ, ಶ್ರೀಶೈಲ ಮಂಗೋಜಿ ಇದ್ದರು.