ಸೌಂದತ್ತಿ

ಯಲ್ಲಮ್ಮಾ ದೇವಸ್ಥಾನ ಪರಿಸರದಲ್ಲಿ ಸ್ವಚ್ಛತೆಗೆ ಒತ್ತಾಯಿಸಿ ಕರವೇ ಮನವಿ

ಯಲ್ಲಮ್ಮಾ ದೇವಸ್ಥಾನ ಪರಿಸರದಲ್ಲಿ ಸ್ವಚ್ಛತೆಗೆ ಒತ್ತಾಯಿಸಿ ಕರವೇ ಮನವಿ

ಸವದತ್ತಿ 13: ಸುಕ್ಷೇತ್ರ ಯಲ್ಲಮ್ಮಾ ದೇವಸ್ಥಾನ ಮತ್ತು ಜೋಗುಲಭಾವಿಯ ಸತ್ಯೆಮ್ಮಾ ದೇವಸ್ಥಾನದ ಸುತ್ತಲಿನ ಪರಿಸರವನ್ನು ಸ್ವಚ್ಚ ಹಾಗೂ ಸುವ್ಯವಸ್ಥತೆಯಿಂದ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬನದ ಕಾರ್ಯಕರ್ತರು ಶಾಸಕ ವಿಶ್ವಾಸ ವೈದ್ಯರವರಿಗೆ ಮನವಿ ಸಲ್ಲಿಸಿದ್ದಾರೆ. 

ಉಭಯ ಕ್ಷೇತ್ರಗಳಿಗೆ ಆಗಮಿಸುವ ಭಕ್ತರಿಗೆ ಸೂಕ್ತ ವಸತಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕಿದ್ದು, ಯಾತ್ರಾರ್ಥಿಗಳಿಗೆ ಅವಶ್ಯಕ ಮೂಲಭೂತ ಸೌಕರ್ಯವಿಲ್ಲದ ಕಾರಣ ಎಲ್ಲಂದರಲ್ಲಿ ಗಲೀಜು ವಾತಾವರಣ ನಿರ್ಮಾಣವಾಗುತ್ತಿದೆ. ಆ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶೌಚಾಲಯಗಳನ್ನು ಹಾಗೂ ಸ್ನಾನಗೃಹಗಳನ್ನು ನಿರ್ಮಿಸಬೇಕಿದ್ದು, ಶಾಸಕರು ಕೂಡಲೆ ಭಕ್ತರಿಗೆ ಅವಶ್ಯಕವಾಗಿರುವಂತ ಸೌಲಭ್ಯತೆಗಳನ್ನು ಕಲ್ಪಿಸುವಲ್ಲಿ ವಿಶೇಷ ಆಸಕ್ತಿ ತೋರಬೇಕೆಂದು ಮನವಿಯಲ್ಲಿ ಹೇಳಿದ್ದಾರೆ. 

ಶ್ರೀಕ್ಷೇತ್ರದಲ್ಲಿ 1ಲೀಟರ ಕುಡಿಯುವ ನೀರಿನ ಬಾಟಲಿಗೆ 40ರೂ.ಗಳ ದುಬಾರಿ ವೆಚ್ಚದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಮಾರುಕಟ್ಟೆ ಬೆಲೆಗಿಂತ ಹೆಚ್ಚಿಗೆ ಮಾರಾಟ ಮಾಡುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಕ್ಷೇತ್ರದಲ್ಲಿ ಕನ್ನಡ ಭಾಷೆಯ ನಾಮಫಲಕಗಳಿಗೆ ವಿಶೇಷ ಆದ್ಯತೆಯನ್ನು ನೀಡಬೇಕಿದ್ದು, ಅವಶ್ಯಕತೆ ಇಲ್ಲದೆ ಅನಧಿಕೃತವಾಗಿ ಅಳವಡಿಸಿರುವ ಅನ್ಯ ಭಾಷೆಯ ನಾಮಫಲಕಗಳನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದರು. 

ಕರವೇ ತಾಲೂಕಾ ಅಧ್ಯಕ್ಷ ಉದಯಕುಮಾರ ಚಿಕ್ಕನ್ನವರ, ಸುಭಾನಿ ಮುಗುಟಖಾನ, ಸಾಜನ್ ಲಮಾಣಿ, ಅಭಿಷೇಕ ಮನಿಕಟ್ಟಿ, ಮಂಜುನಾಥ ಮೇಟಿ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ