ರಾಷ್ಟ್ರೀಯ

ರೈತರ ಪ್ರತಿಭಟನೆ ಹಿನ್ನೆಲೆ: ದೆಹಲಿ-ನೋಯ್ಡಾ ಗಡಿ ಬಂದ್

ರೈತರ ಪ್ರತಿಭಟನೆ ಹಿನ್ನೆಲೆ: ದೆಹಲಿ-ನೋಯ್ಡಾ ಗಡಿ ಬಂದ್

ನವದೆಹಲಿ, ಡಿಸೆಂಬರ್.2: ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಬುಧವಾರ ಕೂಡ ನೋಯ್ಡಾ-ದೆಹಲಿ ಗಡಿಯಲ್ಲಿ ತಮ್ಮ ಧರಣಿಯನ್ನು ಮುಂದುವರೆಸಿದ್ದಾರೆ. ಇದರಿಂದ ಉತ್ತರ ಪ್ರದೇಶವನ್ನು ರಾಷ್ಟ್ರ ರಾಜಧಾನಿಯೊಂದಿಗೆ ಸಂಪರ್ಕಿಸುವ ಪ್ರಮುಖ ಮಾರ್ಗವನ್ನು ಮುಚ್ಚಲಾಗಿದೆ.

ರಾಷ್ಟ್ರ ರಾಜಧಾನಿಗೆ ಪ್ರಯಾಣಿಸುವ ಪ್ರಯಾಣಿಕರು ಚಿಲ್ಲಾ ಮಾರ್ಗ ಬಳಸದೆ ದೆಹಲಿ-ನೋಯ್ಡಾ ಡೈರೆಕ್ಟ್ (ಡಿಎನ್‌ಡಿ) ಅಥವಾ ಕಲಿಂದಿ ಕುಂಜ್ ರಸ್ತೆಯನ್ನು ಬಳಸುವಂತೆ ದೆಹಲಿ ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.

ಗೌತಮ್ ಬುದ್ಧ ದ್ವಾರ ಬಳಿ ರೈತರು ಪ್ರತಿಭಟನೆ ನಡೆಸುತ್ತಿರುವುದರಿಂದ ನೋಯ್ಡಾ-ಲಿಂಕ್ ರಸ್ತೆಯ ಚಿಲ್ಲಾ ಗಡಿಯನ್ನು ಮುಚ್ಚಲಾಗಿದೆ. ನೋಯ್ಡಾಕ್ಕೆ ಹೋಗುವವರು ನೋಯ್ಡಾ-ಲಿಂಕ್ ರಸ್ತೆ ಬಳಸದೆ ನೋಯ್ಡಾಕ್ಕೆ ಬದಲಾಗಿ ಎನ್ ಎಚ್ -24 ಮತ್ತು ಡಿಎನ್‌ ಡಿ ಬಳಸುವಂತೆ ಜನರಿಗೆ ಸೂಚಿಸಲಾಗಿದೆ ಎಂದು ದೆಹಲಿ ಸಂಚಾರ ಪೊಲೀಸರು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮತ್ತು ಇತರ ರೈತ ಸಂಘಟನೆಗಳಿಗೆ ಸೇರಿದ ನೂರಾರು ರೈತರು ಮಂಗಳವಾರ ಸಂಜೆ ಉತ್ತರ ಪ್ರದೇಶ ಗಡಿಯಲ್ಲಿ ಜಮಾಯಿಸಿದ್ದರು.  ಪಂಜಾಬ್ ಮತ್ತು ಹರಿಯಾಣದ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಲು ದೆಹಲಿ ಕಡೆಗೆ ಹೋಗದಂತೆ ತಡೆಯಲು ಭಾರಿ ಭದ್ರತೆಯನ್ನು ನಿಯೋಜಿಸಲಾಗಿದೆ.

ಸೆಪ್ಟೆಂಬರ್‌ನಲ್ಲಿ ಸಂಸತ್ತು ಅಂಗೀಕರಿಸಿದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮೂರು ಕಾನೂನುಗಳಿಂದ ರೈತರು ಬೃಹತ್ ಕಂಪನಿಗಳಿಂದ ಶೋಷಣೆಗೆ ಗುರಿಯಾಗಬಹುದು  ಎಂಬುದು ರೈತರ ಆತಂಕವಾಗಿದೆ.  

ಆದರೆ, ಈ ತಿದ್ದುಪಡಿ ಕಾನೂನುಗಳು ರೈತರಿಗೆ ಪ್ರಯೋಜನಕಾರಿ ಎಂಬ ನಿಲುವಿಗೆ ಸರ್ಕಾರ ಅಂಟಿಕೊಂಡಿದೆ. ಭಾನುವಾರ ತಮ್ಮ ಮನ್  ಕಿ ಬಾತ್ ಮಾಸಿಕ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, “ಭಾರತದಲ್ಲಿ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಹೊಸ ಆಯಾಮಗಳನ್ನು ಈ ಕಾನೂನುಗಳು ನೀಡಲಿವೆ.  ಕೃಷಿ ಸುಧಾರಣೆಗಳು ಈಗ ನಮ್ಮ ರೈತರಿಗೆ ಸಾಧ್ಯತೆಗಳ ಹೊಸ ಬಾಗಿಲುಗಳನ್ನು ತೆರೆದಿವೆ ಎಂದು ಹೇಳಿದ್ದರು.

ಈ ಸುಧಾರಣೆಗಳು ರೈತರ ಸಂಕೋಲೆಗಳನ್ನು ಕಳಚಲಿದ್ದು, ಅವರಿಗೆ ಹೊಸ ಹಕ್ಕುಗಳು ಮತ್ತು ಅವಕಾಶಗಳನ್ನು ನೀಡಿವೆ. ಈ ಹಕ್ಕುಗಳು ಅಲ್ಪಾವಧಿಯಲ್ಲಿಯೇ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ತಗ್ಗಿಸಲಿವೆ ಎಂದು ಪ್ರಧಾನಿ ಕಾನೂನುಗಳನ್ನು ಸರ್ಮಥಿಸಿಕೊಂಡಿದ್ದರು.

ಸುದ್ದಿ ಓದಿ