ದೆಹಲಿ ಎಲೆಕ್ಟ್ರಿಕ್ ವಾಹನ ನೀತಿ–2026 ಅಡಿಯಲ್ಲಿ ಇವಿ ಸಬ್ಸಿಡಿ ಪೋರ್ಟಲ್ಗೆ ಚಾಲನೆ
Delhi Launches EV Subsidy Portal Under Electric Vehicle Policy 2026
ನವದೆಹಲಿ, ಜುಲೈ 3: ದೆಹಲಿ ಸರ್ಕಾರವು ಶುಕ್ರವಾರ ದೆಹಲಿ ಎಲೆಕ್ಟ್ರಿಕ್ ವಾಹನ (ಇವಿ) ನೀತಿ–2026 ಅಡಿಯಲ್ಲಿ ಇವಿ ಸಬ್ಸಿಡಿ ಪೋರ್ಟಲ್ಗೆ ಚಾಲನೆ ನೀಡಿದ್ದು, ಅರ್ಹ ಫಲಾನುಭವಿಗಳು ಎಲೆಕ್ಟ್ರಿಕ್ ವಾಹನವನ್ನು ಖರೀದಿಸಿ ಅದರ ನೋಂದಣಿ ಪ್ರಮಾಣಪತ್ರ (ಆರ್ಸಿ) ಪಡೆದ 30 ದಿನಗಳೊಳಗೆ ಆನ್ಲೈನ್ ಮೂಲಕ ಸಬ್ಸಿಡಿಗೆ ಅರ್ಜಿ ಸಲ್ಲಿಸಬಹುದು.
ದೆಹಲಿ ಕಾರ್ಯಾಲಯದಲ್ಲಿ ಪೋರ್ಟಲ್ಗೆ ಚಾಲನೆ ನೀಡಿದ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು, ಅರ್ಜಿ ಯಶಸ್ವಿಯಾಗಿ ಅಂಗೀಕರಿಸಿದ 60 ದಿನಗಳೊಳಗೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಸಬ್ಸಿಡಿ ಜಮಾ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದರು.
ಈ ಪೋರ್ಟಲ್ ಸರಳ, ವೇಗವಾದ, ಪಾರದರ್ಶಕ ಹಾಗೂ ಸಂಪೂರ್ಣ ಡಿಜಿಟಲ್ ವ್ಯವಸ್ಥೆಯಾಗಿದ್ದು, ಅರ್ಹ ನಾಗರಿಕರು ಮನೆಯಿಂದಲೇ ಎಲ್ಲಾ ಸೇವೆಗಳನ್ನು ಪಡೆಯಲು ಅನುಕೂಲವಾಗುವಂತೆ ರೂಪಿಸಲಾಗಿದೆ. ಸಂಪೂರ್ಣ ಪ್ರಕ್ರಿಯೆಯನ್ನು ಕಾಗದರಹಿತ, ಪಾರದರ್ಶಕ ಹಾಗೂ ನಾಗರಿಕ ಕೇಂದ್ರಿತವಾಗಿಸಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು ದೆಹಲಿ ಎಲೆಕ್ಟ್ರಿಕ್ ವಾಹನ ನೀತಿ–2026ರ ಅಧಿಕೃತ ಪುಸ್ತಕಿಕೆಯನ್ನು ಕೂಡ ಬಿಡುಗಡೆ ಮಾಡಿ, ಸ್ವಚ್ಛ, ಆಧುನಿಕ ಮತ್ತು ಸುಸ್ಥಿರ ಸಾರಿಗೆ ವ್ಯವಸ್ಥೆಯನ್ನು ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಈ ನೀತಿಯನ್ನು ದೂರದೃಷ್ಟಿಯುಳ್ಳ ಹಾಗೂ ಪರಿವರ್ತನಾತ್ಮಕ ಕ್ರಮವೆಂದು ಬಣ್ಣಿಸಿದ ಅವರು, ಶುದ್ಧ ಗಾಳಿಯನ್ನು ಉತ್ತೇಜಿಸುವುದು, ಮಾಲಿನ್ಯ ನಿಯಂತ್ರಿಸುವುದು, ಇಂಧನ ಭದ್ರತೆಯನ್ನು ಬಲಪಡಿಸುವುದು ಹಾಗೂ ಹಸಿರು ಆರ್ಥಿಕತೆಯನ್ನು ಬೆಂಬಲಿಸುವುದು ಇದರ ಪ್ರಮುಖ ಉದ್ದೇಶಗಳಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಡಾ. ಪಂಕಜ್ ಕುಮಾರ್ ಸಿಂಗ್, ಸಾರಿಗೆ ಆಯುಕ್ತೆ ನಿಹಾರಿಕಾ ರೈ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸುಮಾರು ಒಂದು ವರ್ಷದ ಕಾಲ ವಿವಿಧ ಹಿತಾಸಕ್ತಿಪಕ್ಷಗಳೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಿದ ಬಳಿಕ ಈ ನೀತಿಯನ್ನು ರೂಪಿಸಲಾಗಿದೆ ಎಂದು ಗುಪ್ತಾ ತಿಳಿಸಿದರು. ವಾಹನ ಖರೀದಿ ಮತ್ತು ಹಳೆಯ ವಾಹನಗಳ ಸ್ಕ್ರ್ಯಾಪಿಂಗ್ಗೆ ಪ್ರೋತ್ಸಾಹಧನ, ಹಂತ ಹಂತವಾಗಿ ಜಾರಿಯಾಗುವ ಕಡ್ಡಾಯ ನಿಯಮಗಳು, ಚಾರ್ಜಿಂಗ್ ಮೂಲಸೌಕರ್ಯ, ಬ್ಯಾಟರಿ ಮರುಬಳಕೆ ಹಾಗೂ ಇ-ತ್ಯಾಜ್ಯ ನಿರ್ವಹಣೆ ಸೇರಿದಂತೆ ಇವಿ ಪರಿಸರ ವ್ಯವಸ್ಥೆಯ ಎಲ್ಲಾ ಅಂಶಗಳನ್ನು ಈ ನೀತಿ ಒಳಗೊಂಡಿದೆ ಎಂದು ಹೇಳಿದರು.
ನಾಗರಿಕರನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಈ ನೀತಿಯನ್ನು ರೂಪಿಸಲಾಗಿದ್ದು, ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು, ಖಾಸಗಿ ಕಾರುಗಳು ಹಾಗೂ ವಾಣಿಜ್ಯ ವಾಹನಗಳಿಗೆ ವಿಶೇಷ ಪ್ರೋತ್ಸಾಹಧನ ನೀಡಲಾಗಿದೆ. ಜೊತೆಗೆ ಎನ್–1 ಮತ್ತು ಎನ್–2 ವರ್ಗದ ವಾಣಿಜ್ಯ ವಾಹನಗಳಿಗೂ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ಈ ಪೋರ್ಟಲ್ ಮೂಲಕ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಖರೀದಿ ಪ್ರೋತ್ಸಾಹಧನ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿಯ ಪ್ರಗತಿಯನ್ನು ಪ್ರತಿಯೊಂದು ಹಂತದಲ್ಲೂ ನೇರವಾಗಿ ಪರಿಶೀಲಿಸುವ ಅವಕಾಶವಿದ್ದು, ಸಂಪೂರ್ಣ ಪಾರದರ್ಶಕತೆ ಖಚಿತಪಡಿಸಲಾಗಿದೆ.
ಅರ್ಜಿದಾರರು ಆಧಾರ್, ವಾಹನದ ನೋಂದಣಿ ಪ್ರಮಾಣಪತ್ರ (ಆರ್ಸಿ), ಮತದಾರರ ಗುರುತಿನ ಚೀಟಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಸುರಕ್ಷಿತವಾಗಿ ಅಪ್ಲೋಡ್ ಮಾಡಬಹುದು. ಸಂಸ್ಥೆಗಳು ಜಿಎಸ್ಟಿಐಎನ್, ಪ್ಯಾನ್ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ಸಹ ಸಲ್ಲಿಸಬಹುದಾಗಿದೆ.
ಇದೇ ವೇಳೆ, ಈ ಪೋರ್ಟಲ್ ದೆಹಲಿ ಎಲೆಕ್ಟ್ರಿಕ್ ವಾಹನ ನೀತಿ–2026ಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಮಾಹಿತಿಗಳ ಏಕೀಕೃತ ವೇದಿಕೆಯಾಗಿಯೂ ಕಾರ್ಯನಿರ್ವಹಿಸಲಿದ್ದು, ಅರ್ಹತಾ ಮಾನದಂಡಗಳು, ವಿವಿಧ ವಾಹನ ವರ್ಗಗಳಿಗೆ ಲಭ್ಯವಿರುವ ಸಬ್ಸಿಡಿ, ಅನುಮೋದಿತ ಮಾದರಿಗಳು, ಅಗತ್ಯ ದಾಖಲೆಗಳು, ಅರ್ಜಿ ಪ್ರಕ್ರಿಯೆ ಹಾಗೂ ಇತರೆ ಮಾರ್ಗಸೂಚಿಗಳ ಮಾಹಿತಿಯನ್ನು ಒದಗಿಸುತ್ತದೆ.
ಚಾರ್ಜಿಂಗ್ ಜಾಲವನ್ನು ವಿಸ್ತರಿಸುವುದು, ಕೈಗೆಟುಕುವ ದರದ ಎಲೆಕ್ಟ್ರಿಕ್ ವಾಹನಗಳನ್ನು ಲಭ್ಯವಾಗುವಂತೆ ಮಾಡುವುದು, ಹಳೆಯ ವಾಹನಗಳ ಸಮಯೋಚಿತ ಸ್ಕ್ರ್ಯಾಪಿಂಗ್ ಖಚಿತಪಡಿಸುವುದು ಹಾಗೂ ನೀತಿಯ ಪರಿಣಾಮಕಾರಿ ಅನುಷ್ಠಾನಕ್ಕೆ ವಾಹನ ತಯಾರಕರು, ಡೀಲರ್ಗಳು, ಸ್ಕ್ರ್ಯಾಪಿಂಗ್ ಕೇಂದ್ರಗಳು, ವಿದ್ಯುತ್ ವಿತರಣಾ ಸಂಸ್ಥೆಗಳು ಸೇರಿದಂತೆ ಎಲ್ಲಾ ಹಿತಾಸಕ್ತಿಪಕ್ಷಗಳು ಸಕ್ರಿಯವಾಗಿ ಸಹಕರಿಸಬೇಕು ಎಂದು ಮುಖ್ಯಮಂತ್ರಿ ಗುಪ್ತಾ ಮನವಿ ಮಾಡಿದರು.
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ 