ಪರಾಜಿತನಾದ ಸಲ್ಯುಕಸ್ ಮತ್ತು ಸೋಲಿಸಲು ನಿಂತ ಮಧ್ಯವರ್ತಿಗಳು
ಪ್ರತೀಯೊಬ್ಬನಿಗೂ ಖಾಸಗಿಯ ಸಂಗತಿಗಳು ಎನ್ನುವದು ಒಂದಷ್ಟು ಇದ್ದೇ ಇರುತ್ತದೆ. ಎಲ್ಲವನ್ನು ಎಲ್ಲರೆದುರು ಹೇಳಿಕೊಳ್ಳಲಾಗದ ಹಲವಾರು ಬೇರೆ ಬೇರೆ ವಿಷಯಗಳು ಇರುತ್ತವೆ. ಅವುಗಳನ್ನು ಹೇಗೆ ಬೇಕೋ ಹಾಗೆ ಹೇಳಿಕೊಂಡಲ್ಲಿ ಅದರ ಪರಿಣಾಮಗಳು ಏನು ಎನ್ನುವ ಕಲ್ಪನೆ ಕೂಡ ಗೊತ್ತಿರುವಂಥದ್ದೆ. ಆದರೂ ಸಹ ಇವರು ನಮ್ಮವರು, ಇವರಿಂದ ನಮಗೆ ಯಾವ ತೊಂದರೆಯಾಗುವುದಿಲ್ಲ ಎನ್ನುವ ವಿಶ್ವಾಸ ಬಂದಲ್ಲಿ ನಮ್ಮ ವಿಚಾರವನ್ನು ಅವರೆದುರು ಹರವಿಕೊಳ್ಳುತ್ತೇವೆ. ನಮ್ಮವರು ಎಂದು ಗುರುತಿಸುವಲ್ಲಿ ಎಡವಿದರೆ ಮಾತ್ರ ಅಪಾಯ ಎದುರಿಸಲೇ ಬೇಕಾಗುತ್ತದೆ. ಕೆಲವಷ್ಟು ನಮ್ಮ ಮಾತುಗಳನ್ನು ಹೇಳಿಕೊಳ್ಳಲೇಬಾರದು. ಮಾತನಾಡದೇ ಕೆಲಸ ಮಾಡಿ ತೋರಿಸು ಅನ್ನುತ್ತಾರಲ್ಲ ಆ ರೀತಿಯಲ್ಲಿ ನಾವು ನಮ್ಮೊಳಗಿನ ಸಂಗತಿಗಳನ್ನು ಅದುಮಿಟ್ಟುಕೊಳ್ಳಬೇಕು. ಯಾವುದೋ ಒಂದು ಕೆಲಸ ಉತ್ಸಾಹದಿಂದ ಇದನ್ನು ಮಾಡಬೇಕು ಅಂದುಕೊಂಡಿದ್ದೇನೆ ಎಂದು ಮನೆಯವರ ಮಂದೆ ಹೇಳಿ ನೋಡಿ. ಅದ್ಯಾಕೆ ಮಾಡಬೇಕು, ಅದರಿಂದ ಲಾಭ ಏನು, ಇರೋ ಕೆಲಸ ಬಿಟ್ಟು ಅಂಥದ್ದೊಂದು ರಗಳೆ ಬೇಕಾ? ಹೀಗೆ ಪ್ರಶ್ನೆಗಳು ಎದುರಾಗುತ್ತದೆ. ಅಲ್ಲಿಗೆ ಮನೆಯವರಿಗೆ ಇಷ್ಟವಿಲ್ಲದ ಕೆಲಸ ಮಾಡಬಾರದು ಎನ್ನುವ ಒಂದು ಯೋಚನೆಯಾದರೆ ನನ್ನಿಂದ ಸಾಧ್ಯವಿಲ್ಲವೇನೋ ಎನ್ನು ಧೋರಣೆಯ ಭಾವ ನಮ್ಮನ್ನು ಮುತ್ತಿಕೊಳ್ಳುತ್ತದೆ.
ಅದೆಷ್ಟೋ ಸಲ ನಾವು ಅರಿಯದೆ ತೀರ ಸರಳ ಸುದ್ದಿ ಎಂದು ಮಾತಾಡಿಬಿಡುತ್ತೇವೆ. ಆದರೆ ಆ ತೀರ ಸರಳ ಅಂದುಕೊಂಡಿದ್ದು ಇನ್ನೊಬ್ಬರ ಬಾಯಲ್ಲಿ ಅದು ತೀರ ಜಟೀಲ ಸುದ್ದಿಯಾಗಿ ಸುತ್ತ ಹರಡಿಕೊಂಡು ಬಿಡುತ್ತದೆ. ನಾವು ಹೇಳಿದ ಮಾತು ಕೇಳಿಸಿಕೊಂಡವನಿಗೆ ಅರ್ಥವಾಗಿರುವುದಿಲ್ಲವೋ ಅಥವಾ ಬೇಕಂತಲೇ ನಮ್ಮ ಮೇಲೆ ಒಂದು ಗುಬ್ಬಚ್ಚಿ ಗೂಡು ಕಟ್ಟಿ ಬಿಡುವ ಹುನ್ನಾರವೋ ಎಂದು ತಿಳಿಯುವಷ್ಟರಲ್ಲಿ ನಮ್ಮನ್ನು ಹತ್ತಿಕ್ಕಿ ಬಿಡಲಾಗುತ್ತದೆ. ಸಮಾಜದಿಂದ ಅವಮಾನ, ಅಪಮಾನಗಳು ಎದುರಿಸಬೇಕಾಗುತ್ತದೆ. ಹಾಗಾಗಿ ಕೆಲವರಿಂದ ಕೆಲವು ವಿಚಾರಗಳ್ನು ತಿಳಿಸದೇ ಅಂತರ ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎನ್ನಿಸುವುದು. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಮಾದ್ಯಮಗಳ ಎದುರು ಬರುವುದೇ ಇಲ್ಲ ಎನ್ನುವ ಆರೋಪವಿದೆ. ಆ ಆರೋಪವೇ ಲೇಸು. ಯಾಕೆಂದರೆ ಇಡೀ ವಿಶ್ವವೇ ಅವರ ಮಾತಿನತ್ತ, ನಡೆಯತ್ತ ಗಮನಿಸುತ್ತಿರುವಾಗ ಇವರು ಮಾಧ್ಯಕ್ಕೆ ಹೇಳಿಕೆ ಕೊಡುವುದೊಂದು ಅದು ಬದಲಾಗಿ ಮತ್ತೇನೋ ಆಗುವುದೊಂದು ದುರಂತವಾಗಲೂಬಹುದು. ನಿನ್ನೆ ಪೇಸ್ಬುಕ್ನಲ್ಲಿ ಪ್ರವೀಣ್ ಕುಮಾರ್ ಮಾವಿನಕಾಡು ಅವರು ಒಂದು ವಿಡಂಬನಾತ್ಮಕವಾಗಿ ಒಂದು ಕಾಲ್ಪನಿಕ ಕಥೆಯನ್ನು ಬರೆದು ಹಾಕಿದ್ದರು. ಅದನ್ನು ಕಂಡಾಗ ಅದೆಷ್ಟೋ ಸಲ ನಮ್ಮ ಮಧ್ಯೆಯೂ ಹೀಗೆ ನಡೆಯುತ್ತದಲ್ಲ ಅನ್ನಿಸಿತ್ತು. ಒಂದು ಬೃಹತ್ ಮಾವಿನ ಹಣ್ಣಿನ ಸಮ್ಮೇಳನ ಏರ್ಪಟ್ಟಿತ್ತು. ಅಲ್ಲಿ ಅಥಿತಿಯಾಗಿ ಆಗಮಿಸಿದ್ದವರು ಮಾತನಾಡಲು ಆರಂಭಿಸಿದರು. ದೇಶದಲ್ಲಿ ಅನೇಕ ಹಣ್ಣುಗಳಿವೆ. ನಮ್ಮ ದೇಶದ ಮಣ್ಣಿನ ವೈವಿಧ್ಯತೆಗಳ ಪ್ರತೀಕವಾಗಿ ಎಲ್ಲ ರೀತಿಯ ಹಣ್ಣನ್ನು ಬೆಳೆಯಬೇಕು. ವಿದೇಶಿ ಹಣ್ಣುಗಳಿಗೆ ಮಾರು ಹೋಗಬಾರದು ನಮ್ಮದೇ ದೇಶದ ಹಣ್ಣು ಒಂದಿರಬೇಕು. ಈ ಹಣ್ಣು ಭಾರತದ ಬಹುತೇಕ ಎಲ್ಲ ಪ್ರದೇಶದಲ್ಲೂ ಬೆಳೆಯುವಂತಿರಬೇಕು. ಈ ವಿಚಾರ ಗಮನದಲ್ಲಿಟ್ಟುಕೊಂಡು ಹಿರಿಯರು ಮಾವಿನ ಹಣ್ಣನ್ನು ಬೆಳೆದರು. ಇದನ್ನು ಹಣ್ಣುಗಳ ರಾಜ ಎಂದು ಕರೆದರು. ಎನ್ನುವಲ್ಲಿಗೆ ಅಥಿತಿ ಭಾಷಣ ಮುಗಿಸುತ್ತಾರೆ. ಮಾರನೇಯ ದಿನ ಪತ್ರಿಕೆಯಲ್ಲಿ ಅಥಿತಿಯವರು ಹೇಳಿದ ಎಲ್ಲ ಹೇಳಿಕೆಯನ್ನು ತಿರುಚಿ ಬರೆಯಲಾಗಿತ್ತು. ದೇಶಕ್ಕೆ ಒಂದೇ ಹಣ್ಣೀರಬೇಕು ಎಂದು ಪ್ರತಿಪಾದಿಸಿದ ಅಥಿತಿ. ಒಂದೇ ದೇಶ ಒಂದೇ ಹಣ್ಣು ಇರಬೇಕು ಎಂದ ಅತಿಥಿ. ಉಳಿದ ಹಣ್ಣುಗಳ ಬೆಳೆ ನಾಶ ಮಾಡಿ ಮಾವು ಬೆಳೆಸಿ. ಹೀಗೆ ವಿವಿಧ ರೀತಿಯಲ್ಲಿ ಪತ್ರಿಕೆಯಲ್ಲಿ ಬಿಂಬಿಸಲಾಯಿತು. ಮಾರನೇಯ ದಿನ ಅದಕ್ಕೆಂದೆ ಚಳುವಳಿಗಳು ಶುರುವಾದವು. ಅಥಿತಿಯ ಹೇಳಿಕೆಗಳೆಲ್ಲವೂ ವಿವಾಧಾತ್ಮಕ ಎಂದು ಟಯರ್ಗಳಿಗೆ ಬೆಂಕಿ ಹಚ್ಚಲಾಯಿತು, ಬಸ್ಸಿಗೆ ಕಲ್ಲು ತೂರಲಾಯಿತು ಇನ್ನು ಏನೇನೋ.
ಅಲ್ಲಿಗೆ ವಿಷಯ ಸ್ಪಷ್ಟವಾಯಿತು. ನಮ್ಮ ಮನದ ಮಾತು ಅಥವಾ ನಿಧರ್ಾರವನ್ನು ನಾವು ಹೇಳಿಕೊಂಡರೆ ಅದು ಅದೇ ರೀತಿಯಲ್ಲಿ ಪ್ರಸಾರವಾಗುತ್ತದೆ ಎಂದು ತಿಳಿಯುವುದು ಮೂರ್ಖತನ. ಅದರಲ್ಲೂ ಒಂದು ವಿವಾದ ಸೃಷ್ಟಿಸಿ ದೇಶದಲ್ಲಿ, ರಾಜ್ಯದಲ್ಲಿ, ಅಥವಾ ಕುಟುಂಬದಲ್ಲಿ ಬಿರುಕು ಮೂಡಿಸಲೆಂದೆ ಒಂದಷ್ಟು ಜನ ಕಾದಿರುವುದು ಗೊತ್ತೆ ಇದೆ. ಅಂಥವರ ಎದುರು ನಮಗೇನು ತಿಳಿದಿಲ್ಲ ಎಂದು ದಾಟಿ ಹೋಗುವುದೇ ಸುಲಭ ಎನ್ನಿಸುತ್ತದೆ. ಹಾಗೆಂದ ಮಾತ್ರಕ್ಕೆ ಸತ್ಯವನ್ನು ಉಚ್ಛರಿಸದೇ ಕೂರಲು ಸಾಧ್ಯವಿಲ್ಲ. ಸತ್ಯವನ್ನು ಹೊರಗೆ ಹಾಕಲೇ ಬೇಕು. ಅದಕ್ಕೆ ಕಂಡಕಂಡಲ್ಲಿ ಹರವಿಕೊಂಡು ಕೂರಬೇಕಿಲ್ಲ. ಯಾವ ಜಾಗದಲ್ಲಿ ನಮ್ಮ ಮಾತಿಗೆ ಸಮ್ಮತ ಸಿಗುತ್ತದೆಯೋ, ಅದರಿಂದ ಕನಿಷ್ಟ ಜನರಿಗಾದರೂ ಒಳ್ಳೆಯ ಪರಿಣಾಮ ಬೀರುತ್ತದೆ ಅನ್ನಿಸುತ್ತದೆಯೋ ಅಲ್ಲಿ ಪ್ರಸ್ಥಾಪಿಸಬೇಕು. ನಮ್ಮ ಬಗ್ಗೆ ಕುತಂತ್ರ ಮಾಡುವ ಎದುರಾಳಿಗೆ ಉತ್ತರ ಕೊಡದೇ ಹೋದರೂ ಅದು ತಪ್ಪಾಗುವುದು. ಒಂದು ಭೀತಿಯನ್ನು ಹುಟ್ಟಿಸಲೇ ಬೇಕು. 'ಭಯ ಬೀನ ಹೋಯ ನ ಪ್ರೀತ್' ಅಂತ ಒಂದು ಮಾತಿದೆ. ಅಂದರೆ ಭೀತಿ ಇಲ್ಲದೆ ಪ್ರೀತಿ ಇಲ್ಲ ಅಂತ. ಒಂದು ಮಗುವಿಗೆ ನಾವು ತಪ್ಪು ಮಾಡಿದಾಗ ಶಿಕ್ಷೆಯನ್ನು ಕೊಡುತ್ತೇವೆ. ಆ ತಪ್ಪಿನ ಅರಿವು ಮಗುವಿಗೆ ಆಗುತ್ತಿದ್ದಂತೆ ಪ್ರೀತಿಯನ್ನು ಮಾಡುತ್ತೇವೆ. ತಪ್ಪಿಗೆ ಶಿಕ್ಷೆಯಾಗುತ್ತದೆ ಎಂದು ಗೊತ್ತಾದಾಗ ನಾವು ಯಾಕೆ ಶಿಕ್ಷೆ ಕೊಟ್ಟಿದ್ದೆವು ಎನ್ನುವದು ತಿಳಿದುಕೊಂಡು ಮಗು ನಮ್ಮನ್ನು ತಪ್ಪಾಗಿ ಅಥರ್ೈಸಿಕೊಳ್ಳುವುದಿಲ್ಲ. ಅಲ್ಲದೇ ಆ ತಪ್ಪನ್ನು ಮತ್ತೆಂದು ತನ್ನ ಜೀವನದಲ್ಲಿ ಮಾಡುವುದಿಲ್ಲ. ಅದರಿಂದ ಭವಿಷ್ಯದಲ್ಲಿ ಉಜ್ವಲತೆ ಕಂಡುಕೊಂಡಾಗ ಆ ಪ್ರೀತಿಯು ಅಗಾಧವಾಗುತ್ತದೆ.
ಅಲೆಕ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಬಂದಾಗ ಭಾರತವು ಒಂದೊಂದು ಪ್ರಾಂತ್ಯವಾಗಿ ಸ್ವತಂತ್ರವಾಗಿ ತಮ್ಮ ರಾಜ್ಯವನ್ನು ಆಳ್ವಿಕೆ ಮಾಡಿಕೊಂಡಿದ್ದರು. ಆದ್ದರಿಂದ ಅಲೆಕ್ಸಾಂಡರ್ ನಮ್ಮ ದೇಶದ ಹಲವು ಭಾಗವನ್ನು ತನ್ನದಾಗಿಸಿಕೊಳ್ಳಲು ಅನುಕೂಲವಾಯ್ತು. ಆದರೂ ಭಾರತದ ರಾಜರುಗಳ ಪ್ರತೀರೋಧ ಎಷ್ಟಿತ್ತು ಎಂದರೆ ಈ ಯುದ್ಧವು ಸಾಕು ನಾವು ತಿರುಗಿ ನಮ್ಮ ಗ್ರೀಕ್ ದೇಶಕ್ಕೆ ಹೋಗೋಣವೆಂದು ಸೈನಿಕ ಪಾಳ್ಯಯು ಅಲೆಕ್ಸಾಂಡರ್ನ ಬಳಿ ಕೇಳಿಕೊಂಡಿತ್ತು. ಒಪ್ಪದಿದ್ದಾಗ ಅಸಮಧಾನವನ್ನು ಹೊರ ಹಾಕಿತ್ತು. ದುರ್ಬಲರಾಗುತ್ತಿರುವ ಸೈನ್ಯವನ್ನು ಇಟ್ಟುಕೊಂಡು ಇನ್ನು ಮುಂದಿನ ಭಾರತವನ್ನು ಎದುರಿಸಲು ಸಾಧ್ಯವಿಲ್ಲ ಎಂದು ತನ್ನ ದೇಶಕ್ಕೆ ಮರಳಿದ್ದ ಅಲೆಕ್ಸಾಂಡರ್. ಆನಂತರ ತನ್ನ ಪ್ರಧಾನ ಸೇನಾನಾಯಕ ಸೆಲ್ಯುಕಸ್ನನ್ನು ಕಳಿಸುತ್ತಾನೆ. ಅವನು ತನ್ನ ಸೈನ್ಯವನ್ನು ಕರೆದುಕೊಂಡು ಬರುವಷ್ಟರಲ್ಲಿ ಚಂದ್ರಗುಪ್ತ ಅಧಿಕಾರಕ್ಕೆ ಬಂದು ತನ್ನ ಸುತ್ತಮುತ್ತಲಿನ ಎಲ್ಲ ಪ್ರಾಂತ್ಯಗಳನ್ನು ಒಗ್ಗೂಡಿಸಿಕೊಂಡು ದೊಡ್ಡ ಸೇನೆಯನ್ನು ರಚಿಸಿ ಗಡಿಗಳಿಗೆ ನಿಲ್ಲಿಸಿರುತ್ತಾನೆ. ಆದರೂ ಸಲ್ಯುಕಸ್ ಯುದ್ಧಕ್ಕೆ ನಿಲ್ಲುತ್ತಾನೆ. ಆದರೆ ಒಗ್ಗಟ್ಟಿನ ಪ್ರದರ್ಶನ ಮತ್ತು ಚಾಣುಕ್ಯನ ರಾಜನೀತಿಗಳು ಸೇರಿ ಸೆಲ್ಯುಕಸ್ ಮಣಿಯುತ್ತಾನೆ. ಗಾಂಧಾರದಿಂದ ಹಿಂದುಕುಷ್ನ ಎಲ್ಲ ಪ್ರಾಂತ್ಯಗಳು ಭಾರತಕ್ಕೆ ಸೇರಿದ್ದವು. ಅದನ್ನು ಅಲೆಕ್ಸಾಂಡರ್ ವಶ ಪಡೆಸಿಕೊಂಡ. ಅದೆಲ್ಲವನ್ನು ಮರಳಿ ಕೊಡಬೇಕು. ನಿಮಗೆ ಯಾವ ಹಕ್ಕೂ ಇಲ್ಲ. ಅಷ್ಟದರೆ ಮಾತ್ರ ಶಾಂತಿ ನೆಲೆಸುತ್ತದೆ ಎಂದು ದೃಢವಾಗಿ ಪ್ರತಿಪಾದಿಸುತ್ತಾನೆ. ಸೋತಿದ್ದ ಸೆಲ್ಯುಕಸ್ ಬೇರೆ ದಾರಿಕಾಣದೆ ಚಂದ್ರಗುಪ್ತನ ಎಲ್ಲ ಮಾತಿಗೂ ಒಪ್ಪುತ್ತಾನೆ. ಕತ್ತಿ ಹಿಡಿದು ಎದೆಯುಬ್ಬಿಸಿ ಭಾರತಕ್ಕೆ ಬಂದ ಗ್ರೀಕ್ ವೀರರು ಕತ್ತಿ ಬದಿಗಿಟ್ಟು ತಲೆ ತಗ್ಗಿಸಿ ಸೋತು ಹೋದರು. ಈ ಭಾಗವನ್ನು ಕಂಡಾಗ ನಮಗೆ ತಿಳಿಯುವುದು ಎದುರಾಳಿಗೆ ಭೀತಿ ಹುಟ್ಟದರೆ ಎಲ್ಲಿಲ್ಲದ ಪ್ರೀತಿ ಉಕ್ಕುತ್ತದೆ. ಸೆಲ್ಯುಕಸ್ ಬಂದಾಗಲೇ ಚಂದ್ರಗುಪ್ತ ಶಾಂತಿ ಮಂತ್ರ ಹೇಳಿದ್ದರೆ ಭಾರತೀಯರು ಹೇಡಿಗಳು, ಸೋಲುತ್ತೇವೆ ಎನ್ನುವ ಭಯ ಇರುವವರು, ನಿಶ್ಯಕ್ತರು ಎಂದು ಜಗತ್ತಿಗೆ ಹಬ್ಬಿಸಿಬಿಡುತ್ತಿದ್ದರು. ಆದರೆ ಮೊದಲೊಂದು ಭೀತಿ ಹುಟ್ಟಿಸಿ ನಂತರ ಮಾತಿಗೆ ನಿಂತಾಗ ಎದುರಾಳಿ ಬಗ್ಗುತ್ತಾನೆ. ನಮ್ಮ ತಂಟೆಯನ್ನು ಬಿಟ್ಟು ದೂರ ಸರಿಯುತ್ತಾರೆ. ಮಾತು ಬಲಿಷ್ಟವಾಗುವುದರ ಜೊತೆ ಕೃತಿಯೂ ನಮ್ಮನ್ನು ಬಿಂಬಿಸಿಕೊಳ್ಳುತ್ತದೆ. ಇಲ್ಲವಾದಲ್ಲಿ ನಮ್ಮ ಮಾತುಗಳು ಇನ್ನೊಂದು ವಿಕೃತ ರೂಪ ತಾಳಿ ಸಮಾಜದತ್ತ ನಡೆದುಬಿಡುತ್ತದೆ. ಮಾವಿನ ಹಣ್ಣಿನ ಕುಚೋದ್ಯದ ಸಂಗತಿಗಳು ಈಗ ಎಲ್ಲೆಲ್ಲಿಯೂ ನಡೆಯುತ್ತಿದೆ. ವಾತರ್ೆಗಳ ಹೆಸರಲ್ಲಿ ಬೇಕಾಬಿಟ್ಟಿ ಸುದ್ದಿ ಪ್ರಸಾರವಾಗಿ ನೈಜ ಸಂಗತಿಗಳು ಮುಚ್ಚಿ ಹೋಗುತ್ತಿರುವುದು ದುರಂತ. ಕಂಡಕಂಡಲ್ಲಿ ನಮ್ಮನ್ನು ಹರಿಬಿಡುವುದಕ್ಕಿಂತ, ನಮ್ಮ ಯೋಚನೆಗಳು ಸತ್ಯವಾಗಿರಲಿ, ಸ್ಪಷ್ಟವಾಗಿರಲಿ. ಆ ಸ್ಪಷ್ಟತೆಯ ಸತ್ಯ ಯಾವ ರೂಪದಲ್ಲಿ ಹೊರಗೆ ಬರಬೇಕು ಎನ್ನುವ ಕಲ್ಪನೆಯೂ ಕೂಡ ಅಷ್ಟೆ ಸ್ಪಷ್ಟವಾಗಿರಲಿ.