ಜಗಜ್ಯೋತಿ ಬಸವೇಶ್ವರ ಮೂರ್ತಿ ಲೋಕಾರ್ಪಣೆ
ಲೋಕದರ್ಶನ ವರದಿ
ತಾಳಿಕೋಟಿ 12: ಸುಮಾರು 70 ಲಕ್ಷ ವೆಚ್ಚದಲ್ಲಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಸವಭಕ್ತರ ಆಶಯದಂತೆ ನೂತನವಾಗಿ ನಿರ್ಮಾಣಗೊಂಡಿರುವ ಜಗದ್ಗುರು ಬಸವೇಶ್ವರರ ಮೂರ್ತಿಯನ್ನು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಅಮೃತ ಹಸ್ತದಿಂದ ಲೋಕಾರೆ್ಣಗೊಂಡಿತು.
ಪಟ್ಟಣದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಅವರು ಬಸವೇಶ್ವರರ ಅಶ್ವಾರೂಢ ಮೂರ್ತಿಯನ್ನು ಹರ, ಚರ, ಗುರುಮೂರ್ತಿಗಳ ಸಾನಿಧ್ಯದಲ್ಲಿ ಲೋಕಾರೆ್ಣಗೊಳಿಸಿದರು.
ನಂತರ ಮಾತನಾಡಿದ ಅವರು ಬಿಜೆಪಿ ಪಕ್ಷವು ಬಸವಣ್ಣನವರು ಹಾಕಿಕೊಟ್ಟ ಪ್ರಜಾಪ್ರಭುತ್ವದ ಮಾದರಿಯಲ್ಲಿ ಮುನ್ನಡೆಯುವ ಪಕ್ಷವಾಗಿದೆ. ನಾವು ಸಾಮಾಜಿಕ ನ್ಯಾಯದಡಿಯಲ್ಲಿ ಎಲ್ಲ ವರ್ಗದವರಿಗೂ ನ್ಯಾಯ ಕೊಡುವ ಕೆಲಸ ಮಾಡುತ್ತಿದ್ದೇವೆ. ಮಾನ್ಯ ಪ್ರಧಾನ ಮಂತ್ರಿಗಳು ಲಂಡನ್ನಲ್ಲಿ ಬಸವೇಶ್ವರರ ಮೂರ್ತಿ ಉದ್ಘಾಟಿಸಿ ದೇಶದ ಹೆಸರನ್ನು ವಿಶ್ವ ಮಟ್ಟದಲ್ಲಿ ಬೆಳೆಯುವಂತೆ ಮಾಡಿದ್ದಾರೆ. ಬಸವಣ್ಣನವರ ಆದರ್ಶಗಳು ನಮಗೆಲ್ಲರಿಗೂ ಮಾದರಿಯಾಗಬೇಕು. ಈ ಮಹಾನ್ ಕಾರ್ಯ ಮಾಡಿದ ಇಲ್ಲಿಯ ಶಾಸಕರಾದ ಎ.ಎಸ್. ಪಾಟೀಲ (ನಡಹಳ್ಳಿ) ಅವರನ್ನು ನಾನು ವಿಶೇಷವಾಗಿ ಅಭಿನಂದಿಸುತ್ತೇನೆ ಎಂದರು.
ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಚಬನೂರಿನ ಜೋತಿಷ್ಯರತ್ನ ಬೇಡಜಂಗಮ ಸಮಾಜದ ತಾಲೂಕಾ ಗೌರವ ಅಧ್ಯಕ್ಷ ರಾಮಲಿಂಗಯ್ಯ ಮಹಾಸ್ವಾಮಿಗಳು, ಕೊಡೇಕಲ್ಲದ ಶಿವಕುಮಾರ ಮಹಾಸ್ವಾಮಿಗಳು, ನಾವದಗಿಯ ರಾಜೇಂದ್ರ ಒಡೆಯರ್ ಮಹಾಸ್ವಾಮಿಗಳು, ನೀರಾವರಿ ಸಚಿವ ಗೋವಿಂದ ಕಾರಜೋಳ, ಕೈಗಾರಿಕಾ ಸಚಿವ ಮುರಗೇಶ ನಿರಾಣಿ, ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ), ಜಿಲ್ಲಾ ಅಧ್ಯಕ್ಷ ಆರ್.ಎಸ್. ಪಾಟೀಲ, ಪುರಸಭೆ ಅಧ್ಯಕ್ಷ ಸಂಗಮೇಶ ಇಂಗಳಗಿ, ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಾಂತೇಶ ಮುರಾಳ ಹಾಗೂ ಹಲವಾರು ಸಂಘ ಸಂಸ್ಥೆಗಳ ಮುಖ್ಯಸ್ಥರು ಇದ್ದರು.