ಹೊಸಪೇಟೆ

ಸರಳ, ಅರ್ಥಪೂರ್ಣವಾಗಿ ಸ್ವಾತಂತ್ರ್ಯ ದಿನ ಆಚರಿಸಲು ತೀರ್ಮಾನ

ಸರಳ, ಅರ್ಥಪೂರ್ಣವಾಗಿ ಸ್ವಾತಂತ್ರ್ಯ ದಿನ ಆಚರಿಸಲು ತೀರ್ಮಾನ

ಹೊಸಪೇಟೆ(ವಿಜಯನಗರ) 04: ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಿಕೊಂಡು ಆ.15ರಂದು ಸರಳವಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸಲು ಹೊಸಪೇಟೆ ಸಹಾಯಕ ಆಯುಕ್ತ ಸಿದ್ದರಾಮೇಶ್ವರ ಅಧ್ಯಕ್ಷತೆಯಲ್ಲಿ ಬುಧವಾರ ಪತ್ರಿಕಾಭವನದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. 

ಕೋವಿಡ್‌-19 ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಕೋವಿಡ್ ಮಾರ್ಗಸೂಚಿಗಳನ್ನು ನಿಯಮಾನುಸಾರ ಅನುಸರಿಸಿಕೊಂಡು ಸ್ವಾತಂತ್ರ್ಯ ದಿನ ಆಚರಿಸಲಾಗುತ್ತಿದ್ದು,ಇದಕ್ಕೆ ಬೇಕಾದ ಎಲ್ಲ ರೀತಿಯ ಸಿದ್ಧತೆಗಳನ್ನು ಅಧಿಕಾರಿಗಳು ಮಾಡಬೇಕು ಎಂದು ಸಹಾಯಕ ಆಯುಕ್ತ ಸಿದ್ದರಾಮೇಶ್ವರ ಅವರು ಸೂಚಿಸಿದರು. 

ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಸ್ಯಾನಿಟೈಸೇಷನ್, ಮಾಸ್ಕ್‌ ಹಾಗೂ ಎಲ್ಲಾ ಪ್ರದೇಶಗಳಲ್ಲಿ ಕೋವಿಡ್ ನಿಯಾಮವಳಿಗಳನ್ನು ಪಾಲಿಸಲು ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. 

ಧ್ವಜಾರೋಹಣ ದಿನ ಕಚೇರಿಯನ್ನು ಸ್ಯಾನಿಟೈಸೇಷನ್ ಜೊತೆಗೆ ಪ್ರತಿಯೊಬ್ಬರನ್ನು ಥರ್ಮಲ್ ಸ್ಕ್ಯಾನಿಂಗ್ ಒಳಪಡಿಸಬೇಕು. ಇಲಾಖಾ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಬೆಳಗ್ಗೆ 7.15 ಗಂಟೆಗೆ ಧ್ವಜಾರೋಹಣ ನೇರವೇರಿಸಿ ನಂತರ 9 ಗಂಟೆಗೆ ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು. 

ಪ್ರತಿ ಬಾರಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಹಂಪಿ ವಿರೂಪಾಕ್ಷ ದೇವಸ್ಥಾನದಿಂದ ಪಾದಯಾತ್ರೆ ಮೂಲಕ ಕ್ರೀಡಾಂಗಣಕ್ಕೆ ಜ್ಯೋತಿ ತರುವ ಪದ್ಧತಿ ಇತ್ತು. ಕೊರೋನಾದಿಂದಾಗಿ ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲಿಸಿ ಹೊಸಪೇಟೆಯ ವಡಕರಾಯನ ದೇವಸ್ಥಾನದಿಂದ ಕೇವಲ 5  ಜನ ಮಾತ್ರ ಸ್ವಾತಂತ್ರ್ಯ ಜ್ಯೋತಿಯನ್ನು ಕ್ರೀಡಾಂಗಣಕ್ಕೆ ತರುವ ಮೂಲಕ ಸಂಪ್ರದಾಯ ಮುಂದುವರೆಸಿ ಎಂದು ಸಭೆಗೆ ಆಗಮಿಸಿದ್ದ ಸ್ಪೂರ್ತಿ ವೇದಿಕೆಯ ಸದಸ್ಯರಿಗೆ ಹೇಳಿದರು.  

ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಶಾಲಾ ಮಕ್ಕಳನ್ನು ಕಾರ್ಯಕ್ರಮಕ್ಕೆ ತರಲಾಗುವುದಿಲ್ಲ. ಪೊಲೀಸ್, ಎನ್‌.ಸಿ.ಸಿ ಹಾಗೂ ಸ್ಕೌಟ್ಸ್‌ ಮತ್ತು ಗೈಡ್ಸ್‌ ಪರೇಡ್ ನಡೆಸಲಾಗುತ್ತದೆ. ಪರೇಡ್‌ನಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಎರಡೂ ಡೋಸ್ ಕೊವಿಡ್ ಲಸಿಕೆ ಪಡೆದಿರಬೇಕು ಎಂದು ಹೇಳಿದರು.  

ಹೊಸಪೇಟೆ ತಹಸೀಲ್ದಾರ್ ಹೆಚ್‌.ವಿಶ್ವನಾಥ್ ಮಾತನಾಡಿದರು. 

ಈ ಸಂದರ್ಭದಲ್ಲಿ ನಗರಸಭೆಯ ಪೌರಯುಕ್ತರರಾದ ಮನ್ಸೂರ್ ಅಲಿ, ಬಿಇಒ ಸುನಂದಾ, ಹೊಸಪೇಟೆ ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ, ಹಂಪಿ ಪಿಎಸ್‌ಐ ದೊಡ್ಡಣ್ಣ, ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಯಾದ ವಿಶ್ವನಾಥ್, ಶಿರಸ್ತೇದಾರರಾದ ಶ್ರೀಧರ್, ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಇತರರು ಇದ್ದರು. 


ಸುದ್ದಿ ಓದಿ