ಬೆಳೆ ವಿಮೆ ನೋಂದಣಿಗೆ ಡಿ.30, ಕೊನೆ ದಿನಾಂಕ
ಸಿಂದಗಿ 27: 2023-24ನೇ ಸಾಲಿನ ಹಿಂಗಾರು ಮತ್ತು ಬೆಸಿಗೆಯ ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಅನುಷ್ಠಾನಗೊಳಿಸಲು ಸರಕಾರ ಅನುಮೋದನೆ ನೀಡಿದೆ. ಅದರಂತೆ ಹಿಂಗಾರು ಹಂಗಾಮಿನ ಅಧಿಸೂಚಿತ ಬೆಳೆ ಕಡಲೆ (ನೀರಾವರಿ) ಮತ್ತು ಕಡಲೆ (ಮಳೆ ಆಶ್ರಿತ) ಬೆಳೆಯನ್ನು ಬೆಳೆಯುವ ರೈತರು ಈ ಯೋಜನೆಯಲ್ಲಿ ಪಾಲ್ಗೊಳ್ಳ ಬಹುದಾಗಿದೆ. ಬೆಳೆ ನೊಂದಣಿ ಕೊನೆ ದಿನಾಂಕ ಡಿ.30ರ ಆಗಿರುತ್ತದೆ. ಆದ್ದರಿಂದ ರೈತರು ಬೆಳೆ ನೊಂದಿ ಮಾಡಿಸಿ ಬೆಳೆ ವಿಮೆಯ ಪ್ರಯೋಜನ ಪಡೆಯಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ಎಚ್.ವಾಯ್. ಸಿಂಗೆಗೋಳ ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮಂಗಳವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ನಿಗದಿತ ಡಿ.30ರ ಅವಧಿಯೊಳಗೆ ರೈತರು ನೊಂದಾಯಿಸಿಕೊಳ್ಳಲು ರೈತರು ಅರ್ಜಿಯೊಂದಿಗೆ ಭೂಮಿ ದಾಖಲೆಗಳಾದ ಪಹಣಿ/ಕಂದಾಯ ರಶೀತಿ/ಖಾತೆ ಪುಸ್ತಕ/ಬ್ಯಾಂಕ್ ಪಾಸ್ ಪುಸ್ತಕ ಮತ್ತು ಆದಾರ್ ಕಾರ್ಡ್ ದಾಖಲೆಗಳೊಂದಿಗೆ ಹತ್ತಿರದ ಬ್ಯಾಂಕ್, ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಬೆಳೆ ವಿಮೆಗೆ ನೊಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.