ರಾಣೆಬೆನ್ನೂರ

ಯುದ್ಧದಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಸಾವು ನೋವು ತಂದಿದೆ: ಯಡಿಯೂರಪ್ಪ

ಯುದ್ಧದಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಸಾವು ನೋವು ತಂದಿದೆ: ಯಡಿಯೂರಪ್ಪ

ರಾಣೇಬೆನ್ನೂರ 06:  ಉಕ್ರೇನ್ ಹಾಗೂ ರಷ್ಯಾದ ಮಧ್ಯೆ ನಡೆಯುತ್ತಿರುವವ ಯುದ್ಧದಲ್ಲಿ ನವೀನ್ ಗ್ಯಾನಗೌಡ್ರ ಎಂಬ ವೈದ್ಯಕೀಯ ವಿದ್ಯಾರ್ಥಿಯ ಸಾವು ತುಂಬಾ ನೋವು ತಂದಿದೆ. ಇಂತಹ ಪ್ರತಿಭಾವಂತ ವಿದ್ಯಾರ್ಥಿ ಬಲಿಯಾಗಿರುವುದರಿಂದ ಇಡೀ ರಾಜ್ಯವೇ ಶೋಕಸಾಗರದಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರ​‍್ಪ ಹೇಳಿದರು. 

ಇತ್ತಿಚೆಗೆ ಮೃತ ನವೀನ್‌ನ ಸ್ವಗ್ರಾಮವಾದ ರಾಣೇಬೆನ್ನೂರ ತಾಲೂಕಿನ ಚಳಗೇರಿ ಗ್ರಾಮಕ್ಕೆ ಭೇಟಿ ನೀಡಿ ಮೃತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನವೀನ್ ಆತ್ಮಕ್ಕೆ ಶಾಂತಿ ಕೋರುವೆ. ಇಂತಹ ಘಟನೆ ನಡೆಯಬಾರದಿತ್ತು, ಅನೀರೀಕ್ಷಿತವಾಗಿ ಈ ದುರ್ಘಟನೆ ನಡೆದಿದೆ. ಆತನ ತಂದೆ ತಾಯಿಗಳಿಗೆ ಹಾಗೂ ಕುಟುಂಬಸ್ಥರಿಗೆ ದೇವರು ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಸಾಂತ್ವನ ಹೇಳಿರುವೆ. ಆತನ ಮೃತದೇಹವನ್ನು ತರೆಸಿ ಅದರ ಜೊತೆಗೆ ಬರಬೇಕು ಅಂದುಕೊಂಡಿದ್ದೆ ಆದರೂ ಮೃತದೇಹವನ್ನು ತರೆಸಲು ಸಮಸ್ಯೆಯಾಗುತ್ತಿದೆ ಎಂದರು. 

ವಿಶೇಷ ವಿಮಾನದಲ್ಲಿ ಡೆಡ್ ಬಾಡಿ ತರಿಸಲು ಚಿಂತನೆ ನಡೆದಿದೆ, ಪ್ರಧಾನಿ ಜೊತೆ ನಾನು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ಬಗ್ಗೆ ಮಾತನಾಡಿದ್ದೇವೆ. ಮಗನನ್ನಂತೂ ನೋಡಲಿಲ್ಲ, ಆದರೆ ಮಗನ ಪಾರ್ಥಿವ ಶರೀರದ ಮುಖ ನೋಡಬೇಕು ಆತನ ಡೆಡ್ ಬಾಡಿ ತರಿಸಿ ಎಂದು ಮೃತ ನವೀನ್‌ರ ಪೋಷಕರು ಹೇಳಿದ್ದಾರೆ. ಆದಷ್ಟು ಬೇಗ ನವೀನ್ ಅವರ ಡೆಡ್ ಬಾಡಿಯನ್ನು ತಂದು ಉಳಿದ ಕಾರ್ಯಗಳಿಗೆ ಅವಕಾಶ ಮಾಡಿಕೊಡಬೇಕಾದದ್ದು ಕೇಂದ್ರ ಹಾಗೂ ರಾಜ್ಯ ಸರಕಾರದ ಕರ್ತವ್ಯವಾಗಿದೆ ಎಂದರು. 

ಯುದ್ಧದ ಗಂಭೀರತೆ ಅಲ್ಲಿ ಜಾಸ್ತಿ ಇರುವುದರಿಂದ ತಕ್ಷಣ ಡೆಡ್ ಬಾಡಿ ತರೋದು ಸಮಸ್ಯೆಯಾಗ್ತಿದೆ. ಸ್ವತಃ ಪ್ರಧಾನಿ ಮೋದಿಜಿಯವರೆ ಡೆಡ್‌ಬಾಡಿ ತರಲು ಚಿಂತನೆ ನಡೆಸಿದ್ದಾರೆ. ಉಕ್ರೇನ್ ಜೊತೆ ಪ್ರಧಾನಿಯವರೇ ಹೆಚ್ಚು ಸಂಪರ್ಕದಲ್ಲಿದ್ದಾರೆ ಆದಷ್ಟು ಬೇಗನೆ ನವೀನ್‌ನ ಮೃತದೇಹವನ್ನು ತರುವ ಪ್ರಾಮಾಣಿಕ ಪ್ರಯತ್ನವನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಮಾಡುತ್ತಿವೆ ಎಂದರು. 

ಮೃತ ನವೀನ್ ಅವರ ಕುಟುಂಬಕ್ಕೆ ಸರಕಾರದಿಂದ 25 ಲಕ್ಷ ರೂ ಪರಿಹಾರ ನೀಡಲಾಗುವುದು. ಈ ಬಗ್ಗೆ ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅಧಿಕೃತವಾಗಿ ಘೋಷಣೆ ಮಾಡುತ್ತಾರೆ ಎಂದರು. ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ, ಶಾಸಕ ಅರುಣಕುಮಾರ ಪೂಜಾರ,ಭಾರತಿ ಜಂಬಗಿ ಸೇರಿದಂತೆ ಮತ್ತಿತರರು ಇದ್ದರು. 


ಸುದ್ದಿ ಓದಿ