ಕಾಗವಾಡ

ಉಗಾರ ಹೆಸ್ಕಾಂ ಕಚೇರಿಯಲ್ಲೇ ಹಗಲು ದರೋಡೆ: ಲಂಚ ಪಡೆಯುತ್ತಿದ್ದಾಗ ಸಿಕ್ಕಿ ಬಿದ್ದ ಎಇಇ

ಉಗಾರ ಹೆಸ್ಕಾಂ ಕಚೇರಿಯಲ್ಲೇ ಹಗಲು ದರೋಡೆ: ಲಂಚ ಪಡೆಯುತ್ತಿದ್ದಾಗ ಸಿಕ್ಕಿ ಬಿದ್ದ ಎಇಇ

ಕಾಗವಾಡ, 02 ; ಕೈಯಲ್ಲಿ ಗರಿ ಗರಿ ನೋಟು ಹಿಡಿದು ಹೀಗೆ ಪಾಂಡಿತ್ಯ ಬಿಗಿಯುವ ಈತನ ಹೆಸರು ದುರ್ಯೋಧನ ಮಾಳಿ, ಈತ ಓರ್ವ ಸರ್ಕಾರಿ ಅಧಿಕಾರಿಯಾಗಿದ್ದರೂ ರೈತರಿಂದ ವಿದ್ಯುತ್ ಪರಿವರ್ತಕ ಅಳವಡಿಕೆ ವಿಚಾರದಲ್ಲಿ ಹಣ ವಸೂಲಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. 

ತಾಲೂಕಿನ ಉಗಾರ ಖುರ್ದ ಪಟ್ಟಣದ ಹೆಸ್ಕಾಂ ಉಪವಿಭಾಗದ ಎಇಇ ಆಗಿ ಕಾರ್ಯ ನಿರ್ವಹಿಸುತ್ತಿರುವ ದುರ್ಯೋಧನ ಮಾಳಿ ರೈತರಿಂದ ಮತ್ತು ವಿದ್ಯುತ್ ಗುತ್ತಿಗೆದಾರರಿಂದ ಅಕ್ರಮ-ಸಕ್ರಮ ವಿದ್ಯುತ್ ಪರಿವರ್ತಕಗಳ ಅಳವಡಿಕೆಗೆ ಸಂಬಂಧಿಸಿದಂತೆ ನೇರವಾಗಿ ಹಣ ವಸೂಲಿ ಮಾಡುತ್ತಿರುವಾಗ ರೈತರು ಮತ್ತು ಗುತ್ತಿಗೆದಾರರು ವ್ಹಿಡಿಓ ರಿಕಾರ್ಡ ಮಾಡಿ, ಸಾಮಾಜಿಕ ಜಾಲತಾನಗಳಲ್ಲಿ ಹರಿಬಿಟ್ಟಿದ್ದಾರೆ. ಈಗಾಗಲೇ ಈ ಅಧಿಕಾರಿಯ ಕಿರುಕುಳಕ್ಕೆ ಬೇಸತ್ತ ರೈತರು ಸ್ಥಳೀಯ ಜನಪ್ರತಿನಿಧಿಗಳಿಗೆ ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಪ್ರಯೋಜನವಾಗಿಲ್ಲ. ಆದ್ದರಿಂದ ರೊಚ್ಚಿಗೆದ್ದ ರೈತರು ಹಾಗೂ ಗುತ್ತಿಗೆದಾರರು ವ್ಹಿಡಿಓ ಮಾಡುವ ಮೂಲಕ ತಮ್ಮ ಹೆಸರನ್ನು ಬಹಿರಂಗ ಪಡಿಸದೇ ವೈರಲ್ ಮಾಡಿದ್ದಾರೆ. 

ರೈತರಿಂದ ಹಣ ವಸೂಲಿ ಮಾಡುತ್ತಿರುವುದಕ್ಕೆ ಸಂಬಂಧಿಸಿದ ಸಾಕ್ಷಿ ಸಮೇತದ ವಿಡಿಯೋ ಹೊರಬಿದ್ದಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಕಚೇರಿಯ ಯಾವುದೇ ಕೆಲಸ ಮಾಡಿಸಿ ಕೊಳ್ಳಬೇಕಾದರೂ ಈತನ ಕೈ ಬಿಸಿ ಮಾಡಲೇಬೇಕೆಂದು ಅಧಿಕಾರಿಯ ಅಸಭ್ಯ ವರ್ತನೆಯ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಈ ಘಟನೆಯ ಹಿನ್ನೆಲೆಯಲ್ಲಿ ಶಾಸಕ ರಾಜು ಕಾಗೆ, ಹುಬ್ಬಳ್ಳಿ ಹೆಸ್ಕಾಂ ಅಧಿಕಾರಿಗಳಿಗೆ ಪತ್ರ ಬರೆದು, ಅಧಿಕಾರಿಯನ್ನು ತಕ್ಷಣ ವರ್ಗಾವಣೆ ಮಾಡುವಂತೆ ಒತ್ತಾಯಿಸಿದ್ದಾರೆ. ಇದೇ ವೇಳೆ ಕಿತ್ತೂರು ಕರ್ನಾಟಕ ಸೇನೆ ಸೇರಿದಂತೆ ಕನ್ನಡಪರ ಸಂಘಟನೆಗಳು ಅಧಿಕಾರಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. 

ಭ್ರಷ್ಟ ಅಧಿಕಾರಿಯನ್ನು ಕೆಲಸದಿಂದಲೇ ಕೂಡಲೇ ವಜಾ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಕಿತ್ತೂರು ಕರ್ನಾಟಕ ಸೇನೆಯ ಕಾರ್ಯಕರ್ತ ಶಿವಾನಂದ ನವಿನಾಳೆ ಎಚ್ಚರಿಕೆ ನೀಡಿದ್ದಾರೆ. 


ಸುದ್ದಿ ಓದಿ